ರಾಜ್ಯ ಸರ್ಕಾರ ದತ್ತಪೀಠ ವಿವಾದವನ್ನು ರಾಜಕೀಯಗೊಳಿಸದೆ ವಾಸ್ತವ ನೆಲೆಯಲ್ಲಿ ಪರಿಹರಿಸಲಿ ; ದತ್ತಪೀಠದಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ – ಕಹಳೆ ನ್ಯೂಸ್
ಚಿಕ್ಕಮಗಳೂರು: ರಾಜ್ಯ ಸರ್ಕಾರ ದತ್ತಪೀಠ ವಿವಾದವನ್ನು ರಾಜಕೀಯಗೊಳಿಸದೆ ವಾಸ್ತವ ನೆಲೆಯಲ್ಲಿ ಪರಿಹರಿಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮನವಿ ಮಾಡಿದರು.
ದತ್ತಮಾಲಾ ಅಭಿಯಾನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಧಾರ್ವಿುಕ ಸಭೆಯಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷದ ಹಿಂದೆ ದೇಶದ ಹಿಂದು ದೇವಾಲಯಗಳ ಮೇಲೆ ಮುಸ್ಲಿಂ ರಾಜರು ದಾಳಿ ಮಾಡಿ ಮಸೀದಿ ಕಟ್ಟಿದ್ದಾರೆ. ಇದರಲ್ಲಿ ದತ್ತಪೀಠವೂ ಒಂದು. ದತ್ತಾತ್ರೇಯ ಗುರು ತಪಸ್ಸು ಮಾಡಿದ ಜಾಗ ಬಾಬಾಬುಡನ್ ಅತಿಕ್ರಮಣವಾಗಿದೆ. ಇದು ಹಿಂದುಗಳಿಗೆ ಹಸ್ತಾಂತರವಾಗಲೇ ಬೇಕು. ಇದಕ್ಕೆ ನ್ಯಾಯಾಲಯ ಆದೇಶ ಬರುವವರೆಗೂ ಹೋರಾಟ ಮಾಡುತ್ತೇವೆ. ಹಾಗೆಯೇ ಹಿಂದು- ಮುಸ್ಲಿಮರು ಸಹೋದರರಂತೆ ಬದುಕುವ ದಾರಿ ಹುಡುಕಬೇಕಿದೆ. ಇದರಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ರಾಜ್ಯ ಸರ್ಕಾರ ದತ್ತಪೀಠದ ವಿವಾದವನ್ನು ದಾಖಲೆ ಆಧಾರದಲ್ಲಿ ಪರಿಹರಿಸಬೇಕು. ಹಿಂದುತ್ವ ಹೋರಾಟದ ಮೂಲಕವೇ ದೇಶ ಹಾಗೂ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಜಕಾರಣ, ಅಧಿಕಾರಕ್ಕೆ ಹಿಂದುತ್ವ ಬಳಕೆ ಆಗಬಾರದಿತ್ತು. ಆದರೂ ಬಳಕೆಯಾಗಿದೆ. ಈಗ ಸರ್ಕಾರಗಳು ಹಿಂದುಗಳಿಗೆ ನ್ಯಾಯ ಕಲ್ಪಿಸುವ ಕೆಲಸ ಮಾಡದಿದ್ದರೆ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.