ಕಡಬ (16) : ಮೀನಿಗೆ ಗಾಳ ಹಾಕಲೆಂದು ಹೋದ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ಇಂದು ಸಂಜೆ ವರದಿಯಾಗಿದೆ. ಬಳ್ಪ ಗ್ರಾಮದ ಕೊನ್ನಡ್ಕ ಪುಟ್ಟವೇರ ಎಂಬುವವರು ಮಗ ಗುರುರಾಜ್ ಅಕ್ಟೋಬರ್ 14ರಂದು ಗಾಳ ಹಾಕಿ ಮೀನು ಹಿಡಿಯಲೆಂದು ನದಿಗೆ ಹೋಗಿದ್ದರು ಎನ್ನಲಾಗಿತ್ತು,ಆದರೆ ಗುರುರಾಜ್ ರಾತ್ರಿಯಾದರು ಹಿಂತಿರುಗಿ ಬರದಿದ್ದುದರಿಂದ ಅಕ್ಟೋಬರ್ 15ರಂದು ಮೃತನ ಸಹೋದರ ರಾಮು ಎಂಬುವವರು ಸುಬ್ರಹ್ಮಣ್ಯ ಪೊಲೀಸರಿಗೆ ನಾಪತ್ತೆ ಬಗ್ಗೆ ದೂರು ನೀಡಿದ್ದಾರೆ. ದೂರ ದಾಖಲಿಸಿ ತನಿಖೆ ಆರಂಭಿಸಿದ ಸುಬ್ರಹ್ಮಣ್ಯ ಪೋಲೀಸರು ಕಾಣೆಯಾದ ವ್ಯಕ್ತಿ ಗಾಳ ಹಾಕಲು ಹೋದ ಜಾಗಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ, ಜಾರಿಬಿದ್ದಿರುವ ಕುರುಹುಗಳು ಕಂಡು ಬಂದಿರುವುದಾಗಿ ತಿಳಿದು ಬಂದಿದೆ.
ಆದ್ದುರಿಂದ ಇಂದು ಬೆಳಗ್ಗೆ ಕಾರ್ಯಾಚರಣೆ ಕೈಗೆತ್ತಿಕೊಂಡ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಪ್ರಭಾರ ಠಾಣಾಧಿಕಾರಿ ಚಂದಪ್ಪ ಗೌಡ ಹಾಗೂ ಪುತ್ತೂರು ಅಗ್ನಿಶಾಮಕದಳ ಠಾಣೆಯ ಠಾಣಾಧಿಕಾರಿ ವಿ. ಸುಂದರ್ ನೇತೃತ್ವದ ತಂಡ ಕುಮಾರಧಾರಾ ನದಿಯಲ್ಲಿ ಹುಡುಕಾಟ ಆರಂಭಿಸಿತು. ಬೆಳಗಿನಿಂದ ಹುಡುಕಾಟ ನಡೆಸಿದ ತಂಡಕ್ಕೆ ಸಂಜೆ ವೇಳೆ ಕಡಬ ತಾಲೂಕಿನ ಕೋಡಿಂಬಾಳದ ಮಜ್ಜಾರು ಸಮೀಪ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸಮುದಾಯ ಆಸ್ಪತ್ರೆಗೆ ರವಾನಿಸಲಾಗಿದೆ.