ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್ ಗೆ ಜನರಿಂದ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಇದೀಗ ಕ್ಯಾಂಟೀನ್ ಅನ್ನು ಕೇವಲ ರಾಜಧಾನಿಯ 198 ವಾರ್ಡ್ ಗಳಿಗೆ ಸೀಮಿತಗೊಳಿಸದೇ ಜನ ಸಂಖ್ಯೆ ಹೆಚ್ಚಾಗಿರುವ ಕಡೆಗಳಲ್ಲಿ ಹಾಗೂ ಆಸ್ಪತ್ರೆ, ಶಾಲಾ-ಕಾಲೇಜು, ರೈಲ್ವೇ ನಿಲ್ದಾಣಗಳಲ್ಲಿ ಕ್ಯಾಂಟೀನ್ ಆರಂಭಿಸಲಾಗುವುದು ಎಂದು ಸಿ.ಎಂ ಘೋಷಿಸಿದ್ದಾರೆ.
ನಗರದಲ್ಲಿ ಹೆಚ್ಚು ಜನ ಸಂಖ್ಯೆ ಇರುವ ಕಡೆಗಳಲ್ಲಿ ಹಾಗೂ ರೈಲ್ವೇ ನಿಲ್ದಾಣ, ಆಸ್ಪತ್ರೆಗಳು, ಬಸ್ ನಿಲ್ದಾಣಗಳಲ್ಲಿ ಮತ್ತು ಶಾಲಾ, ಕಾಲೇಜುಗಳಲ್ಲಿ ಆರಂಭಿಸಲು ಬಿಬಿಎಂಪಿ ಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ವಿಧಾನ ಸೌಧ ಮುಂಭಾಗದಲ್ಲಿ 24 ಮೊಬೈಲ್ ಇಂದಿರಾ ಕ್ಯಾಟೀನ್ ಉದ್ಘಾಟಿಸಿದ ಅವರು, ಈಗಾಗಲೇ ಬಿಬಿಎಂಪಿ ಯ 174 ಕ್ಕೂ ಅಧಿಕ ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿದೆ. ಉಳಿದ 24 ಕಡೆಗಳಲ್ಲಿ ಕ್ಯಾಂಟೀನ್ ಗೆ ಸೂಕ್ತ ಸ್ಥಳವಕಾಶ ದೊರೆಯದ ಹಿನ್ನೆಲೆಯಲ್ಲಿ ನಾವು ಅಲ್ಲಿ ಮೊಬೈಲ್ ಇಂದಿರಾ ಕ್ಯಾಟೀನ್ ಯೋಜನೆ ಆರಂಭಿಸಿದ್ದೇವೆ. ಇದು ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಕಾರ್ಯ ನಿರ್ವಹಿಸಲಿದ್ದು, ಬಡ ಜನರಿಗೆ ದಿನ ನಿತ್ಯ ಊಟ, ತಿಂಡಿ ಪೂರೈಸುತ್ತಿದೆ ಎಂದು ತಿಳಿಸಿದರು.
ವರದಿ : ಕಹಳೆ ನ್ಯೂಸ್.