ಶಿಬಿರಗಳ ಮೂಲಕ ಪ್ರತಿಭೆಗಳ ಅನಾವರಣ ; ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ‘ಶರದೃತು ಶಿಬಿರ’ವನ್ನು ಉದ್ಘಾಟಿಸಿ ಒಡಿಯೂರು ಶ್ರೀಗಳು – ಕಹಳೆ ನ್ಯೂಸ್
ಒಡಿಯೂರು, ಅ.5: “ಶರನ್ನವರಾತ್ರಿಯಲ್ಲಿ ಶರದೃತುವಿನ ನೆನಪಾಗುವುದು ಸಹಜ. ಈ ಸಮಯದಲ್ಲಿ ಆಕಾಶವು ಶುಭ್ರವಾಗಿ ನೀಲವಾಗಿರುತ್ತದೆ. ನಮ್ಮ ಮನಸ್ಸು ಕೂಡಾ ಎಲ್ಲಾ ದುಃಖ-ದುಮ್ಮಾನಗಳನ್ನು ಬಿಟ್ಟು ಶಾಂತವಾಗಿ, ವಿಶಾಲವಾಗಿರಬೇಕೆಂಬುದೇ ಇದರ ಸಂದೇಶ. ಈ ಸುಸಂದರ್ಭ ಶರದೃತು ಶಿಬಿರವನ್ನು ಇಲ್ಲಿ ಆಯೋಜಿಸಲಾಗಿದೆ. ತಮ್ಮ ಪ್ರತಿಭೆಗಳನ್ನು ಅರಳಿಸಲು ಇಂತಹ ವೇದಿಕೆಗಳನ್ನು ಮಕ್ಕಳು ಉಪಯೋಗಿಸಿಕೊಳ್ಳಬೇಕು. ವಾಲ್ಮೀಕಿಗೆ ಉತ್ತಮ ಸಂಸ್ಕಾರ ಸಿಕ್ಕಿದಾಗ ಅವನಿಂದ ಶ್ರೀ ಮದ್ರಾಮಾಯಣ ಎಂಬ ಮಹಾಕಾವ್ಯ ಉದಿಸಿತು. ಆ ಮೂಲಕ ಧರ್ಮದ ಸಂದೇವು ನಮಗೊದಗಿತು. ಶಿಬಿರಗಳ ಮೂಲಕ ಪ್ರತಿಭೆಗಳ ಅನಾವರಣದೊಂದಿಗೆ ವ್ಯಕ್ತಿತ್ವವು ವಿಕಸನಗೊಳಿಸಲು ಸಾಧ್ಯ. ಶಿಸ್ತು, ಸಂಯಮವನ್ನು ಬೆಳೆಸುವುದಕ್ಕೂ ಪೂರಕ. ನಮ್ಮಲ್ಲಿ ರೂಢಿಸಿಕೊಂಡಾಗ ಅದು ಅನುಕೂಲಕರವಾಗುತ್ತದೆ. ದೇಹ ಮತ್ತು ಮನಸ್ಸಿನ ನಿಯಂತ್ರಣಕ್ಕೆ ಯೋಗ ಪೂರಕ. ಬದುಕಿನ ಸಾರ್ಥಕತೆ ಯೋಗ ಅಗತ್ಯ. ಯೋಗಾಭ್ಯಾಸವನ್ನೂ ಸಹ ಈ ಶಿಬಿರದಲ್ಲಿ ಜೋಡಿಸಲಾಗಿದೆ” ಎಂದು ಒಡಿಯೂರು ಶ್ರೀ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನಗೈದರು.
ಒಡಿಯೂರು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಆಯೋಜಿಸಲಾದ ಮೂರು ದಿನಗಳ ‘ಶರದೃತು ಶಿಬಿರ’ವನ್ನು ದೀಪೋಜ್ವಲನಗೈದು ಪೂಜ್ಯ ಶ್ರೀಗಳವರು ಉದ್ಘಾಟಿಸಿದರು.
ವೇದಿಕೆಯಲ್ಲಿ ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಉಗ್ಗಪ್ಪ ಶೆಟ್ಟಿ ಕೊಂಬಿಲ, ಹಿರಿಯ ಪತ್ರಕರ್ತ ಶ್ರೀ ಯಶವಂತ ವಿಟ್ಲ, ಮೈತ್ರೇಯೀ ಗುರುಕುಲದ ಭಗಿನಿಯರು, ಒಡಿಯೂರು ಶ್ರೀ ಗುರುದೇವ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ, ಶಾಲಾ ವಿದ್ಯಾರ್ಥಿ ನಾಯಕ ಮಾ| ಸಂದೇಶ್ ಶೆಟ್ಟಿ, ಶ್ರೀ ಗುರುದೇವ ಬಾಲವಿಕಾಸ ಕೇಂದ್ರ, ಕುಡ್ಪಲ್ತಡ್ಕದ ವಿದ್ಯಾರ್ಥಿ ಕು| ದೀಕ್ಷಿತಾ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿಕ್ಷಕಿ ಶ್ರೀಮತಿ ಅನಿತಾ ನಿರೂಪಣೆಗೈದು, ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀ ಜಯಪ್ರಕಾಶ್ ಶೆಟ್ಟಿ ವಂದಿಸಿದರು.