Wednesday, January 22, 2025
ಸುದ್ದಿ

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಗಾಂಧೀಜಯಂತಿಯ ಪ್ರಯುಕ್ತ “ಸರ್ವ ಧರ್ಮ ಅರಿವು” ಕಾರ್ಯಕ್ರಮ – ಕಹಳೆ ನ್ಯೂಸ್

ಭರತ ಭೂಮಿ ಒಂದು ವನದಂತೆ, ಇಲ್ಲಿ ಎಲ್ಲವೂ ಅರಳಲು, ಪಸರಿಸಲು ವಿಶಾಲವಾದ ಆಗಸದಂತ ಹೃದಯ ವೈಶಾಲ್ಯವಿದೆ. ನಾವು ಎಲ್ಲರೂ ಅಖಂಡ ಭಾರತದ ಕನಸನ್ನು ನನಸು ಮಾಡಲು ಯತ್ನಿಸಬೇಕು. “ನೀನೂ ಬದುಕಿ ಉಳಿದವರನ್ನು ಬದುಕಲು ಬಿಡು” ಎಂಬ ತತ್ವವೇ ಭಾರತೀಯತೆ ಎಂದು ಮೂಡಬಿದ್ರೆ ಜೈನ ಮಠದ ಪರಮ ಪೂಜ್ಯ ಸ್ವಸ್ತೀಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಸ್ವಾಮೀಜಿ ಗಾಂಧೀಜಯಂತಿಯ ಅಂಗವಾಗಿ ಎಕ್ಸಲೆಂಟ್ ವಿದ್ಯಾಸಂಸ್ಥೆಗಳು ಕಲ್ಲಬೆಟ್ಟು, ಮೂಡಬಿದಿರೆಯಲ್ಲಿ ನಡೆದ “ಸರ್ವ ಧರ್ಮ ಅರಿವು” ಕಾರ್ಯಕ್ರಮದಲ್ಲಿ ಮಾತನಾಡಿ ಆಶೀರ್ವಚನ ನೀಡಿದರು. ಮನುಷ್ಯನಿಗೆ ಸಂಸ್ಕಾರವೇ ಶ್ರೇಷ್ಠವಾದದ್ದು, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ಉತ್ತಮ ವಿಚಾರಗಳಿಂದ ಪರಿಪೂರ್ಣಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಮೂಡಬಿದ್ರಿಯ ತಹಶೀಲ್ದಾರ್ ಕು. ಅನಿತಾಲಕ್ಷ್ಮಿ. ಎಸ್.ಕೆ ಅವರು ಗಾಂಧೀಜಯಂತಿಯ 150ನೇ ವರ್ಷದಂದು ಅವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಎಲ್ಲ ಮತಗಳ ಸಾರವನ್ನು ಗ್ರಹಿಸಿ, ಜ್ಞಾನ ಸಂಪದಿಸಿ, ಎಲ್ಲರ ಅಭಿಪ್ರಾಯವನ್ನು ಗೌರವಿಸುವುದೇ ಹಿಂದೂ ಧರ್ಮ ಅಂದರೆ ಜೀವನ ಪದ್ದತಿ. ಜಗತ್ತಿನ ಎಲ್ಲ ವಿಚಾರಗಳನ್ನು ತನ್ನೊಳಗೆ ತೆಗೆದುಕೊಂಡು ಎಲ್ಲಾ ಮತಾಚರಣೆಗಳಿಗೂ ಆಶ್ರಯ ನೀಡಿರುವುದು ಭಾರತ ಎಂದು ಹಿಂದೂ ಧರ್ಮದ ಕುರಿತು ಮುಕ್ತವಾಹಿನಿಯ ಮುಖ್ಯಸ್ಥರಾದ ಶ್ರೀಕಾಂತ ಶೆಟ್ಟಿ ಬೈಲೂರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ರೈಸ್ತ ಮತದ ಕುರಿತು ಉಪನ್ಯಾಸ ನೀಡಿದ ಸವೇರಪುರ ಚರ್ಚ್‍ನ ಧರ್ಮಗುರುಗಳಾದ ರೆ. ಫಾ. ಪ್ರೇಮ್ ಕುಮಾರ್ ಕುಟಿನ್ಹಾ ಅವರು ಸರ್ವ ಧರ್ಮಗಳ ಸಾರವೂ ಒಂದೇ ಅದು ಮನುಷ್ಯನ ಆತ್ಮೋದ್ಧಾರ. ಮೇಲು ಕೀಳುಗಳನ್ನು ದಾಟಿ ಶಾಂತಿ, ಪ್ರೀತಿಯಿಂದ ಬದುಕುವುದೇ ಆಗಿದೆ. ದೇವರದೃಷ್ಠಿಯಲ್ಲಿ ಎಲ್ಲವೂ ಪವಿತ್ರ ಎಂದು ಭಾವಿಸಬೇಕು. ಸಹೋದರತ್ವದಿಂದ ಸಹಬಾಳ್ವೆ ನಡೆಸುವುದೇ ಮಾನವನ ಕರ್ತವ್ಯ ಎಂದು ತಿಳಿಸಿದರು.
ಜಗತ್ತಿನ ಸಮಸ್ಯೆಗಳಿಗೆ ಯಾವುದೇ ಧರ್ಮ ಕಾರಣವಲ್ಲ. ಧರ್ಮದ ಅರಿವು ಇಲ್ಲದಿರುವುದೇ ಜಗತ್ತಿನಲ್ಲಿ ಅಶಾಂತಿ ತಾಂಡವಾಡಲು ಕಾರಣ. ಇಸ್ಲಾಂ ಎಂದಿಗೂ ಶಾಂತಿಯನ್ನು ಬಯಸುತ್ತದೆ. ನಿಜವಾದ ಅಧ್ಯಯನ ಮಾಡಿದರೆ ಇಸ್ಲಾಂ ಆಶಯವೇನೆಂದು ತಿಳಿಯುತ್ತದೆ. ಆದ್ದರಿಂದ ಮಾನವರನ್ನು ಅರಿಯುವುದೇ ಜೀವನದ ಇಸ್ಲಾಂನ ಆದರ್ಶ ಎಂದು ಶಾಂತಿಪ್ರಕಾಶನ ಮಂಗಳೂರು ಇದರ ವ್ಯವಸ್ಥಾಪಕರಾದ ಜನಾಬ್ ಮೊಹಮ್ಮದ್ ಕುಂಞõï ಅವರು ಇಸ್ಲಾಂ ಧರ್ಮದ ಕುರಿತು ತಿಳಿಸಿದರು.

ಜೈನ ಧರ್ಮದ ಕುರಿತು ಎಸ್.ಡಿ.ಎಮ್ ವಿದ್ಯಾಸಂಸ್ಥೆಯ ಅಧ್ಯಾಪಕರಾದ ಮಹಾವೀರ ಇಚ್ಲಂಪಾಡಿಯವರು ತಿಳಿಸುತ್ತಾ ವಿದ್ಯೆ ಬದುಕಿಗೆ ಅನ್ನವನ್ನು ನೀಡುತ್ತದೆ. ಧರ್ಮ ಬದುಕಿಗೆ ಅರ್ಥವನ್ನು ನೀಡುತ್ತದೆ. ಧರ್ಮ ಮತ್ತು ಅಧರ್ಮಗಳ ಪ್ರಜ್ಞೆಯೇ ಕಲಿಕೆಯ ಲಕ್ಷಣ. ಉತ್ತಮವಾದ ನಡವಳಿಕೆಯೇ ಧರ್ಮ. ನಾವೆಲ್ಲರೂ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ಜೀವನದ ಸಾರ್ಥಕತೆ ಸಾಧ್ಯ. ಅಹಿಂಸಾ ಸ್ವರೂಪದ ಜೀವನಕ್ರಮವೇ ಶ್ರೇಷ್ಠ ಎಂದು ತಿಳಿಸಿದರು.
ಸರ್ವಧರ್ಮ ಅರಿವು ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್‍ರವರು ನಮಗೆ ಇಂದು ಅಗತ್ಯವಾಗಿರುವುದು ಸರ್ವ ಜೀವಿಗಳಲ್ಲಿ ಕರುಣೆ ಪ್ರೀತಿ ವಿಶ್ವಾಸಗಳು, ಎಲ್ಲರೂ ಪರಸ್ಪರರನ್ನು ಅರಿತುಕೊಂಡು ಬದುಕುವಂತಾಗಲಿ ಎಂದು ಅಶಿಸಿದರು. ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಚಾರ್ಯ ಪ್ರದೀಪ್ ಕುಮಾರ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಗುರುಪ್ರಸಾದ್ ಶೆಟ್ಟಿ ವಂದಿಸಿದರು. ಉಪನ್ಯಾಸಕರಾದ ಡಾ. ನವೀನ್ ಕುಮಾರ್ ಮರಿಕೆ ಮತ್ತು ವಿನಾಯಕ್ ಜೋಗ್ ಕಾರ್ಯಕ್ರಮ ನಿರೂಪಿಸಿದರು.