ಪುತ್ತೂರು: ಬೆಂಗಳೂರಿನ ಪ್ರತಿಷ್ಠಿತ ಸ್ವಯಂ ಸೇವಾ ಸಂಸ್ಥೆ ರಿಚ್‍ಮಂಡ್ ಫೆಲೋಶಿಪ್ ಸೊಸೈಟಿ ಬೆಂಗಳೂರು ಇವರು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ 2019, ಇದರ ಅಂಗವಾಗಿ ಜನರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಆತ್ಮಹತ್ಯೆ ತಡೆ’ ಎಂಬ ವಿಷಯದ ಕುರಿತು, ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಅಂತರ್ ಕಾಲೇಜು ಕಿರು ಚಿತ್ರ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳ ತಂಡವು ಭಾಗವಹಿಸಿ, ‘ಅತ್ಯುತ್ತಮ ಕಿರು ಚಿತ್ರ ಪ್ರಶಸ್ತಿ’ ಪಡೆದುಕೊಂಡಿದೆ.
ಈ ಸ್ಪರ್ಧೆಯಲ್ಲಿ ಸುಮಾರು 90 ಕ್ಕೂ ಅಧಿಕ ಕಾಲೇಜುಗಳ ವಿದ್ಯಾರ್ಥಿ ತಂಡಗಳು ಹೆಸರು ನೋಂದಾಯಿಸಿದ್ದು, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ವಿಜಯ ಕುಮಾರ್, ಮಧುಸೂದನ್, ತಿಲಕ್ ರಾಜ್, ಅಮೃತ್ ಮತ್ತು ಹರ್ಷ ಕುಮಾರಿ ಇವರು ತಯಾರಿಸಿ, ನಟಿಸಿದ ‘ಜೀವವು ಕೀಳಲ್ಲ, ಆತ್ಮಹತ್ಯೆ ಕೊನೆಯಲ್ಲ’ ಎಂಬ ಕಿರು ಚಿತ್ರವು ಈ ಪ್ರಶಸ್ತಿಗೆ ಆಯ್ಕೆಗೊಂಡಿತು.
ಬೆಂಗಳೂರಿನಲ್ಲಿ ಅಕ್ಟೋಬರ್ 16 ರಂದು ಜರಗಿದ ಅಂತರ್ ಸ್ವಯಂ ಸೇವಾ ಸಂಸ್ಥೆಗಳ ಮಾನಸಿಕ ಆರೋಗ್ಯ ಜಾಗೃತಿ ಹಬ್ಬದಲ್ಲಿ ರಿಚ್‍ಮಂಡ್ ಫೆಲೋಶಿಪ್ ಸೊಸೈಟಿಯ ನಿರ್ದೇಶಕ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಮಾನಸಿಕ ತಜ್ಞ ಡಾ| ಎಸ್ ಕಲ್ಯಾಣ ಸುಂದರಂ, ಸಂಸ್ಥೆಯ ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಲತಾ ಹೇಮಚಂದ್, ಬೆಂಗಳೂರಿನ ನಿಮ್ಹಾನ್ಸ್ ಇದರ ಕ್ಲಿನಿಕಲ್ ಸೈಕಾಲಜಿ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಬೋಳ ಹಾಗೂ ಬಿ ಚಂದ್ರಶೇಖರ ವಿಜೇತರಿಗೆ ಪ್ರಶಸ್ತಿ ನೀಡಿ, ಅಭಿನಂದಿಸಿದರು.
ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಂಯೋಜಕಿ ಶ್ರೀಮಣಿ, ಸಹಾಯಕ ಪ್ರಾಧ್ಯಾಪಕರಾದ ಪ್ರತಿಭಾ ಕೆ, ಶೀತಲ್ ಕುಮಾರ್, ಸಚಿನ್ ಕುಮಾರ್, ದೀಪಿಕಾ ಎಮ್ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಕಿರುಚಿತ್ರವನ್ನು ಸಿದ್ಧಗೊಳಿಸಿದ್ದರು.