ದಾವಣಗೆರೆ: ನಾಲ್ಕು ದಿನಗಳಿಂದ ಭಾರೀ ಸುದ್ದಿಯಾಗಿದ್ದ ದೇವರ ಕೋಣದ ಪ್ರಕರಣ ಕೊನೆಗೂ ಇತ್ಯರ್ಥವಾಗಿದೆ. ಹೊನ್ನಾಳಿಯ ಹಿರೇಕಲ್ ಮಠದ ಡಾ.ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳು ನಡೆಸಿದ ಶಾಂತಿ ಸಭೆಯಲ್ಲಿ ಒಂದು ಕೋಣಕ್ಕಾಗಿ ಎರಡು ಗ್ರಾಮಗಳ ನಡುವೆ ನಡೆದಿದ್ದ ಜಗಳ ಅಂತ್ಯಗೊಂಡಿದೆ.
ಇದೇ 14ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ದೇವಿಯ ಕೋಣವೊಂದನ್ನು ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ಗ್ರಾಮಸ್ಥರು ತೆಗೆದುಕೊಂಡು ಹೋಗಿದ್ದರು. ಎರಡು ಗ್ರಾಮದವರು ಇದು ನಮ್ಮ ಕೋಣ ಎಂದು ಜಗಳ ಆರಂಭಿಸಿದ್ದರು. ಜಗಳದ ಕುರಿತು ವಿಷಯ ತಿಳಿದ ಪೊಲೀಸರು ಕೋಣವನ್ನು ತಾತ್ಕಾಲಿಕವಾಗಿ ಶಿವಮೊಗ್ಗ ಗೋ ಶಾಲೆಗೆ ಸ್ಥಳಾಂತರಿಸಿದ್ದರು. ಜತೆಗೆ ಕೋಣದ ಡಿಎನ್ ಎ ಪರೀಕ್ಷೆ ಮಾಡಿಸಲು ನಿರ್ಧರಿಸಿದ್ದರು.