ಭಾರತೀಯ ಕಲಾಪ್ರಕಾರಗಳಿಗೆ ಅಳಿವಿಲ್ಲ ; ಧರ್ಮಸ್ಥಳ ವಸಂತ ಮಹಲ್‌ನಲ್ಲಿ ನಡೆಯುತ್ತಿರುವ ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ – ಕಹಳೆ ನ್ಯೂಸ್

ಬೆಳ್ತಂಗಡಿ: ಪಾಶ್ಚಾತ್ಯ ಸಂಗೀತದ ಪ್ರಭಾವದಿಂದ ಯಕ್ಷಗಾನ, ಜನಪದ ಕಲೆಗಳು, ಶಾಸ್ತ್ರೀಯ ಸಂಗೀತ ಮೊದಲಾದ ಭಾರತೀಯ ಕಲಾ ಪ್ರಕಾರಗಳು ಮರೆಯಾಗಬಹುದೆಂಬ ಆತಂಕ ಅಗತ್ಯವಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳ ವಸಂತ ಮಹಲ್‌ನಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಂಗಳೂರಿನ ಸ್ವರಮೂರ್ತಿ ವಿ.ಎನ್. ರಾವ್ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ಎರಡು ದಿನ ನಡೆಯುವ ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವದಲ್ಲಿ ಶನಿವಾರ ಅವರು ಮಾತನಾಡಿದರು.
ಅನೇಕ ಯುವ ಕಲಾವಿದರು ವಿವಿಧ ಭಾರತೀಯ ಸಂಗೀತ ಕಲಾಪ್ರಕಾರಗಳನ್ನು ಆಸಕ್ತಿಯಿಂದ ಅಧ್ಯಯನ ಮಾಡಿ ಇಂದು ಜಾಗತಿಕ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿರುವುದೇ ನಮ್ಮ ಕಲಾ ಪ್ರಕಾರಗಳಿಗೆ ಅಳಿವಿಲ್ಲ ಎಂಬುದಕ್ಕೆ ಸಾಕ್ಷಿ. ಯಾವುದೇ ರೀತಿಯ ಪಾಶ್ಚಾತ್ಯ ಸಂಗೀತ ಹಾಗೂ ವಾದ್ಯಗಳು ಭಾರತೀಯ ಮೂಲದ ಸಂಗೀತ ಪರಂಪರೆ ಮೀರಿಸಲು ಸಾಧ್ಯವಿಲ್ಲ. ಭಾರತೀಯ ಸಂಗೀತ ಪ್ರಕಾರದ ವಾದ್ಯಗಳನ್ನು, ಸಂಗೀತ ಪರಿಕರಗಳನ್ನು ಉಳಿಸುವ ಕಾರ್ಯ ಮಾಡಬೇಕು ಎಂದರು.
ನವರಾತ್ರಿ ಸಂದರ್ಭ ಧರ್ಮಸ್ಥಳದಲ್ಲಿ ಕಲಾಸೇವೆ ನೀಡಿದ 102 ಚೆಂಡೆ ವಾದನ ತಂಡಗಳು, 40 ಡೋಲು ವಾದಕರ ಕಲಾಪ್ರಭುತ್ವ ಮತ್ತು ಸೊಗಡನ್ನು ಹೆಗ್ಗಡೆಯವರು ಶ್ಲಾಘಿಸಿದರು.
ಗೋಪಾಲನಾಥ್ ಸ್ಮರಣೆ: ಶುಕ್ರವಾರ ನಿಧನರಾದ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ ಹೆಗ್ಗಡೆಯವರು, ಈ ಸಮಾರಂಭಕ್ಕೆ ಅವರನ್ನು ಆಹ್ವಾನಿಸುವ ಯೋಚನೆ ಇತ್ತು. ಇತ್ತೀಚೆಗೆ ಬಜ್ಪೆಯಿಂದ ಬೆಂಗಳೂರಿಗೆ ವಿಮಾನದಲ್ಲಿ ಹೋಗುವಾಗ ಅವರೊಂದಿಗೆ ಜತೆಯಾಗಿ ಪ್ರಯಾಣಿಸಿದ್ದು ಆತ್ಮೀಯವಾಗಿ ಮಾತುಕತೆ ನಡೆಸಿರುವುದನ್ನು ಸ್ಮರಿಸಿದರು.
ಪ್ರಶಸ್ತಿ ಪುರಸ್ಕೃತ ಎ. ಕನ್ಯಾಕುಮಾರಿ ಮಾತನಾಡಿ, ತನ್ನ ಕಲಾಸಾಧನೆಗೆ ಪ್ರೋತ್ಸಾಹಿಸಿದ ಎಂ.ಎಲ್.ವಸಂತ ಕುಮಾರಿ, ಕದ್ರಿ ಗೋಪಾಲನಾಥ್ ಮೊದಲಾದವರನ್ನು ಸ್ಮರಿಸಿದರು. ಧರ್ಮಸ್ಥಳದಲ್ಲಿ ಪ್ರಶಸ್ತಿ ಪಡೆದು ತನ್ನ ಜನ್ಮ ಸಾರ್ಥಕವಾಗಿದೆ ಎಂದರು.
ಮಂಜುನಾಥ ಸ್ವಾಮಿಯ ಅನುಗ್ರಹದಿಂದ ನಿರಂತರ ಕಲಾಸೇವೆ ಮಾಡುವುದಾಗಿ ಪ್ರಶಸ್ತಿ ಪುರಸ್ಕೃತ ನೀಲಾ ರಾಂಗೋಪಾಲ್ ಹೇಳಿದರು. ಹೇಮಾವತಿ ವಿ. ಹೆಗ್ಗಡೆ ಸಮಾರಂಭ ಉದ್ಘಾಟಿಸಿದರು. ಬೆಂಗಳೂರಿನ ಸ್ವರಮೂರ್ತಿ ವಿ.ಎನ್.ರಾವ್ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಮೈಸೂರು ವಿ.ಸುಬ್ರಹ್ಮಣ್ಯ ಪ್ರಸ್ತಾವಿಸಿ, ವೀಣೆ ಮತ್ತು ಮೈಸೂರಿಗೆ ಇರುವ ಅವಿನಾಭಾವ ಸಂಬಂಧವನ್ನು ವಿವರಿಸಿದರು. ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವದ ಮೂಲಕ ಅನೇಕ ಹಿರಿಯ ಕಲಾವಿದರನ್ನು ಗೌರವಿಸಲಾಗುತ್ತದೆ ಎಂದರು.
ಸಂಗೀತೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಡಿ.ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಶ್ಯಾಮ ಸುಂದರ ಶರ್ಮ ವಂದಿಸಿದರು. ರಾಧಿಕಾ ಕಾರ್ಯಕ್ರಮ ನಿರ್ವಹಿಸಿದರು.
ವೀಣೆ ಶೇಷಣ್ಣ ಸ್ಮಾರಕ ಪ್ರಶಸ್ತಿ ಪ್ರದಾನ: ಸಂಗೀತ ಕಲಾನಿಧಿ ಎ. ಕನ್ಯಾಕುಮಾರಿ ಅವರಿಗೆ ವೀಣೆ ಶೇಷಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಹಾಗೂ ಸಂಗೀತ ಕಲಾರತ್ನ ನೀಲಾ ರಾಂಗೋಪಾಲ್ ಅವರಿಗೆ ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ವೀರೇಂದ್ರ ಹೆಗ್ಗಡೆಯವರು ಪ್ರದಾನ ಮಾಡಿದರು. ವೀಣೆ ಶೇಷಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ಹೆಗ್ಗಡೆಯವರು ಪ್ರಾಯೋಜಿಸಿದ್ದು, ಒಂದು ಲಕ್ಷ ರೂ. ನಗದು, ವೀಣೆ ಶೇಷಣ್ಣನವರ ಪುತ್ಥಳಿ, ಸೀರೆ, ಸನ್ಮಾನ ಪತ್ರ ಹಾಗೂ ಮಂಗಳದ್ರವ್ಯಗಳು, ಬೆಳ್ಳಿಯ ಸ್ಮರಣಿಕೆ ಒಳಗೊಂಡಿತ್ತು. ಸಂಗೀತ ಕಲಾರತ್ನ ನೀಲಾ ರಾಂಗೋಪಾಲ್ ಅವರಿಗೆ ಒಂದು ಲಕ್ಷ ರೂ.ನಗದು, ವೀಣೆ ಶೇಷಣ್ಣನವರ ಪುತ್ಥಳಿ, ಸೀರೆ, ಸನ್ಮಾನ ಪತ್ರ ಹಾಗೂ ಮಂಗಳ ದ್ರವ್ಯಗಳು ಮತ್ತು ಬೆಳ್ಳಿಯ ಸ್ಮರಣಿಕೆ ಸಹಿತ ವಿ.ಎನ್.ರಾವ್ ಸ್ಮಾರಕ ಪ್ರಶಸ್ತಿ ನೀಡಲಾಗಿದ್ದು, ಬೆಂಗಳೂರಿನ ನ್ಯಾಷನಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಎ.ಎಚ್.ರಾಮರಾವ್ ಹಾಗೂ ಬೆಂಗಳೂರಿನ ಸುಧಾ ಆರ್.ರಾವ್ ಪ್ರಾಯೋಜಿಸಿದ್ದಾರೆ.
ಸಂಗೀತ ಕಾರ್ಯಕ್ರಮ: ಬೆಂಗಳೂರಿನ ಪ್ರೊ.ಅರವಿಂದ ಹೆಬ್ಬಾರ್ ಮತ್ತು ಬಳಗದವರಿಂದ ವೃಂದಗಾಯನ, ಡಾ. ಸಹನಾ ಎಸ್.ವಿ. ಅವರಿಂದ ವೀಣಾ ವಾದನ ಕಾರ್ಯಕ್ರಮ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ 80 ಮಂದಿ ಕಲಾವಿದರು ಸಂಗೀತೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಪ್ರತಿ ವರ್ಷ ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ ಮತ್ತು ಹಿರಿಯ ಕಲಾವಿದರ ಗೌರವ ಕಾರ್ಯಕ್ರಮ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಆಯೋಜಿಸಲಾಗುತ್ತದೆ.
ಇಂದಿನ ಕಾರ್ಯಕ್ರಮ: ಅ.13ರಂದು ಸಾಯಂಕಾಲ 3.30ರಿಂದ ವಿದ್ವಾನ್ ಬಾಲಸುಬ್ರಹ್ಮಣ್ಯ ಮತ್ತು ಬಳಗದವರಿಂದ ವೃಂದಗಾಯನ ನಡೆಯಲಿದೆ. ವಿದುಷಿ ಸಿ.ಎಸ್. ಉಷಾ ಪಿಟೀಲಿನಲ್ಲಿ ಮತ್ತು ವಿದ್ವಾನ್ ಬಿ.ಎಸ್. ಆನಂದ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಸಾಯಂಕಾಲ 4.30ರಿಂದ ಡಾ.ಗೀತಾ ಭಟ್ ಅವರಿಂದ ವೀಣಾವಾದನ, 5.30ರಿಂದ ನೀಲಾ ರಾಂಗೋಪಾಲ್ ಅವರ ಗಾಯನ ಕಾರ್ಯಕ್ರಮ, 7.30ರಿಂದ ವಿದ್ವಾನ್ ರಾಮಕೃಷ್ಣನ್ ಮೂರ್ತಿ ಮತ್ತು ಬಳಗದವರಿಂದ ಸಂಗೀತ ಗಾಯನ ನಡೆಯಲಿದೆ.