Wednesday, January 22, 2025
ರಾಜಕೀಯ

ಪ್ರಧಾನಿಗೆ ಬಹಿರಂಗ ಪತ್ರ ಬರೆದರೆ ದೇಶದ್ರೋಹ ಪ್ರಕರಣ ದಾಖಲಿಸ್ತಾರೆ ; ವಿ.ಎಸ್.ಉಗ್ರಪ್ಪ ಆಕ್ರೋಶ – ಕಹಳೆ ನ್ಯೂಸ್

ಬಳ್ಳಾರಿ: ಪ್ರಧಾನಿ ಮೋದಿ ಅವರಿಗೆ ಬಹಿರಂಗ ಪತ್ರ ಬರೆದರೆ ದೇಶದ್ರೋಹ ಪ್ರಕರಣ ದಾಖಲಿಸುತ್ತಾರೆ. ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಇದೆ, ಹಿಟ್ಲರ್ ಪ್ರವೃತ್ತಿ ಮೋದಿಯವರಲ್ಲಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಮೋದಿಯವರ ಮುಂದೆ ಸ್ವಾಭಿಮಾನ ಕಳೆದುಕೊಂಡಿದ್ದಾರೆ. ಪ್ರಧಾನಿ ಭೇಟಿಗೆ ಬಿಎಸ್‍ವೈ ಅಪಾಯಿಂಟ್‍ಮೆಂಟ್ ಕೇಳಿದಾಗ ನಾಲ್ಕು ಬಾರಿ ಕ್ಯಾನ್ಸಲ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರೆ ಸಮಸ್ಯೆ ಪರಿಹಾರ ಆಗುವುದಿಲ್ಲ. ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಇರೋ ಹಿಂದಿನ ಉದ್ದೇಶ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅಲ್ಲದೆ ಬೆಂಗಳೂರಿನಲ್ಲಿ ನಡೆಯುವ ಅಧಿವೇಶನಕ್ಕೆ ಮಾಧ್ಯಮದವರನ್ನು ನಿರ್ಬಂಧಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಎನ್‍ಡಿಆರ್ ಎಫ್, ಎಸ್‍ಡಿಆರ್ ಎಫ್ ಮಾರ್ಗಸೂಚಿಗಳ ಪ್ರಕಾರ ಇಂದು ನೆರೆ ಪರಿಹಾರ ಹಣ ಬಿಡುಗಡೆಯಾಗದು, ಇನ್ನೂ ಹಳೆಯ ಕಾಲದ ನೀತಿ ಇದೆ. ಅದನ್ನು ಬದಲಿಸಬೇಕು. ಓಬೆರಾಯನ ಕಾಲದ ನೀತಿಗಳು ಬದಲಾಗಬೇಕಿದೆ.

 

ವಿಪಕ್ಷ ನಾಯಕರ ಆಯ್ಕೆ ವಿಚಾರದಲ್ಲಿ ಮೂಲ, ವಲಸೆ ಕಾಂಗ್ರೆಸ್ ಎಂದು ಅಸಮಾಧಾನವಿಲ್ಲ. ಕಾಂಗ್ರೆಸ್ ಒಂದೇ, ಎಲ್ಲರೂ ಕಾಂಗ್ರೆಸ್ ನಾಯಕರೇ, ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ಅವರವರ ಅಭಿಪ್ರಾಯ ಹೇಳುವುದರಲ್ಲಿ ತಪ್ಪೇನಿಲ್ಲ. ಅಂತಿಮವಾಗಿ ಪಕ್ಷದ ಹೈ ಕಮಾಂಡ್ ವಿಪಕ್ಷ ನಾಯಕರ ಆಯ್ಕೆ ಕುರಿತು ತಿರ್ಮಾನ ಮಾಡುತ್ತದೆ ಎಂದರು.

ಬಳ್ಳಾರಿ ಜಿಲ್ಲೆಗೆ ಇತಿಹಾಸ ಇದೆ. ಬಳ್ಳಾರಿ ಜನರ ಬದುಕಿನ ಜೊತೆ ಯಾರೂ ಚೆಲ್ಲಾಟ ಆಡಬಾರದು. ಚುನಾವಣೆಗಾಗಿ ಕೆಲವರ ವೈಯಕ್ತಿಕ, ಭಾವನಾತ್ಮಕ ವಿಚಾರ ಜನರ ಮುಂದೆ ಒಯ್ಯುವುದು ಸರಿಯಲ್ಲ. ಮೊದಲು ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಮಾಡಿ. ಅಖಂಡ ಬಳ್ಳಾರಿಯಾಗಿ ಉಳಿಯಬೇಕೋ, ವಿಭಜನೆಯಾಗಬೇಕೋ ಎಂಬುದರ ಕುರಿತು ಜನಾಭಿಪ್ರಾಯ ಸಂಗ್ರಹ ಮಾಡಿ, ಅಂತಿಮ ನಿರ್ಣಯ ತೆಗೆದುಕೊಳ್ಳುಬೇಕು. ತಮ್ಮ ಸ್ವಾರ್ಥಕ್ಕಾಗಿ ಜಿಲ್ಲೆ ಒಡೆಯುವುದು ಬೇಡ ಎಂದು ಉಗ್ರಪ್ಪ ಬಳ್ಳಾರಿ ಜಿಲ್ಲೆ ವಿಭಜನೆ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ರದ್ದು ಮಾಡುವ ವಿಚಾರದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಇಂದಿರಾ ಕ್ಯಾಂಟೀನ್ ನಷ್ಟದಲ್ಲಿದೆ ಎಂದು ಮುಚ್ಚುವುದಾದಲ್ಲಿ, ಅನೇಕ ಸಮಸ್ಯೆಗಳು ನಷ್ಟದಲ್ಲಿ ಇವೆ. ಅವನ್ನೂ ಮುಚ್ಚುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೆಸ್ ಮಾಡಿದ ಎಲ್ಲ ಕೆಲಸಗಳನ್ನು ಡೈವರ್ಟ್ ಮಾಡುವ ಖಾಯಿಲೆ ಇದೆ. ಅನ್ನ ಭಾಗ್ಯದಲ್ಲಿ ಲಾಭವಿಲ್ಲ, ಅದನ್ನು ನಿಲ್ಲಿಸುತ್ತಾರೆನೋ ಎಂದು ಉಗ್ರಪ್ಪ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.