ಬೆಂಗಳೂರು: ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪೂಜಾರರನ್ನು ಕಣಕ್ಕಿಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಘೋಷಣೆ ಮಾಡಿದರು.
ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್.ಶಂಕರ್‌ಗೆ ಎಂಎಲ್‌ಸಿ ಮಾಡಿ ಮಂತ್ರಿಗಿರಿ ಭರವಸೆ ನೀಡಿರುವ ಯಡಿಯೂರಪ್ಪ ರಾಣೆಬೆನ್ನೂರಿಗೆ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದರು.
ಅನರ್ಹ ಶಾಸಕ ಶಂಕರ್ ತನಗೆ ರಾಣೆಬೆನ್ನೂರಿನ ಟಿಕೆಟ್ ನೀಡಬೇಕೆಂದು ಹಠ ಹಿಡಿದಿದ್ದರು. ಆದರೆ, ಸ್ಥಳೀಯ ಬಿಜೆಪಿ ನಾಯಕರು ಶಂಕರ್‌ಗೆ ಟಿಕೆಟ್ ನೀಡಿದರೆ ಅವರು ಸೋಲುವುದು ನಿಶ್ಚಿತ ಎಂದು ಹೇಳಿದ ಕಾರಣ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಗುರುವಾರ ಬಿಜೆಪಿಗೆ ಸೇರ್ಪೆಡಯಾಗಿದ್ದ ಆರ್.ಶಂಕರ್ ಇಂದು ತನ್ನ ಬೆಂಬಲಿಗರ ಜೊತೆಗೆ ಸಿಎಂ ಭೇಟಿಯಾಗಲು ಬಂದಿದ್ದರು. ಸಿಎಂ ಭರವಸೆಯ ಬಳಿಕ ರಾಣೆಬೆನ್ನೂರು ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಆದರೆ, ಶಂಕರ್ ನಿರ್ಧಾರಕ್ಕೆ ಅವರ ಜೊತೆಗೆ ಬಂದಿದ್ದ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಣೆಬೆನ್ನೂರು ಕ್ಷೇತ್ರದಲ್ಲಿ ತನ್ನ ಮಗ ಕಾಂತೇಶ್‌ಗೆ ಟಿಕೆಟ್ ನೀಡಲು ಸಚಿವ ಕೆಎಸ್ ಈಶ್ವರಪ್ಪ ಪ್ರಯತ್ನ ನಡೆಸಿದ್ದರು. ಇದೀಗ ಅರುಣ್ ಕುಮಾರ್‌ಗೆ ಸಿಎಂ ಟಿಕೆಟ್ ಘೋಷಣೆ ಮಾಡಿದ್ದಾರೆ.