13ರ ಬಾಲಕನ ಪೋರ್ನ್ ಚಟಕ್ಕೆ 6ರ ಬಾಲೆ ಬಲಿ ; ಪೋಷಕರೇ ನಿಮ್ಮ ಮಕ್ಕಳ ಕೈಗೆ ಮೊಬೈಲ್ ನೀಡುವ ಮೊದಲು ಎಚ್ಚರ..! – ಕಹಳೆ ನ್ಯೂಸ್
ಮುಂಬೈ: 13 ವರ್ಷದ ಬಾಲಕ ತನ್ನ ಆರು ವರ್ಷದ ಸೋದರ ಸಂಬಂಧಿ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಭಯಾನಕ ಘಟನೆ ಮಹಾರಾಷ್ಟ್ರದ ಭಿವಾಂಡಿಯಲ್ಲಿ ನಡೆದಿದೆ.
ಬಾಲಕಿ ಶವವಾಗಿ ಪತ್ತೆಯಾಗಿ ಎರಡು ದಿನಗಳ ನಂತರ ಬಾಲಕ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಬಾಲಕನನ್ನು ಕೊಂಗಾಂವ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಈಗ ಕೇಳಿ ಬಂದಿದೆ.
ವಿಚಾರಣೆಯ ಸಂದರ್ಭದಲ್ಲಿ ಬಾಲಕ ತಾನು ಪೋರ್ನ್ ವಿಡಿಯೋ ನೋಡುವ ಚಟವನ್ನು ಬೆಳೆಸಿಕೊಂಡಿದ್ದೆ ಎನ್ನುವುದನ್ನು ಒಪ್ಪಿಕೊಂಡಿದ್ದಾನೆ. ಈ ಪೋರ್ನ್ ಚಟವೇ ಆತನನ್ನು ಈ ಕೃತ್ಯ ಎಸಗಲು ಪ್ರಚೋದನೆ ನೀಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದೀಪಾವಳಿಯಂದು ಬಾಲಕಿ ತನ್ನ ಮನೆಯ ಹೊರಗೆ ಪಟಾಕಿ ಸಿಡಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಕೃತ್ಯ ಹೇಗೆ ನಡೆಯಿತು?
ಸೋಮವಾರ ಬಾಲಕಿ ಭಿವಾಂಡಿಯಲ್ಲಿರುವ ತನ್ನ ಮನೆಯ ಹೊರಗೆ ಸೋದರ ಸಂಬಂಧಿಗಳೊಂದಿಗೆ ಪಟಾಕಿ ಸಿಡಿಸುತ್ತಿದ್ದಳು. ರಾತ್ರಿ 8.30ರ ಹೊತ್ತಿಗೆ ಬಾಲಕಿ ನಾಪತ್ತೆಯಾಗಿದ್ದು, ತಕ್ಷಣ ಆಕೆಯ ಪೋಷಕರು ಪೊಲೀಸರನ್ನು ಸಂಪರ್ಕಿಸಿ ಬಾಲಕಿ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದಾರೆ. ಸೋಮವಾರ ಪ್ರಕರಣ ನಡೆದಿದ್ದು, ಮಂಗಳವಾರ ಸ್ಥಳೀಯರು ಬಾಲಕಿಯ ಶವವನ್ನು ಪೈಪ್‍ಲೈನ್ ಬಳಿ ನೋಡಿ, ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ನಂತರ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಏಳು ತಂಡಗಳನ್ನು ರಚಿಸಿದ್ದರು. ತನಿಖೆಯ ಭಾಗವಾಗಿ ಪ್ರಾಥಮಿಕ ಹಂತದಲ್ಲಿ ಪೊಲೀಸರು ಬಾಲಕಿಯ ಸಂಬಂಧಿಕರು ಹಾಗೂ ನೆರೆಹೊರೆಯವರನ್ನು ವಿಚಾರಣೆ ನಡೆಸಲು ಪ್ರಾರಂಭಿಸಿದ್ದಾರೆ. ವಿಚಾರಣೆ ವೇಳೆ 13 ವರ್ಷದ ಬಾಲಕನ ಕಾಲುಗಳಿಗೆ ಕಚ್ಚಿರುವುದು ಮತ್ತು ಗೀರಿರುವುದನ್ನು ಗಮನಿಸಿದ್ದಾರೆ. ಆಗ ಪೊಲೀಸರಿಗೆ ಅನುಮಾನ ಬಂದು ಆತನನ್ನು ವಿಚಾರಣೆಗೆ ಒಳಪಡಿಸಿದಾಗ 6 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.
ವಿಚಾರಣೆ ವೇಳೆ ಬಾಲಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಾನು ಅತ್ಯಾಚಾರ ಮಾಡಿದ್ದೇನೆ. ಈ ವೇಳೆ ಬಾಲಕಿ ಕಿರುಚಲು ಪ್ರಾರಂಭಿಸಿದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದೇನೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಾಲಕ ಪೋರ್ನ್ ಸೈಟ್‍ಗಳನ್ನು ನೋಡುವ ಚಟ ಬೆಳೆಸಿಕೊಂಡಿದ್ದ. ನಾವು ಆರೋಪಿಯ ಪೋಷಕರ ಮೊಬೈಲ್ ಫೋನ್ ಪರಿಶೀಲಿಸಿದಾಗ ಅದರಲ್ಲಿ ಹಲವು ಪೋರ್ನ್ ವೆಬ್‍ಸೈಟ್‍ಗಳನ್ನು ಹುಡುಕಿರುವುದು ತಿಳಿದು ಬಂತು. ಈ ಕುರಿತು ಬಾಲಕನ ತಂದೆಯನ್ನು ಕೇಳಿದಾಗ ನಮಗೇನು ತಿಳಿದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಬಾಲಕನ ತಂದೆ ಅವಿದ್ಯಾವಂತರಾಗಿದ್ದರಿಂದ ಅವರಿಗೆ ಮೊಬೈಲ್ ಬಳಕೆ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಆರ್.ಟಿ.ಕಟ್ಕರ್ ವಿವರಿಸಿದ್ದಾರೆ.