ಚಿಕ್ಕಮಗಳೂರು: ಕೇರಳದ ಪಾಲಕ್ಕಡ್‌ನ ಅಗಳಿ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಗುಂಡಿನ ಚಕಮಕಿಯಲ್ಲಿ ಕಾಫಿನಾಡಿನ ಇಬ್ಬರು ನಕ್ಸಲರು ಹತ್ಯೆಯಾಗಿದ್ದಾರೆ. ಸುರೇಶ್ (36) ಹಾಗೂ ಶ್ರೀಮತಿ (29) ಮೃತಪಟ್ಟವರು.
ಸುರೇಶ್ ಮೂಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದ ಸೋಮಯ್ಯ ಮತ್ತು ಸಣ್ಣಮ್ಮ ದಂಪತಿ ಪುತ್ರ. ಈತ ಹೈಸ್ಕೂಲು ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ತಂದೆ ತೀರಿಕೊಂಡಿದ್ದರು. ಈತನಿಗೆ ಮೂವರು ಸಹೋದರಿಯರು, ಇಬ್ಬರು ಸಹೋದರರು ಇದ್ದಾರೆ. ಮೂವರೂ ಸಹೋದರಿಯರು, ಒಬ್ಬ ಸಹೋದರ ಇದ್ದಾರೆ.
ಸಹೋದರಿಯರ ವಿವಾಹವಾಗಿದೆ. ಸಹೋದರ ಮಂಜುನಾಥ್ ಅವರು ಜೀವನ ನಿರ್ವಹಣೆಗೆ ಕೂಲಿ ಅವಲಂಬಿಸಿದ್ದಾರೆ.
ಸುರೇಶ್ ಪದವಿ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿದ್ದ. 2004ರಲ್ಲಿ ನಕ್ಸಲ್ ಚಳವಳಿ ಪ್ರಭಾವಿತನಾಗಿ ಆ ಗುಂಪು ಸೇರಿಕೊಂಡು ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಎಂದು ಸ್ಥಳೀಯರು ಹೇಳುತ್ತಾರೆ. ಓದಿನಲ್ಲಿ ಚೂಟಿ ಇದ್ದ ಎಂದು ಸ್ನೇಹಿತರು ಹೇಳುತ್ತಾರೆ.
2004ರಲ್ಲಿ ಮನೆ ಬಿಟ್ಟು ಹೋಗಿದ್ದು, 15 ವರ್ಷಗಳಿಂದ ಅಜ್ಞಾತ ವಾಸದಲ್ಲಿದ್ದ. ಈತನ ವಿರುದ್ಧ 21 ಪ್ರಕರಣಗಳು ದಾಖಲಾಗಿವೆ.
ಶ್ರೀಮತಿ ಶೃಂಗೇರಿ ತಾಲ್ಲೂಕಿನ ಬೆಳಗೋಡು ಕೂಡಿಗೆಯ ಪುಟ್ಟೇಗೌಡ ಮತ್ತು ಗಿರಿಜಮ್ಮ ದಂಪತಿ ಪುತ್ರಿ. ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದಾರೆ. ಸಹೋದರಿ ಮದುವೆಯಾಗಿದೆ.
ಮರ ಏರಿ ಸೊಪ್ಪು ಕಡಿಯುವಾಗ ಬಿದ್ದು ಸೊಂಟ ಸ್ವಾಧೀನ ಕಳೆದುಕೊಂಡು ಸಹೋದರನೊಬ್ಬ ನೆಲ ಹಿಡಿದಿದ್ದಾನೆ. ಮತ್ತೊಬ್ಬ ಸಹೋದರೆ ಗಾರೆ ಕೆಲಸ ಮಾಡುತ್ತಾರೆ. ತಂದೆ ಕೃಷಿಕ ಮತ್ತು ತಾಯಿ ಅಂಗನವಾಡಿಯಲ್ಲಿ ಸಹಾಯಕಿಯಾಗಿದ್ದಾರೆ.
ಶ್ರೀಮತಿ ಬೇಗಾರು ಗ್ರಾಮದಲ್ಲಿ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ, ಶೃಂಗೇರಿಯ ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯಲ್ಲಿ ಹೈಸ್ಕೂಲು ಶಿಕ್ಷಣ ಮಾಡಿದ್ದಾರೆ.
ನಕ್ಸಲ್ ಚಳವಳಿ ಕಡೆಗೆ ಪ್ರಭಾವಿತಗೊಂಡ 2008ರಲ್ಲಿ ನಕ್ಸಲ್ ಸಂಗಾತಿಯೊಂದಿಗೆ ತೆರಳಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ಮನೆ ತೊರೆದು 11 ವರ್ಷವಾಗಿದೆ. ಶ್ರೀಮತಿ ವಿರುದ್ಧ 9 ಪ್ರಕರಣಗಳು ಇವೆ.