ಸಿಸಿಬಿ ಕಾರ್ಯಚರಣೆ: ಕಾಲಿಯಾ ರಫೀಕ್ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯ ಸೆರೆ-ಕಹಳೆ ನ್ಯೂಸ್
ಕುಖ್ಯಾತ ರೌಡಿ ಕಾಲಿಯಾ ರಫೀಕ್ ಕೊಲೆ ನಡೆಸಿದ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದಿನಾಂಕ. 14-2-2017 ರಂದು ರಾತ್ರಿ ಹೊತ್ತಿಗೆ ಮಹಮ್ಮದ್ ಝಾಹಿದ್ ರವರು ತನ್ನ ಸ್ನೇಹಿತ ಕಾಲಿಯಾ ರಫಿಕ್ನೊಂದಿಗೆ ಮುಜಿಬ್ ಹಾಗೂ ಫಿರೋಜ್ ರವರ ಜೊತೆಯಲ್ಲಿ ರಾತ್ರಿ ಮಾರುತಿ ರಿಟ್ಝ್ ಕಾರಿನಲ್ಲಿ ಹೊಸಂಗಡಿಯಿಂದ ಮಂಗಳೂರು ಕೋಟೆಕಾರು ಪೆಟ್ರೋಲ್ ಪಂಪ್ ಬಳಿ ತಲುಪಿದಾಗ ಆರೋಪಿಗಳ ಪೈಕಿ ಚಾಲಕ ರಶೀದ್ನು ಮುಂಚಿತವಾಗಿ ಪ್ಲಾನ್ ಮಾಡಿದಂತೆ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಟಿಪ್ಪರ್ ನ್ನು ಏಕಾಎಕಿ ಮುಂದುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಕಾರನ್ನು ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿದ್ದಾರೆ.
ಈ ಸಮಯ ಕಾಲಿಯಾ ರಫೀಕ್ ನು ಪ್ರಯಾಣಿಸುತ್ತಿದ್ದ ಕಾರನ್ನು ಬೆನ್ನತ್ತಿ ಬಂದ ಎರ್ಟಿಕಾ ಕಾರಿನಲ್ಲಿದ್ದ ಆರೋಪಿಗಳು ಕಾರಿನಿಂದ ಇಳಿದು ಕಾಲಿಯಾ ರಫೀಕ್ ಸಂಚರಿಸುತ್ತಿದ್ದ ರಿಡ್ಜ್ ಕಾರಿನ ಬಳಿಗೆ ಹೋದಾಗ ಅಪಾಯವನ್ನು ಅರಿತ ಕಾಲಿಯಾ ರಫೀಕ್ ಮತ್ತು ಆ ಕಾರಿನಲ್ಲಿದ್ದವರು ಓಡಲು ಯತ್ನಿಸಿದ್ದು, ಆರೋಪಿಗಳ ಪೈಕಿ ನೂರ್ ಆಲಿ ಹಾಗೂ ಇನ್ನೋರ್ವ ಆರೋಪಿಯು ಅವರ ಕೈಯಲ್ಲಿದ್ದ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಲ್ಲದೇ ಇತರ ಆರೋಪಿಗಳು ಬೆನ್ನಟ್ಟಿ ತಲವಾರಿನಿಂದ ಕಡಿದು ಕೊಲೆ ನಡೆಸಿದ್ದರು. ಈ ಪ್ರಕರಣದಲ್ಲಿ ಭಾಗಿಯಾದ ನೂರ್ ಆಲಿ, ರಶೀದ್ ಟಿ ಎಸ್, ಹುಸೈನಬ್ಬ, ಮುತಾಸಿಂ ಹಾಗೂ ಇತರರನ್ನು ಈ ಹಿಂದೆ ದಸ್ತಗಿರಿ ಮಾಡಲಾಗಿತ್ತು.
ಈ ಘಟನೆ ನಡೆದ ಸಮಯ ಮೃತ ಕಾಲಿಯಾ ರಫೀಕ್ ನೊಂದಿಗೆ ಕಾರಿನಲ್ಲಿ ಚಾಲಕನಾಗಿದ್ದ ಮೊಹಮ್ಮದ್ ನಜೀಬ್ ಎಂಬಾತನು ಈ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದು ಕೊಲೆ ಕೃತ್ಯದ ನಂತರ ತಲೆಮರೆಸಿಕೊಂಡು, ಮುಂಬೈ, ಬೆಂಗಳೂರು, ಮುಂತಾದ ಕಡೆ ತಿರುಗಾಡುತ್ತಿದ್ದನು. ಈತ ಒಟ್ಟು 5 ಪ್ರಕರಣಗಳು ದಾಖಲಾಗಿದ್ದು, ಈತನ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಈ ದಿನ ಮೊಹಮ್ಮದ್ ನಜೀಬ್ ಎಂಬಾತನನ್ನು ಕೇರಳದಿಂದ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಡಾ: ಪಿ.ಎಸ್ ಹರ್ಷ ರವರ ನಿರ್ದೇಶನದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಆರ್ ನಾಯ್ಕ್, ಪಿಎಸ್ಐ ಕಬ್ಬಾಳ್ ರಾಜ್ ಹೆಚ್ ಡಿ, ಹಾಗೂ ಸಿಸಿಬಿ ಸಿಬ್ಬಂದಿಗಳು ಆರೋಪಿಯ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.