ಶಾಸಕರ ಭವನದ ಬಳಿಯಿರುವ ವಾಲ್ಮೀಕಿ ಪ್ರತಿಮೆ ಬಳಿ ಮಾಧ್ಯಮದವರಿಗೆ ನಿರ್ಬಂಧ ; ಸಿಎಂ ಕಾರ್ಯಕ್ರಮ ಪ್ರಸಾರ ಮಾಡದಿರಲು ನಿರ್ಧಾರ – ಕಹಳೆ ನ್ಯೂಸ್
ಬೆಂಗಳೂರು: ಶಾಸಕರ ಭವನದ ಬಳಿಯಿರುವ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸಿಎಂ ಯಡಿಯೂರಪ್ಪ ಅವರ ಕಾರ್ಯಕ್ರಮವನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಿರಲು ಭಾನುವಾರ ಮಾಧ್ಯಮ ಪ್ರತಿನಿಧಿಗಳು ನಿರ್ಧರಿಸಿದ್ದಾರೆ.
ಸಿಎಂ ಯಡಿಯೂರಪ್ಪ ಅವರು ವಾಲ್ಮೀಕಿ ಪ್ರತಿಮೆ ಬಳಿ ಬರುವ ಮೊದಲು ಮಾಧ್ಯಮದವರು ಅಲ್ಲಿಗೆ ತೆರಳಿದ್ದರು. ಆದರೆ ಪೊಲೀಸರು ವಾಲ್ಮೀಕಿ ಪ್ರತಿಮೆ ಬಳಿಗೆ ಹೋಗದಂತೆ ಮಾಧ್ಯಮದವರನ್ನು ತಡೆದರು. ಸಿಎಂ ಬರುವವರೆಗೆ ಯಾರನ್ನೂ ಒಳಗೆ ಬಿಡದಂತೆ ಡಿಸಿಪಿ ರಮೇಶ್ ಆದೇಶ ನೀಡಿದ್ದಾರೆ ಎಂದು ಸಬೂಬು ನೀಡಿದ್ದರು.
ಇದರಿಂದ ಸಿಟ್ಟಿಗೆದ್ದ ಮಾಧ್ಯಮ ಪ್ರತಿನಿಧಿಗಳು ಈ ಬಗ್ಗೆ ಮುಖ್ಯಮಂತ್ರಿಗಳ ಮಾಧ್ಯಮ ಸಂಚಾಲಕರ ಗಮನಕ್ಕೆ ತಂದರು. ಸಿಎಂ ಕಚೇರಿಯಿಂದ ಸೂಚನೆ ಬಂದ ನಂತರವಷ್ಟೇ ಪೊಲೀಸರು ಮಾಧ್ಯಮದವರನ್ನು ಒಳ ಹೋಗಲು ತಿಳಿಸಿದರು. ಆದರೆ ಒಳ ಹೋಗದೆ ಪ್ರತಿಭಟಿಸಿದ ಮಾಧ್ಯಮ ಪ್ರತಿನಿಧಿಗಳು, ಪ್ರತಿದಿನ ಸಿಎಂ ಮಾಧ್ಯಮ ಸಂಚಾಲಕರ ಗಮನಕ್ಕೆ ತಂದ ಬಳಿಕವಷ್ಟೇ ನಮಗೆ ಅವಕಾಶ ನೀಡಲಾಗುತ್ತಿದೆ. ಇಲ್ಲವಾದರೆ ಎಲ್ಲಿಯೂ ಪ್ರವೇಶಕ್ಕೆ ಅವಕಾಶ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಶಾಸಕರ ಭವನದ ಗೇಟ್ ಬಳಿ ಪಾಸ್ ಇರುವ ಮಾಧ್ಯಮ ವಾಹನಗಳಿಗೂ ನಿರ್ಬಂಧ ಹಾಕುತ್ತಾರೆ. ಪ್ರತಿದಿನ ಹೀಗೆ ಕಿರುಕುಳ ನೀಡುತ್ತಿದ್ದಾರೆ. ಅದ್ದರಿಂದ ಇಂದಿನ ಸಿಎಂ ಕಾರ್ಯಕ್ರಮವನ್ನು ಯಾವ ಮಾಧ್ಯಮದಲ್ಲೂ ಪ್ರಸಾರ ಮಾಡಲ್ಲ. ಖುದ್ದು ಸಿಎಂ ಅವರೇ ಈ ಬಗ್ಗೆ ಮಾತನಾಡಬೇಕು ಎಂದು ಪಟ್ಟು ಹಿಡಿದರು.