ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜನರು ಕಮಲ ಕೈಗೆತ್ತಿಕೊಳ್ಳಲಿದ್ದಾರೆ ಎನ್ನುವ ಭರವಸೆಯಲ್ಲಿದ್ದಾರೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ. “ಹಿಂದುಸ್ತಾನ್ ಟೈಮ್ಸ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಪಕ್ಷ 2019ರ ಚುನಾವಣೆಯನ್ನು ಎದುರಿಸಲಿರುವ ಪರಿ ಮತ್ತು ಮೋದಿ ಆಡಳಿತದಲ್ಲಿ ದೇಶದಲ್ಲಾಗಿರುವ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.
19 ರಾಜ್ಯಗಳಲ್ಲಿ ನಿಮ್ಮ ಪಕ್ಷವೇ ಅಧಿಕಾರದಲ್ಲಿದೆ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಈ ಸಂಖ್ಯೆ 21 ಅಥವಾ 22ಕ್ಕೆ ಏರಬಹುದು. ಹೀಗಾಗಿ 2019ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೆಣಸಲು ಉಳಿದೆಲ್ಲ ಪಕ್ಷಗಳು ಕೈಜೋಡಿಸಬಹುದು ಅನಿಸುತ್ತದಾ?
ಈಗಲೇ ಆ ಬಗ್ಗೆ ಭವಿಷ್ಯ ನುಡಿಯುವುದು ಸೂಕ್ತವಲ್ಲ, ಆದರೂ ಇದು ಈಗಲ್ಲದಿದ್ದರೆ ನಾಳೆ ಆಗುವಂಥದ್ದೆ. ನಾವು ವಿಸ್ತರಣೆಗೆ ಮುಂದಾಗುತ್ತೀವಿ ಎಂದಾದರೆ, ಸಹಜವಾಗಿಯೇ ಪ್ರತಿ ರಾಜ್ಯದಲ್ಲೂ ಹೋರಾಡಬೇಕಾಗುತ್ತದೆ. 2014ರಲ್ಲಿ ನಮ್ಮವು ಆರು ಸರ್ಕಾರಗಳಿದ್ದವು, ಒಂದು ವೇಳೆ 2019ರಲ್ಲಿ 22 ಸರ್ಕಾರಗಳೊಂದಿಗೆ ಅಖಾಡಕ್ಕಿಳಿಯುತ್ತೇವೆ ಎಂದರೆ, ಅವಿಷ್ಟೂ ರಾಜ್ಯಗಳಲ್ಲೂ ಹೋರಾಡಲೇಬೇಕಾಗುತ್ತದೆ.
ಆದರೆ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಇರುವುದು ಅವಶ್ಯಕವಲ್ಲವೇ?
ಹೌದು, ಆದರೆ ಅದು ನಮ್ಮ ಜವಾಬ್ದಾರಿಯಲ್ಲ.
ಆದರೂ, ಹೊಸ ತಲೆಮಾರಿನ ಅಪೋಸಿಷನ್ ಎದುರಾಗಬಹುದು ಎಂದನಿಸುತ್ತಾ?
ಇದು ಸಹಜ ಪ್ರಕ್ರಿಯೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಜೆಪಿ ಹುಟ್ಟಿಕೊಂಡಿತಲ್ಲ. ಅಂತೆಯೇ ಅಪೋಸಿಷನ್ ತಲೆ ಎತ್ತುತ್ತದೆ.
ಉತ್ತರ ಪ್ರದೇಶ ಮತ್ತು ಇತರೆ ಭಾಗಗಳಲ್ಲಿನ ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಾ?
ಉಳಿಸಿಕೊಳ್ಳುತ್ತೇವೆ ಎನ್ನುವ ಆತ್ಮವಿಶ್ವಾಸ ನಮಗಿದೆ. ಇಷ್ಟೊಂದು ಬೃಹತ್ ದೇಶದಲ್ಲಿ ಅನೇಕ ಘಟನೆಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ ಯಾವುದನ್ನೂ ಊಹೆಯ ಮೇಲೆ ಹೇಳುವುದು ಸರಿಯಲ್ಲ. ಆದರೂ ಒಂದು ವೇಳೆ ಇವತ್ತು ಚುನಾವಣೆಯೇನಾದರೂ ನಡೆದರೆ, ಮತ್ತೆ ನಾವು ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ.
ಗುಜರಾತ್ ಚುನಾವಣೆಯ ನಂತರ ಕಾಂಗ್ರೆಸ್ ಬಹಳ ಲವಲವಿಕೆಯಿಂದ ಇದೆಯಲ್ಲ…
ಕರ್ನಾಟಕ ಚುನಾವಣೆ ನಂತರ ಏನಾಗುತ್ತೋ ನೋಡೋಣ.
ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳು ದುರ್ಬಲ ವಾಗುತ್ತಿರುವ ಸಂಕೇತ ಕಳುಹಿಸುತ್ತಿವೆ. ರಜನೀಕಾಂತ್‌ಅವರದ್ದು ಹೊಸ ಪ್ರವೇಶ. ಇದನ್ನೆಲ್ಲ ಹೇಗೆ ಅವಲೋಕಿಸುತ್ತೀರಿ?
ನಾವು ಇದನ್ನೆಲ್ಲ ಬಹಳ ಹತ್ತಿರದಿಂದ ಗಮನಿಸುತ್ತಿದ್ದೇವೆ. ಸರಿಯಾದ ಸಮಯದಲ್ಲಿ ನಮ್ಮ ರಾಜ್ಯ ಘಟಕದೊಂದಿಗೆ ಚರ್ಚಿಸುತ್ತೇವೆ.
ಒಟ್ಟಾರೆಯಾಗಿ, 2019ರ ಚುನಾವಣೆಯ ಬಗ್ಗೆ ಕಂಫರ್ಟೆಬಲ್ ಆಗಿದ್ದೀರಾ?
ನಿಸ್ಸಂಶಯವಾಗಿ! ನಾವು 2014ರಲ್ಲಿ ಅಧಿಕಾರಕ್ಕೆ ಬಂದಾಗ ಪ್ರತಿಯೊಬ್ಬ ನಾಗರಿಕನಲ್ಲೂ ಭವಿಷ್ಯದ ಬಗ್ಗೆ ಶಂಕೆಯಿತ್ತು. ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದು ಯುವಕರಿಗೆ ಗೊತ್ತಿರಲಿಲ್ಲ. ಮಹಿಳೆಯರಿಗೆ ಸುರಕ್ಷತೆಯಿರಲಿಲ್ಲ. ನಮ್ಮ ಗಡಿಗಳು ಭದ್ರವಾಗಿರಲಿಲ್ಲ. ಜಗತ್ತಿನ ಎದುರು ದೇಶದ ನಿಲುವು ಕುಸಿದಿತ್ತು. ಸರ್ಕಾರದ ಮಟ್ಟದಲ್ಲಿ ನೀತಿ ನಿರೂಪಣೆಗೆ ಗರ ಬಡಿದಿತ್ತು. ಯುಪಿಎ ಸರ್ಕಾರದ ಕೊನೆಯ ಆರು ವರ್ಷಗಳಲ್ಲಿ ಸುಮಾರು 8 ಸಂದರ್ಭಗಳಲ್ಲಿ ಬೆಳವಣಿಗೆ ದರ 5.7 ಪ್ರತಿಶತ ಅಥವಾ ಅದಕ್ಕಿಂತಲೂ ಕೆಳಕ್ಕೆ ಕುಸಿದಿತ್ತು. ಒಂದು ಸಮಯದಲ್ಲಂತೂ ಭಾರತವನ್ನು ಜಾಗತಿಕ ಆರ್ಥಿಕತೆಯ ಹೊಸ ಗುಂಪಿನಲ್ಲಿ ಸೇರಿಸಲಾಯಿತು. ಆದರೆ ಅದು ಜಿ-7, ಜಿ-8 ಅಥವಾ ಜಿ-20 ರೀತಿಯ ಗುಂಪಾಗಿರಲಿಲ್ಲ. ಆ ಗುಂಪಿನ ಹೆಸರು “ಫ್ರಾಜೈಲ್ 5′(ದುರ್ಬಲ 5) ಎಂದಾಗಿತ್ತು! ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೂರೂವರೆ ವರ್ಷಗಳಲ್ಲಿ ಇಡೀ ಜಗತ್ತೇ ಭಾರತದತ್ತ ಭರವಸೆಯಿಂದ ನೋಡುತ್ತಿದೆ. ಇದಕ್ಕೆ ಕಾರಣ ಮೋದೀಜಿ. ಹಣಕಾಸಿನ ಕೊರತೆಯಿರಲಿ, ವ್ಯಾಪಾರ ಕೊರತೆಯಿರಲಿ ಅಥವಾ ಹಣದುಬ್ಬರವಾಗಿರಲಿ ಮೋದಿಯವರ ನಾಯಕತ್ವದ ಸರ್ಕಾರದಲ್ಲಿ ಮತ್ತು ಅರುಣ್ ಜೇಟ್ಲಿಯವರ ನಾಯಕತ್ವದ ವಿತ್ತ ಇಲಾಖೆ ಅಡಿಯಲ್ಲಿ ಎಲ್ಲಾ ರೀತಿಯ ಆರ್ಥಿಕ ಅಂಕಿಸಂಖ್ಯೆಗಳು ಸರಿ ದಾರಿಯಲ್ಲಿ ಸಾಗಿವೆ. ಸೆನ್ಸೆಕ್ಸ್ ಗಗನವನ್ನು ಮುಟ್ಟುತ್ತಿದೆ. ಇಂದು ಭಾರತ ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಮೂರು ಅಥವಾ ಎರಡು ರಾಷ್ಟ್ರಗಳಲ್ಲಿ ಒಂದು. ನಮ್ಮ ದೇಶ ಹೂಡಿಕೆಗೆ ಅತ್ಯುತ್ತಮ ಜಾಗವಾಗಿ ಮಾರ್ಪಟ್ಟಿದೆ. ಯುಪಿಎ ಸರ್ಕಾರ ಅಧಿಕಾರದಿಂದ ಕೆಳಕ್ಕಿಳಿದಾಗ, ಅಂದರೆ 2013-14ರಲ್ಲಿ, ವಿದೇಶಿ ವಿನಿಮಯ ಮೀಸಲು 294.4 ಶತಕೋಟಿ ಡಾಲರ್‌ನಷ್ಟಿತ್ತು. ಅದೀಗ 402 ಶತಕೋಟಿ ಡಾಲರ್ ದಾಟಿದೆ. 2013-14ರಲ್ಲಿ ಯುಪಿಎ ಸರ್ಕಾರ ದಿನಕ್ಕೆ 69 ಕಿಲೋಮೀಟರ್ ರಸ್ತೆ ನಿರ್ಮಿಸಿತ್ತು. 2016-17ರಲ್ಲಿ ಪ್ರತಿ ದಿನ 130 ಕಿಲೋಮೀಟರ್ ರಸ್ತೆ ನಿರ್ಮಾಣವಾಗಿದೆ. 2014ರಲ್ಲಿ ಸಾಮಾನ್ಯ ಜನರಿಗೆ ಗೃಹ ಸಾಲ 10-12 ಪ್ರತಿಶತ ಬಡ್ಡಿದರದಲ್ಲಿ ಸಿಗುತ್ತಿತ್ತು. ಈಗ 8-9 ಪ್ರತಿಶತ ಬಡ್ಡಿಗೆ ಅವರಿಗೆ ಗೃಹ ಸಾಲ ಸಿಗುತ್ತಿದೆ. ನಮ್ಮದು ಪಾರದರ್ಶಕ ಸರ್ಕಾರ. ಜಿಎಸ್‌ಟಿಯಿರಲಿ, ನೋಟು ಅಮಾನ್ಯತೆಯಿರಲಿ, ಸರ್ಜಿಕಲ್ ಸ್ಟ್ರೈಕ್ ಇರಲಿ ಅಥವಾ
ಸಮಾನ ಶ್ರೇಣಿ ಸಮಾನ ವೇತನವಿರಲಿ ನಾವು ಧೈರ್ಯದಿಂದ ನಿರ್ಧಾರ ತೆಗೆದುಕೊಂಡಿದ್ದೇವೆ. ಅದಕ್ಕೇ ದೇಶದ ಮೂಡ್ ಬದಲಾಗಿದೆ.
ವಿರೋಧ ಪಕ್ಷಗಳಿಂದ ಅಥವಾ ಬೇರೆಡೆಯಿಂದ ಬರಬಹುದಾದ ಸಮಸ್ಯೆಗಳ ಬಗ್ಗೆ ನೀವು ಮೌಲ್ಯಮಾಪನ ಮಾಡುತ್ತಿರಬಹುದಲ್ಲವೇ? ಕಳೆದ 12-18 ತಿಂಗಳಿಂದ ದಲಿತರ ಸಮೀಕರಣ ಹೆಚ್ಚಾಗುತ್ತಿದೆ. ಈ ಬಗ್ಗೆ ಏನಂತೀರಿ?
ಸ್ವಲ್ಪ ತಿದ್ದುಪಡಿ ಮಾಡಿಕೊಳ್ಳಿ. ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗು ತ್ತಿದೆಯಷ್ಟೆ..
ಸರಿ, ಅದು ಪ್ರಯತ್ನವೇ ಇರಬಹುದು. ಆದರೆ ಈ ವಿದ್ಯಮಾನಗಳನ್ನು ನೀವು ಹೇಗೆ ನೋಡುತ್ತೀರಿ. ಹಿಂದೆ, ಇದೆಲ್ಲ ಚದುರಿಹೋಗಿತ್ತು.
ನಿಮ್ಮ ವಿಶ್ಲೇಷಣೆ ಸರಿಯಾಗಿಲ್ಲ. ಇದೆಲ್ಲ ರಾಜಕೀಯ ಪ್ರಯತ್ನವೇ ಹೊರತು ದಲಿತರ ಉದ್ಧಾರಕ್ಕಾಗಿ ಮಾಡಲಾಗುತ್ತಿರುವ ಪ್ರಯತ್ನವಲ್ಲ. ಕಾಂಗ್ರೆಸ್ ಮೊದಲಿನಿಂದಲೂ ಅಂಬೇಡ್ಕರ್ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಅಂಬೇಡ್ಕರ್ ಮರಣಾ ನಂತರವೂ ಕಾಂಗ್ರೆಸ್ ಅವರಿಗೆ ಗೌರವ ಕೊಡಲಿಲ್ಲ. ಅವರಿಗೆ ಭಾರತ ರತ್ನವನ್ನೂ ಕೊಟ್ಟಿಲ್ಲ. ಸಂಸತ್ತಿನಲ್ಲಿ ಅಂಬೇಡ್ಕರ್‌ರ ಫೋಟೋಕ್ಕೆ ಅನುಮತಿ ಕೊಡಲಿಲ್ಲ. ಅದ್ಹೇಗೆ ಈಗ ಕಾಂಗ್ರೆಸ್ ಮಾತನಾಡಬಲ್ಲದು? ದಲಿತರಿಗೂ ಇದೆಲ್ಲಾ ಅರ್ಥವಾಗುತ್ತದೆ. ಪ್ರಜಾಪ್ರಭುತ್ವ ಪ್ರೌಢವಾಗಿದೆ.
ತ್ರಿವಳಿ ತಲಾಖ್ ವಿಷಯದಲ್ಲಿ ಸರ್ಕಾರದ ನಡೆಯನ್ನು ನೋಡಿ, ಸಮಾನ ನಾಗರಿಕ ಸಂಹಿತೆಯ ಕುರಿತೂ ಚರ್ಚೆ ಶುರುವಾಗಿದೆಯಲ್ಲ…
ಈ ವಿಷಯದಲ್ಲಿ ನಾವಿನ್ನೂ ನಿರ್ಧಾರ ಕೈಗೊಂಡಿಲ್ಲ. ತ್ರಿವಳಿ ತಲಾಖ್ ವಿಷಯದಲ್ಲಿ ನಾವು ತೆಗೆದುಕೊಂಡ ನಿರ್ಧಾರವೂ ಕಾಂಗ್ರೆಸ್‌ನ ತಕರಾರಿನಿಂದ ರಾಜ್ಯ ಸಭೆಯಲ್ಲಿ ನಿಂತಿದೆ. ಮುಂದಿನ ಅಧಿವೇಶನದಲ್ಲಾದರೂ ಅದು ಕಾನೂನಾಗಬೇಕು ಎನ್ನುವುದು ನಮ್ಮ ಪ್ರಯತ್ನವಾಗಿರಲಿದೆ. ತ್ರಿವಳಿ ತಲಾಖ್ ಕಾನೂನು ಅನುಮೋದನೆಗೊಳ್ಳುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ. ಹಿಂದೆಯೂ ಅಷ್ಟೆ, ಶಾ ಬಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ತಿರಸ್ಕರಿಸಲು ಅದು ಒಂದು ಕಾನೂನನ್ನು ತಂದಿತ್ತು.
ಒಂದು ಸಮಯದಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ದೇಶದ ಸಂಭಾವ್ಯ ಮೂರನೇ ಪ್ರಬಲ ಪಕ್ಷ ಎಂದು ಹೇಳಲಾಗುತ್ತಿತ್ತಲ್ಲ…
ಬೇರೆ ಯಾರೂ ಹೇಳಿಲ್ಲ, ಮಾಧ್ಯಮಗಳಷ್ಟೇ ಹಾಗೆ ಹೇಳಿದ್ದು.
ವರದಿ : ಕಹಳೆ ನ್ಯೂಸ್