ಪುತ್ತೂರು: ಬಾಲ್ಯಾವಸ್ಥೆಯಲ್ಲಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಭವಿಷ್ಯದಲ್ಲಿ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಹೆತ್ತವರು ಮತ್ತು ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೊತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವಂ. ಜಾರ್ಜ್ ಸುನಿಲ್ ಡಿ’ಸೋಜಾ ಹೇಳಿದರು.
ಕಾಲೇಜಿನ ಸಮಾಜ ಕಾರ್ಯ ವಿಭಾಗ ಮತ್ತು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆರ್ಯಾಪು ಇದರ ಜಂಟಿ ಆಶ್ರಯದಲ್ಲಿ ‘ಹೆತ್ತವರ ಮತ್ತು ಮಕ್ಕಳ ಬಾಂಧವ್ಯ’ ಕುರಿತು ಶಾಲಾ ಸಭಾಂಗಣದಲ್ಲಿ ಸೆಪ್ಟಂಬರ್ 30 ರಂದು ಆಯೋಜಿಸಲಾದ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದರು. ಪ್ರಸ್ತುತ ಅತಿಯಾದ ಕಾರ್ಯ ಚಟುವಟಿಕೆಗಳ ಒತ್ತಡದಿಂದಾಗ ಹೆತ್ತವರಿಗೆ ತಮ್ಮ ಮಕ್ಕಳ ಬಗ್ಗೆ ನಿಗಾ ವಹಿಸಲು ಕಷ್ಟವೆನಿಸುತ್ತಿದೆ. ಇವತ್ತಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಎಳೆಯ ಮಕ್ಕಳು ಅನಗತ್ಯ ವಸ್ತು ವಿಷಯಗಳ ಕಡೆಗೆ ಆಕರ್ಷಿತರಾಗುವುದು ಸಾಮಾನ್ಯ ಸಂಗತಿ. ಪ್ರತಿಯೊಬ್ಬ ಹೆತ್ತವರೂ ಸಹ ತಮ್ಮ ಮಕ್ಕಳ ನಡೆ ನುಡಿಯ ಕಡೆಗೆ ಹೆಚ್ಚಿನ ಗಮನಹರಿಸುವುದು ಅತಿ ಅಗತ್ಯ. ಅದೇ ರೀತಿ ಶಿಕ್ಷಕರೂ ಸಹ ಮಕ್ಕಳ ಎಲ್ಲಾ ರೀತಿಯ ಚಟುವಟಿಕೆಗಳನ್ನು ಅತ್ಯಂತ ಸಮೀಪದಿಂದ ಗಮನಿಸಿ, ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಪ್ರಯತ್ನಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರ ಸಭಾ ಸದಸ್ಯೆ ಸವಿತಾ ಮತ್ತು ಶಾಲಾ ಮುಖ್ಯ ಗುರು ತಾಬ್ರ ಭಾಗವಹಿಸಿದ್ದರು. ಸಭಾಧ್ಯಕ್ಷತೆಯನ್ನು ಶಾಲಾ ಎಸ್‍ಡಿಎಮ್‍ಸಿ ಅಧ್ಯಕ್ಷ ಇಬ್ರಾಹಿಮ್ ವಹಿಸಿದ್ದರು. ಸ್ನಾತಕೋತ್ತರ ಸಮಾಜ ಕಾರ್ಯ ವಿದ್ಯಾರ್ಥಿಗಳಾದ ಯಶಸ್ವಿ ಜಿ ಎಮ್ ಸ್ವಾಗತಿಸಿ, ಅಮೃತ್ ವಿ ವಂದಿಸಿದರು. ಮಮತಾ ಕೆ ಕಾರ್ಯಕ್ರಮ ನಿರೂಪಿಸಿದರು.