ಬೆಂಗಳೂರು: ಐಟಿ ವಿಚಾರಣೆ ಎದುರಿಸುವುದಕ್ಕೆ ಆಗಲ್ಲ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಮಾಜಿ ಡಿಸಿಎಂ ಪರಮೇಶ್ವರ್ ಅವರ ಪಿಎ ರಮೇಶ್ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಮೇಶ್ 6 ವರ್ಷದಿಂದ ಪರಮೇಶ್ವರ್ ಬಳಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಆದ ಹಿನ್ನೆಲೆಯಲ್ಲಿ ರಮೇಶ್ ಮನೆ ಮೇಲೂ ದಾಳಿ ನಡೆದಿತ್ತು. ಆದರೆ ಮನೆಯಲ್ಲಿ ಯಾವುದೇ ದಾಖಲೆ ಸಿಕ್ಕಿರಲಿಲ್ಲ. ಪರಮೇಶ್ವರ್ ಪತ್ರ ವ್ಯವಹಾರದ ಬಗ್ಗೆ ರಮೇಶ್‍ಗೆ ತಿಳಿದಿತ್ತು. ಹಾಗಾಗಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಪತ್ರ ವ್ಯವಹಾರದ ಬಗ್ಗೆ ಐಟಿ ಅಧಿಕಾರಿಗಳು 2 ದಿನ ವಿಚಾರಣೆ ನಡೆಸಿದ್ದರು. ಈ ವೇಳೆ ಐಟಿ ಅಧಿಕಾರಿಗಳು ಜೈಲಿಗೆ ಹೋಗ್ತಿಯಾ, ಈಗಾಗಲೇ ನಮಗೆ ಹವಾಲಾ ದಂಧೆ ಸಾಕ್ಷ್ಯ ಸಿಕ್ಕಿದೆ ಎಂದು ಬೆದರಿಕೆ ಹಾಕಿದ್ದರು. ಇದರಿಂದ ರಮೇಶ್ ಹೆದರಿಕೊಂಡಿದ್ದರು ಎನ್ನಲಾಗಿದೆ.
ಇಂದು ಬೆಳಗ್ಗೆ ರಮೇಶ್ ತನ್ನ ಆಪ್ತರಿಗೆ ಕರೆ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿ ಕೊಂಡಿದ್ದರು. ಇಬ್ಬರು ಆಪ್ತರ ಬಳಿ ಮಾತನಾಡಿ, ನಾನು ಯೂನಿವರ್ಸಿಟಿ ಕ್ಯಾಂಪಸ್‍ನಲ್ಲಿದ್ದೀನಿ ಎಂದು ಹೇಳಿ ರಮೇಶ್ ನಾಪತ್ತೆ ಆಗಿದ್ದಾರೆ.
ಆಪ್ತರಿಗೆ ಕರೆ ಮಾಡಿ ರಮೇಶ್, ನಾನು ಬಡವ. ಹೀಗಿದ್ದರೂ ಅಧಿಕಾರಿಗಳು ನನ್ನ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ. ನನಗೆ ಐಟಿ ವಿಚಾರಣೆ ಎದುರಿಸುವುದಕ್ಕೆ ಆಗುವುದಿಲ್ಲ. ಐಟಿ ಅಧಿಕಾರಿಗಳು ಸಿಕ್ಕಾಪಟ್ಟೆ ಪ್ರಶ್ನೆಗಳನ್ನು ಕೇಳುತ್ತಾರೆ. ನನಗೆ ಅವರ ಪ್ರಶ್ನೆಗಳಿಗೆ ಉತ್ತರಿಸಲು ಆಗುವುದಿಲ್ಲ ಎಂದು ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದರು.