ನವದೆಹಲಿ, ನವೆಂಬರ್ 12: ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕ ಸರ್ಕಾರ ರಾಮಮಂದಿರ ನಿರ್ಮಾಣದತ್ತ ಮೊದಲ ಹೆಜ್ಜೆ ಇಟ್ಟಿದೆ.
ವಿವಾದಾತ್ಮಕ ಭೂಮಿ ರಾಮಲಲ್ಲಾಗೇ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದ ನಂತರ ರಾಮಮಂದಿರ ನಿರ್ಮಾಣಕ್ಕೆ ಇದ್ದ ಬಹುದೊಡ್ಡ ಅಡೆತಡೆ ನಿವಾರಣೆಯಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಆದೇಶದಂತೆ ಟ್ರಸ್ಟ್ ರಚನೆಗೆ ಸರ್ಕಾರ ಮುಂದಾಗಿದ್ದು, ಟ್ರಸ್ಟ್ ರಚನೆ ಸಮಿತಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಇರಲಿದ್ದಾರೆ.
ಮೂರು ತಿಂಗಳೊಳಗೆ ರಚನೆಯಾಗುವ ಈ ಟ್ರಸ್ಟ್ ರಾಮಲಲ್ಲಾಗೆ ಸೇರಿದ ಈ ಭೂಮಿಯಲ್ಲಿ ರಾಮಮಂದಿರ ಕಟ್ಟುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.
ಈ ಕುರಿತು ಕಾನೂನು ಸಚಿವಾಲಯ ಮತ್ತು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರೊಂದಿಗೂ ಚರ್ಚೆ ನಡೆಸಿ ಟ್ರಸ್ಟ್ ರಚಿಸಲು ನಿರ್ಧರಿಸಲಾಗಿದೆ.
ನವೆಂಬರ್ 09 ರಂದು ಅಯೋಧ್ಯೆ ವಿವಾದದ ಕುರಿತು ತೀರ್ಪು ನೀಡಿದ ಸುಪ್ರೀಂ ಕೋರ್ಟ್, 2.77 ಎಕರೆ ವಿವಾದಿತ ಭೂಮಿ ರಾಮಲಲ್ಲಾಗೇ ಸೇರಿದೆ ಎಂದಿತ್ತು. ಜೊತೆಗೆ ಮುಸ್ಲಿಮರಿಗೆ ಬೇರೆ ಎಲ್ಲಾದರೂ 5 ಎಕರೆ ಪರ್ಯಾಯ ಜಮೀನನ್ನು ನೀಡಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು.