Saturday, November 23, 2024
ಕ್ರೀಡೆ

ಪುಣೆ ಟೆಸ್ಟ್‌ : ಭಾರತಕ್ಕೆ ಭಾರೀ ಮುನ್ನಡೆ – ಕೊಹ್ಲಿ ಪಡೆಗೆ 326 ರನ್ನುಗಳ ಲೀಡ್‌ – ಕಹಳೆ ನ್ಯೂಸ್‍

ಪುಣೆ: ನಿರೀಕ್ಷೆಯಂತೆ ಪುಣೆ ಟೆಸ್ಟ್‌ ಪಂದ್ಯದಲ್ಲಿ ಭಾರತ ಭಾರೀ ಮುನ್ನಡೆ ಸಂಪಾದಿಸಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ 275 ರನ್‌ ಗಳಿಸಿ ಮೊದಲ ಇನ್ನಿಂಗ್ಸ್‌ ಮುಗಿಸುವ ಹೊತ್ತಿಗೆ ಸರಿಯಾಗಿ 3ನೇ ದಿನದಾಟವೂ ಕೊನೆಗೊಂಡಿದ್ದು, ಕೊಹ್ಲಿ ಪಡೆಗೆ 326 ರನ್ನುಗಳ ಲೀಡ್‌ ಲಭಿಸಿದೆ.

ದಕ್ಷಿಣ ಆಫ್ರಿಕಾಕ್ಕೆ ಫಾಲೋಆನ್‌ ಹೇರಬಹು ದಾದರೂ ರವಿವಾರ ಭಾರತ ದ್ವಿತೀಯ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಹೆಚ್ಚಿದೆ. ಇದರಿಂದ ಬ್ಯಾಟಿಂಗ್‌ ಅಭ್ಯಾಸವನ್ನೂ ನಡೆಸಿದಂತಾಗುತ್ತದೆ. ಮುನ್ನಡೆಯನ್ನು 450-500ರ ತನಕ ಏರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡುವುದು ಟೀಮ್‌ ಇಂಡಿಯಾದ ಯೋಜನೆ ಆಗಿರಬಹುದು ಎಂಬುದೊಂದು ಲೆಕ್ಕಾಚಾರ.

ಜಾಹೀರಾತು
ಜಾಹೀರಾತು
ಜಾಹೀರಾತು

ಫಿಲಾಂಡರ್‌-ಮಹಾರಾಜ್‌ ತಡೆ
ದಕ್ಷಿಣ ಆಫ್ರಿಕಾದ 8 ವಿಕೆಟ್‌ 162 ರನ್ನಿಗೆ ಉದುರಿ ದ್ದನ್ನು ಕಂಡಾಗ ಭಾರತ ಇನ್ನೂ ದೊಡ್ಡ ಮೊತ್ತದ ಮುನ್ನಡೆ ಪಡೆಯಲಿದೆ ಎಂದು ಭಾವಿಸಲಾಗಿತ್ತು. ಆದರೆ 9ನೇ ವಿಕೆಟಿಗೆ ಜತೆಗೂಡಿದ ವೆರ್ನನ್‌ ಫಿಲಾಂಡರ್‌ ಮತ್ತು ಕೇಶವ್‌ ಮಹಾರಾಜ್‌ ಭಾರತದ ಎಲ್ಲ ನಮೂನೆಯ ಬೌಲಿಂಗ್‌ ದಾಳಿ ಯನ್ನು ಯಶಸ್ವಿಯಾಗಿ ನಿಭಾಯಿಸಿ 109 ರನ್‌ ಪೇರಿಸಿದರು; ಆಫ್ರಿಕಾದ ಹಿನ್ನಡೆ ಅಷ್ಟರ ಮಟ್ಟಿಗೆ ಕಡಿಮೆಯಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಫಿಲಾಂಡರ್‌ 192 ಎಸೆತ ಎದುರಿಸಿ ಅಜೇಯ 44 ರನ್‌ ಹೊಡೆದರೆ (6 ಬೌಂಡರಿ), ಮಹಾರಾಜ್‌ ನೋವಿನ ನಡುವೆಯೂ ದಿಟ್ಟ ಪ್ರದರ್ಶನ ನೀಡಿ 132 ಎಸೆತಗಳಿಂದ 72 ರನ್‌ ಬಾರಿಸಿದರು (12 ಬೌಂಡರಿ). ಇದು ಅವರ ಮೊದಲ ಅರ್ಧ ಶತಕ. ಈ ಬೌಲಿಂಗ್‌ ಬಾಲಂಗೋಚಿಗಳು 43.1 ಓವರ್‌ ನಿಭಾಯಿಸಿದ್ದು ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ ಮನ್‌ಗಳಿಗೆ ಪಾಠದಂತಿತ್ತು.

ಇವರಿಗಿಂತ ಮುನ್ನ ಕಪ್ತಾನನ ಆಟವೊಂದನ್ನು ಪ್ರದರ್ಶಿಸಿದ ಫಾ ಡು ಪ್ಲೆಸಿಸ್‌ 117 ಎಸೆತಗಳಿಂದ 64 ರನ್‌ ಬಾರಿಸಿದರು. ಇದರಲ್ಲಿ 9 ಬೌಂಡರಿ ಹಾಗೂ ಇನ್ನಿಂಗ್ಸಿನ ಏಕೈಕ ಸಿಕ್ಸರ್‌ ಒಳಗೊಂಡಿತ್ತು. ವಿಕೆಟ್‌ ಕೀಪರ್‌ ಕ್ವಿಂಟನ್‌ ಡಿ ಕಾಕ್‌ 48 ಎಸೆತ ನಿಭಾಯಿಸಿ 31 ರನ್‌ ಮಾಡಿದರು (7 ಬೌಂಡರಿ).

ಮೊದಲ ಅವಧಿಯಲ್ಲಿ ಕುಸಿತ
ದಕ್ಷಿಣ ಆಫ್ರಿಕಾ 3ಕ್ಕೆ 36 ರನ್‌ ಮಾಡಿದಲ್ಲಿಂದ 3ನೇ ದಿನದಾಟ ಮುಂದುವರಿಸಿತ್ತು. ಸ್ಕೋರ್‌ 41ಕ್ಕೆ ಏರುವಷ್ಟರಲ್ಲಿ ನೈಟ್‌ ವಾಚ್‌ಮನ್‌ ಆಗಿ ಬಂದಿದ್ದ ಅನ್ರಿಚ್‌ ನೋರ್ಜೆ ಪೆವಿಲಿಯನ್‌ ಸೇರಿಕೊಂಡರು. ದಿನದ ಈ ಮೊದಲ ಯಶಸ್ಸು ಶಮಿ ಪಾಲಾಯಿತು. 12 ರನ್‌ ಒಟ್ಟುಗೂಡುವಷ್ಟರಲ್ಲಿ ಮತ್ತೂಬ್ಬ ನಾಟೌಟ್‌ ಬ್ಯಾಟ್ಸ್‌ಮನ್‌ ಡಿ ಬ್ರುಯಿನ್‌ (30) ವಿಕೆಟ್‌ ಕೂಡ ಬಡಮೇಲಾಯಿತು. ಲಂಚ್‌ ವೇಳೆ 136ಕ್ಕೆ 6 ವಿಕೆಟ್‌ ಉರುಳಿತ್ತು. ಟೀ ಸ್ಕೋರ್‌
8 ವಿಕೆಟಿಗೆ 197.

3ನೇ ದಿನವಷ್ಟೇ ದಾಳಿಗಿಳಿದ ಆರ್‌. ಅಶ್ವಿ‌ನ್‌ ಭಾರತದ ಯಶಸ್ವಿ ಬೌಲರ್‌ ಆಗಿ ಮೂಡಿಬಂದರು (69ಕ್ಕೆ 4). ಇದರಲ್ಲಿ ಡು ಪ್ಲೆಸಿಸ್‌ ಮತ್ತು ಡಿ ಕಾಕ್‌ ಅವರ ಬಹುಮೂಲ್ಯ ವಿಕೆಟ್‌ ಕೂಡ ಸೇರಿತ್ತು. ಉಮೇಶ್‌ ಯಾದವ್‌ 3, ಶಮಿ 2 ಹಾಗೂ ಜಡೇಜ ಒಂದು ವಿಕೆಟ್‌ ಕೆಡವಿದರು.

ನೋವಿನ ನಡುವೆಯೂ ಮಹಾರಾಜ್‌ ಹೋರಾಟ
10ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಕೇಶವ್‌ ಮಹಾರಾಜ್‌ ಭುಜದ ನೋವನ್ನೂ ಲೆಕ್ಕಿಸದೆ ಬ್ಯಾಟಿಂಗ್‌ ಹೋರಾಟ ನಡೆಸಿ ಗಮನ ಸೆಳೆದರು. “ಭುಜ ಸಿಕ್ಕಾಪಟ್ಟೆ ನೋಯುತ್ತಿತ್ತು. ನಿನ್ನೆ ಡೈವ್‌ ಹೊಡೆಯುವ ವೇಳೆ ನೋವು ಉಲ್ಬಣಗೊಂಡಿತು. ಸರಣಿಯ ಉಳಿದ ಅವಧಿಗೆ ಇದರಿಂದ ಸಮಸ್ಯೆ ಎದುರಾಗದು’ ಎಂಬುದು ಪ್ರಧಾನ ಸ್ಪಿನ್ನರ್‌ ಆಗಿರುವ ಕೇಶವ್‌ ಮಹಾರಾಜ್‌ ಅವರ ವಿಶ್ವಾಸ.

ರೋಹಿತ್‌ ಕಾಲಿಗೆರಗಿದ ಅಭಿಮಾನಿ!
ಭಾರತದ ಕ್ರಿಕೆಟ್‌ ಪಂದ್ಯಗಳ ವೇಳೆ ವೀಕ್ಷರು ಭದ್ರತಾ ಸಿಬಂದಿಗಳ ಕಣ್ತಪ್ಪಿಸಿ ಅಂಗಳಕ್ಕೆ ನುಗ್ಗುವುದು ಈಗ ಮಾಮೂಲಾಗಿದೆ. ಇತ್ತೀಚಿನ ಉದಾಹರಣೆ ನೀಡುವುದಾದರೆ, ದಕ್ಷಿಣ ಆಫ್ರಿಕಾ ಎದುರಿನ ಮೊಹಾಲಿ ಟಿ20 ಪಂದ್ಯದ ವೇಳೆ 2 ಸಲ ಈ ಘಟನೆ ಸಂಭವಿಸಿತ್ತು. ಬಳಿಕ ವಿಶಾಖಪಟ್ಟಣ ಟೆಸ್ಟ್‌ ಪಂದ್ಯದ ವೇಳೆಯೂ ಈ ವಿದ್ಯಮಾನ ಮರುಕಳಿಸಿತ್ತು. ಇದೀಗ ಪುಣೆ ಟೆಸ್ಟ್‌ ಪಂದ್ಯವೂ ಇದಕ್ಕೆ ಸಾಕ್ಷಿಯಾಗಿದೆ.

ಶನಿವಾರದ ಭೋಜನ ವಿರಾಮಾನಂತರದ ಆಟದ ವೇಳೆ ವೀಕ್ಷಕನೊಬ್ಬ ಅಂಗಳಕ್ಕೆ ಹಾರಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ರೋಹಿತ್‌ ಶರ್ಮ ಕಾಲಿಗೆರಗಿದ್ದಾನೆ. ಆತನನ್ನು ರೋಹಿತ್‌ ಎತ್ತಿ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಆಗ ರೋಹಿತ್‌ ಕೂಡ ಬಿದ್ದಿದ್ದಾರೆ. ಅಷ್ಟರಲ್ಲಿ ಭದ್ರತಾ ಸಿಬಂದಿಗಳು ಆ ವೀಕ್ಷಕನನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಗಾವಸ್ಕರ್‌ ಆಕ್ರೋಶ
ಈ ಘಟನೆಗೆ ಮಾಜಿ ಕ್ರಿಕೆಟಿಗ ಸುನೀಲ್‌ ಗಾವಸ್ಕರ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭದ್ರತಾ ಸಿಬಂದಿಗಳು ವೀಕ್ಷಕರತ್ತ ಗಮನ ನೀಡುವ ಬದಲು ಪಂದ್ಯವನ್ನು ನೋಡುತ್ತ ನಿಲ್ಲುವುದೇ ಇದಕ್ಕೆ ಕಾರಣ ಎಂದಿದ್ದಾರೆ.
ಭದ್ರತಾ ಪಡೆಯವರು ಪುಕ್ಕಟೆಯಾಗಿ ಪಂದ್ಯ ನೋಡಲು ಇಲ್ಲಿರುವುದಲ್ಲ, ಇಂಥ ಘಟನೆಗಳಿಂದ ಪಂದ್ಯಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳುವುದು ಇವರ ಕರ್ತವ್ಯ ಎಂದು ಗಾವಸ್ಕರ್‌ ಎಚ್ಚರಿಸಿದರು.

ಸ್ಕೋರ್ ಪಟ್ಟಿ

ಭಾರತ ಪ್ರಥಮ ಇನ್ನಿಂಗ್ಸ್‌
5 ವಿಕೆಟಿಗೆ ಡಿಕ್ಲೇರ್‌ 601
ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್‌
ಡೀನ್‌ ಎಲ್ಗರ್‌ ಬಿ ಯಾದವ್‌ 6
ಮಾರ್ಕ್‌ರಮ್‌ ಎಲ್‌ಬಿಡಬ್ಲ್ಯು ಯಾದವ್‌ 0
ಡಿ ಬ್ರುಯಿನ್‌ ಸಿ ಸಾಹಾ ಬಿ ಯಾದವ್‌ 30
ಟೆಂಬ ಬವುಮ ಸಿ ಸಾಹಾ ಬಿ ಶಮಿ 8
ಅನ್ರಿಚ್‌ ನೋರ್ಜೆ ಸಿ ಕೊಹ್ಲಿ ಬಿ ಶಮಿ 3
ಫಾ ಡು ಪ್ಲೆಸಿಸ್‌ ಸಿ ರಹಾನೆ ಬಿ ಅಶ್ವಿ‌ನ್‌ 64
ಕ್ವಿಂಟನ್‌ ಡಿ ಕಾಕ್‌ ಬಿ ಅಶ್ವಿ‌ನ್‌ 31
ಮುತ್ತುಸ್ವಾಮಿ ಎಲ್‌ಬಿಡಬ್ಲ್ಯು ಜಡೇಜ 7
ಫಿಲಾಂಡರ್‌ ಔಟಾಗದೆ 44
ಮಹಾರಾಜ್‌ ಸಿ ರೋಹಿತ್‌ ಬಿ ಅಶ್ವಿ‌ನ್‌ 72
ಕಾಗಿಸೊ ರಬಾಡ ಎಲ್‌ಬಿಡಬ್ಲ್ಯು ಅಶ್ವಿ‌ನ್‌ 2
ಇತರ 8
ಒಟ್ಟು (ಆಲೌಟ್‌) 275
ವಿಕೆಟ್‌ ಪತನ: 1-2, 2-13, 3-33, 4-41, 5-53, 6-128, 7-139, 8-162, 9-271.

ಬೌಲಿಂಗ್‌:
ಇಶಾಂತ್‌ ಶರ್ಮ 10-1-36-0
ಉಮೇಶ್‌ ಯಾದವ್‌ 13-2-37-3
ರವೀಂದ್ರ ಜಡೇಜ 36-15-81-1
ಮೊಹಮ್ಮದ್‌ ಶಮಿ 17-3-44-2
ಆರ್‌. ಅಶ್ವಿ‌ನ್‌ 28.4-9-69-4
ರೋಹಿತ್‌ ಶರ್ಮ 1-1-0-0