ಗ್ರೊಸ್ ಇಸ್ಲೆಟ್, ನ.10: ಹದಿನೈದರ ಹರೆಯದ ಶಫಾಲಿ ವರ್ಮಾ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿದ ಭಾರತದ ಅತ್ಯಂತ ಕಿರಿಯ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.
ವೆಸ್ಟ್‌ಇಂಡೀಸ್ ವಿರುದ್ಧ ಶನಿವಾರ ನಡೆದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಕೇವಲ 49 ಎಸೆತಗಳಲ್ಲಿ 73 ರನ್ ಗಳಿಸಿದ ಶಫಾಲಿ 30 ವರ್ಷಗಳ ಹಿಂದೆ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ನಿರ್ಮಿಸಿದ್ದ ದಾಖಲೆಯೊಂದನ್ನು ಮುರಿದರು.
ಶಫಾಲಿ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ವಿಂಡೀಸ್ ವಿರುದ್ಧ ಪಂದ್ಯದಲ್ಲಿ 84 ರನ್‌ಗಳಿಂದ ಜಯ ಸಾಧಿಸಿದೆ.
5ನೇ ಟಿ-20 ಪಂದ್ಯವನ್ನಾಡಿದ ಶಫಾಲಿ, ಡರೆನ್ ಸಮ್ಮಿ ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ 49 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳನ್ನು ಒಳಗೊಂಡ ಚೊಚ್ಚಲ ಅರ್ಧಶತಕ ಸಿಡಿಸಿ ವಿಂಡೀಸ್ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದರು.
ಶಫಾಲಿ 15 ವರ್ಷ, 285 ದಿನಗಳಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದರೆ, ಬ್ಯಾಟಿಂಗ್ ಲೆಜೆಂಡ್ ತೆಂಡುಲ್ಕರ್ ತನ್ನ 16ನೇ ವರ್ಷ, 214 ದಿನಗಳಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದ್ದರು.
ಹರ್ಯಾಣದ ಕಿರಿಯ ಆಟಗಾರ್ತಿ ಶಫಾಲಿ ಮೊದಲ ವಿಕೆಟ್‌ನಲ್ಲಿ ಸ್ಮತಿ ಮಂಧಾನ ಜೊತೆಗೆ 143 ರನ್ ಸೇರಿಸಿದರು. ಇದು ಮೊದಲ ವಿಕೆಟ್‌ಗೆ ಭಾರತ ಗಳಿಸಿದ ದಾಖಲೆಯ ಜೊತೆಯಾಟವಾಗಿದೆ. ಭಾರತ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ವಿಂಡೀಸ್‌ನ್ನು 9 ವಿಕೆಟ್‌ಗೆ 101 ರನ್‌ಗೆ ನಿಯಂತ್ರಿಸಿದ ಭಾರತ 84 ರನ್‌ಗಳ ಜಯ ದಾಖಲಿಸಿತು.
ಶಫಾಲಿ ಕಳೆದ ತಿಂಗಳು ಸೂರತ್‌ನಲ್ಲಿ ನಡೆದಿದ್ದ ದ.ಆಫ್ರಿಕಾ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ 46 ರನ್ ಗಳಿಸಿ ಗಮನ ಸೆಳೆದಿದ್ದರು.