ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‍ಗೆ ಅಂತಾರಾಷ್ಟ್ರೀಯ ಸಂಬಂಧಗಳನ್ನು ಹೇಗೆ ಗಳಿಸಿ, ಉಳಿಸಿಕೊಳ್ಳಬೇಕು ಎಂಬುದೇ ತಿಳಿದಿಲ್ಲ ಎಂದು ಭಾರತದ ವಿದೇಶಾಂಗ ಇಲಾಖೆ ಕಿಡಿಕಾರಿದೆ.
ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದು, ಇಮ್ರಾನ್ ಖಾನ್ ಅವರ ಬೇಜವಾಬ್ದಾರಿ ನಡವಳಿಕೆಗೆ ಸಾಕ್ಷಿಯಾಗಿದೆ. ಭಾರತದ ವಿರುದ್ಧವಾಗಿ ಅವರು ಜಿಹಾದಿಗೆ ಕರೆ ನೀಡಿದ್ದು ಸರಿಯಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಭೆಯಲ್ಲಿ ಕಾಶ್ಮೀರದ ವಿಚಾರ ಪ್ರಸ್ತಾಪ ಮಾಡಿದ ಮಲೇಷ್ಯಾ ಹಾಗೂ ಟರ್ಕಿ ದೇಶಗಳನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತದ ಜೊತೆಗಿನ ಸ್ನೇಹ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಮಲೇಷ್ಯಾ ಹಾಗೂ ಟರ್ಕಿ ಮಾತನಾಡಬೇಕಿತ್ತು. ಕಾಶ್ಮೀರ ವಿವಾದ ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ ಎಂಬುದನ್ನು ಅವುಗಳು ಗಮನಿಸಬೇಕಿತ್ತು ಎಂದರು.