ಟ್ರಾಫಿಕ್ ಜಾಮ್ ಮೂಲಕ ಆಂಬುಲೆನ್ಸ್ಗೂ ಟ್ರಬಲ್ ಸೃಷ್ಟಿಸಿದ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಡಿ ಕೆ ಶಿ -ಕಹಳೆ ನ್ಯೂಸ್
ಬೆಂಗಳೂರು: ಯಾವುದೋ ಉದ್ದೇಶ ಮನದಲ್ಲಿಟ್ಟುಕೊಂಡು ಶಕ್ತಿ ಪ್ರದರ್ಶನಕ್ಕಾಗಿ ರೋಡ್ ಶೋ ನಡೆಸಿ ಟ್ರಾಫಿಕ್ ಜಾಮ್ ಟ್ರಬಲ್ ಸೃಷ್ಟಿಸಿ ಸಾರ್ವಜನಿಕ ಸಂಚಾರಕ್ಕೆ ಸಂಚಕಾರ ತಂದ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ತಿಹಾರ್ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿರುವ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಕೆಂಪೇಗೌಡ ವಿಮಾನ ನಿಲ್ದಾಣ ಸಮೀಪದ ಸಾದಹಳ್ಳಿ ಗೇಟ್ನಿಂದ ಆರಂಭಿಸಿದ ರೋಡ್ ಶೋ ಬಗ್ಗೆ ವ್ಯಾಪಕ ಜನಾಕ್ರೋಶಕ್ಕೀಡಾಗಿದೆ.
\
ಡಿಕೆಶಿ ಅಭಿಮಾನಿಗಳು, ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಡಿಕೆಶಿ ಪರವಾದ ಘೋಷಣೆ ಕೂಗಿ ಸಂಭ್ರಮಿಸುತ್ತಾ ರೋಡ್ ಶೋದಲ್ಲಿ ಪಾಲ್ಗೊಂಡಿದ್ದಾರೆ. ಅವರ ಸಂಭ್ರಮಕ್ಕೆ ಡಿಕೆ ಸಿನಿಮಾದ ಟೈಟಲ್ ಸಾಂಗ್ ಹಿನ್ನೆಲೆ ಸಂಗೀತವಾಗಿದ್ದು, ‘ಡಿಕೆ..ನಹಿ..ಡಿಕೆ ಸಾಬ್..ಬೋಲೊ..’ಹಾಡಿಕೆ ಜೈಕಾರ ಹಾಕುತ್ತ ಕೇಕೆ ಹಾಕಿ ಕುಣಿಯುತ್ತಿದ್ದರು.
ಎಲ್ಲೆಲ್ಲಿ ಟ್ರಾಫಿಕ್ ಜಾಮ್: ಪರಿಣಾಮ ಟ್ರಾಫಿಕ್ ಜಾಮ್ ಸಂಭವಿಸಿದ್ದು, ಜನ ಹಿಡಿಶಾಪ ಹಾಕಿದ್ದಾರೆ. ಎಸ್ಟೀಮ್ ಮಾಲ್ ರಸ್ತೆ, ಅಲ್ಲಿಂದ ಹೆಬ್ಬಾಳ, ಕೆಂಪಾಪುರ, ನಾಗವಾರ ಕಡೆಗೆ ಅದೇ ರೀತಿ, ಗೊರಗುಂಟೆ ಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ದಿಕ್ಕುಗಳ ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿದೆ. ಎಸ್ಟೀಮ್ ಮಾಲ್(ಹೆಬ್ಬಾಳ) ರಸ್ತೆಯಿಂದ ನೇರವಾಗಿ ಹೆಬ್ಬಾಳ, ಸಿಬಿಐ, ಪ್ಯಾಲೇಸ್ ರೋಡ್ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.
ಜನಾಕ್ರೋಶ ಹೀಗಿದೆ ನೋಡಿ: ಈ ರಸ್ತೆಗಳಲ್ಲಿ ನಿತ್ಯವೂ ಸಂಚಾರ ದಟ್ಟಣೆ ಜಾಸ್ತಿಯೇ ಇರುತ್ತದೆ. ಈ ನಡುವೆ, ಈ ರೋಡ್ ಶೋಗೆ ಪೊಲೀಸರು ಅನುಮತಿ ನೀಡಿದ್ದಾದರೂ ಏಕೆ? ಸಂಚಾರ ನಿರ್ವಹಣೆಗೆ ಸರ್ಕಾರ ನೇಮಿಸಿದ ಟ್ರಾಫಿಕ್ ಪೊಲೀಸರ ತಂಡ ಎಲ್ಲಿ ಹೋಯಿತು? ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಪ್ಪು ಮಾಡಿದವರು ಜೈಲಿಗೆ ಹೋಗಿರುತ್ತಾರೆ. ಅಂಥವರಿಗೆ ಈ ರೀತಿಯ ಸ್ವಾಗತ ಕೊಡುವ ಅವಶ್ಯಕತೆ ಏನಾದರೂ ಇತ್ತಾ? ಅಕಸ್ಮಾತ್ ಸ್ವಾಗತ ಕೋರುವುದಕ್ಕೆ ಈ ರೀತಿ ರೋಡ್ ಶೋ ಮಾಡಬೇಕಿತ್ತಾ? ಟ್ರಾಫಿಕ್ ಜಾಮ್ ಮಾಡೋದು ಎಷ್ಟು ಸರಿ? ಎಂದೆಲ್ಲ ಪರಸ್ಪರ ಪ್ರಶ್ನೆ ಮಾಡಿಕೊಂಡಿದ್ದಾರೆ.
ಟ್ರಾಫಿಕ್ ಸಿಲುಕಿ ತೊಂದರೆಗೀಡಾದವರಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳು, ತುರ್ತಾಗಿ ಆಸ್ಪತ್ರೆ ತಲುಪಬೇಕಾಗಿದ್ದ ರೋಗಿಗಳು ಸೇರಿದ್ದಾರೆ. ಇದನ್ನೆಲ್ಲ ಈ ನೇತಾರರು ಅರ್ಥಮಾಡಿಕೊಳ್ಳುವುದು ಯಾವಾಗ ಎಂದು ಹಿಡಿಶಾಪ ಹಾಕಿದವರು ಎಷ್ಟೋ ಜನ.