Sunday, November 24, 2024
ಸುದ್ದಿ

ಅಂಗವೈಕಲ್ಯ ಮೀರಿ ನಿಂತ ತೃಶಾಲಕ್ಷ್ಮಿ; ಶಾಲಾ ಯುವಜನೋತ್ಸವದಲ್ಲಿ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೆ ಭಾರಿ ಮೆಚ್ಚುಗೆ –ಕಹಳೆ ನ್ಯೂಸ್

ಬದಿಯಡ್ಕ: ಬಡತನ ಮತ್ತು ಅಂಗವೈಕಲ್ಯ ಮಧ್ಯೆ ಅಂತಃಕರಣದೊಳಗಿನ ಕಲಾಸಕ್ತಿ, ಪ್ರತಿಭೆ ಅನಾವರಣದ ತುಡಿತದಿಂದ ವೇದಿಕೆಯಲ್ಲಿ ನೃತ್ಯ ಮಾಡಿರುವ ಕಾಟುಕುಕ್ಕೆಯ ವಿದ್ಯಾರ್ಥಿನಿ ಸಾಮಾಜಿಕ ಜಾಲತಾಣಗಳ ಮೂಲಕ ಗಮನ ಸೆಳೆದಿದ್ದಾಳೆ.
ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ತೃಶಾಲಕ್ಷ್ಮಿ ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಎರಡೂ ಕಾಲುಗಳ ಪಾದಗಳು ಒಳಕ್ಕೆಳೆಯಲ್ಪಟ್ಟು ನಡೆದಾಡಲೂ ಕಷ್ಟಪಡಬೇಕು. ಆದರೂ ಇತ್ತೀಚೆಗೆ ಶಾಲೆಯಲ್ಲಿ ನಡೆದ ಶಾಲಾ ಯುವಜನೋತ್ಸವದಲ್ಲಿ ಏಕವ್ಯಕ್ತಿ ನೃತ್ಯ ಪ್ರದರ್ಶಿಸಿ ಎಲ್ಲರನ್ನೂ ಬೆರಗಾಗಿಸಿದ್ದಾಳೆ.
ಮೂಲತಃ ಮುಂಡಿತ್ತಡ್ಕ ಸಮೀಪದ ಬೇರಿಕುಂಜೆ ನಿವಾಸಿಯಾದ ಈಕೆ ದಿ.ಅಪ್ಪಣ್ಣ ನಾಯ್ಕ -ಸೀತಾ ದಂಪತಿ ಪುತ್ರಿ. ತಂದೆ ಅಪ್ಪಣ್ಣ ನಾಯ್ಕ ಕಳೆದ ವರ್ಷ ನಿಧನರಾಗಿದ್ದು ತಾಯಿ ಹಾಗೂ ಸಹೋದರಿ(ಸೌಮ್ಯಾ-ಇದೇ ಶಾಲೆಯ 10ನೇ ತರಗತಿ) ಜತೆ ಕಾಟುಕುಕ್ಕೆಯ ಕುಡ್ತಡ್ಕದ ಅಜ್ಜನ ಮನೆಯಲ್ಲಿ ನೆಲೆಸಿದ್ದಾರೆ. ಬಡತನದಲ್ಲೇ ಇದ್ದರೂ ಈಕೆಗೆ ಅಂಗವಿಕಲ ನೆರವು ಹೊರತುಪಡಿಸಿ ಸರ್ಕಾರದ ಬೇರಾವುದೇ ಸೌಲಭ್ಯ ದೊರಕುತ್ತಿಲ್ಲ. ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲೂ ಈಕೆಯ ಹೆಸರಿಲ್ಲ!

ಪ್ರಸ್ತುತ ವಾಸಿಸುತ್ತಿರುವ ಅಜ್ಜನ ಮನೆಯಲ್ಲಿ ಬಡತನವಿದ್ದು, ಇವಳ ಮಾವ ಕೂಡ ಎಂಡೋಪೀಡಿತರು. ಅಜ್ಜ 70ರ ಹರೆಯದ ಈಶ್ವರ ನಾಯ್ಕ ಕೂಲಿ ಕೆಲಸ ಮಾಡುತ್ತಿದ್ದು, ತಾಯಿ ಸೀತಾ ಕುಟುಂಬ ನಿರ್ವಹಣೆಗಾಗಿ ಬೀಡಿ ಕಟ್ಟುತ್ತಿದ್ದಾರೆ. ಪ್ರಜ್ಞಾವಂತ ಸಹೃದಯರ ನೆರವು ಈ ಕುಟುಂಬಕ್ಕೆ ಅಗತ್ಯವಿದ್ದು ನೆರವಾಗಲು ಇಚ್ಛಿಸುವವರು ತೃಶಾಲಕ್ಷ್ಮಿ ಅವರ ತಾಯಿ ಸೀತಾ ಅವರ ಮೊಬೈಲ್ ಸಂಖ್ಯೆ 8129094265 ಸಂಪರ್ಕಿಸಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು