ದೆಹಲಿಯಲಿದ್ದಾರೆ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್: ತೀರ್ಪಿನ ಬಳಿಕ ಸಂಘದ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಲಿದ್ದಾರೆ.-ಕಹಳೆ ನ್ಯೂಸ್
ನವದೆಹಲಿ: ಕೆಲವೇ ಕ್ಷಣಗಳಲ್ಲಿ ಸುಪ್ರೀಂ ಕೋರ್ಟ್ ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದ ತೀರ್ಪು ಹೊರಬೀಳಲಿದ್ದು, ಪರಿಸ್ಥಿತಿ ಅವಲೋಕಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಮಧ್ಯಾಹ್ನ ಒಂದು ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಅಯೋಧ್ಯೆ ತೀರ್ಪಿನ ಕುರಿತು ದೆಹಲಿ ಆರ್ಎಸ್ಎಸ್ ಕಚೇರಿಯಲ್ಲಿ ಸಂಘದ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಪ್ರಕರಣ ರಾಜಕೀಯವಾಗಿ, ಧಾರ್ಮಿಕವಾಗಿ ಅತ್ಯಂತ ಸೂಕ್ಷ್ಮವಾಗಿದ್ದು, ಶಾಂತಿ ಕಾಪಾಡುವಂತೆ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಕಳೆದ 10 ದಿನಗಳಿಂದ ದೆಹಲಿಯ ‘ಉದಾಸಿನ್ ಆಶ್ರಮ’ದಲ್ಲಿರುವ ಸಂಘದ ಹಿರಿಯ ನಾಯಕರು ದಶಕಗಳಿಂದ ನ್ಯಾಯಾಲಯದಲ್ಲಿ ನಲುಗುತ್ತಿರುವ ಪ್ರಕರಣದ ತೀರ್ಪಿನ ಕುರಿತು ಚರ್ಚೆಗಳು ನಡೆಸಿದ್ದಾರೆ. ಸೂಕ್ಷ್ಮ ಪ್ರಕರಣ ಇದಾಗಿದ್ದು, ಆರ್ಎಸ್ಎಸ್ನ ಹಿರಿಯ ಶ್ರೇಣಿ ನಾಯಕರು ಹಲವು ಸಭೆಗಳನ್ನು ನಡೆಸಿದ್ದು ದೇಶದಲ್ಲಿ ಕೋಮುಸಾಮರಸ್ಯ ಕಾಪಾಡುವಂತೆ ಸೂಚಿಸಿದ್ದಾರೆ. ಆರ್ಎಸ್ಎಸ್ ದೇಶದ ವಿವಿಧ ಪ್ರಾಂತ್ಯಗಳಲ್ಲಿ ಸಭೆಗಳನ್ನು ಆಯೋಜಿಸಿ ಕೋಮು ಸಾಮರಸ್ಯ ಕಾಪಾಡುವಂತೆ ಜನತೆಗೆ ಸೂಚಿಸಿದೆ.
ಸುಪ್ರೀಂ ಕೋರ್ಟ್ನಲ್ಲಿ ಅಯೋಧ್ಯೆ ತೀರ್ಪು ಹೊರಬೀಳುವ ಮುನ್ನ ಮತ್ತು ತೀರ್ಪು ಪ್ರಕಟವಾದ ನಂತರ ಕೋಮುಸಾಮರಸ್ಯ ಕಾಪಾಡುವಂತಾಗಲು ಆರ್ಎಸ್ಎಸ್ ಸದಸ್ಯರು ಈಗಾಗಲೇ ಮುಸ್ಲಿಂ ಸಂಘಟನೆಗಳ ಅಧಿಕಾರಿಗಳನ್ನು ಭೇಟಿ ಚರ್ಚಿಸಿದ್ದಾರೆ.