Sunday, November 24, 2024
ರಾಜಕೀಯ

ಬಳ್ಳಾರಿ | ಕಂಪ್ಲಿ ಪ.ಪಂ. ಬಿಜೆಪಿಗೆ ಬಹುಮತ, ಕೂಡ್ಲಿಗಿ ಪುರಸಭೆ ಅತಂತ್ರ- ಕಹಳೆ ನ್ಯೂಸ್

ಬಳ್ಳಾರಿ/ಹೊಸಪೇಟೆ: ಕಂಪ್ಲಿ ಪುರಸಭೆ ಮತ್ತು ಕೂಡ್ಲಿಗಿ ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶ ಗುರುವಾರ ಹೊರಬಿದ್ದಿದೆ. ಕಂಪ್ಲಿಯಲ್ಲಿ ಹಿಂದಿನ ಅವಧಿಯಲ್ಲಿ ಅಧಿಕಾರ ಅನುಭವಿಸಿದ್ದ ಕಾಂಗ್ರೆಸ್ ಈ ಬಾರಿ ಹಿನ್ನಡೆ ಕಂಡಿದ್ದು, ಬಿಜೆಪಿಗೆ ಬಹುಮತ ದೊರಕಿದೆ. ಕೂಡ್ಲಿಗಿಯಲ್ಲಿ ಯಾವ ಪಕ್ಷಕ್ಕೂ ಜನ ಸ್ಪಷ್ಟ ಜನಾದೇಶ ಕೊಟ್ಟಿಲ್ಲ. ಹೀಗಾಗಿ ಸದ್ಯ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಶತಾಯ ಗತಾಯ ಅಧಿಕಾರ ಹಿಡಿಯಬೇಕು ಎಂದು ಹಗಲಿರುಳೂ ಶ್ರಮಿಸಿದ್ದ ಶಾಸಕ ಜೆ.ಎನ್‌.ಗಣೇಶ್‌ ಅವರಿಗೆ ಮುಖಭಂಗವಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತರೂ, ಮಾಜಿ ಶಾಸಕ, ಬಿಜೆಪಿಯ ಟಿ.ಎಚ್‌.ಸುರೇಶ್‌ ಬಾಬು ಈ ಬಾರಿ ಮೇಲುಗೈ ಸಾಧಿಸಿದ್ದಾರೆ. ಸಚಿವ ಬಿ.ಶ್ರೀರಾಮುಲು ಪ್ರಭಾವವೂ ಈ ಗೆಲುವಿನ ಹಿಂದೆ ಇರುವುದನ್ನು ಮರೆಯುವಂತಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೂವರೆ ವರ್ಷಗಳ ಹಿಂದೆ ಚುನಾವಣೆ ನಡೆದಾಗ, ಸುರೇಶ್‌ಬಾಬು ಹಾಗೂ ಶ್ರೀರಾಮುಲು ಬಿಎಸ್‌ಆರ್ ಕಾಂಗ್ರೆಸ್‌ ಪಕ್ಷದಲ್ಲಿದ್ದರು. ಆಗ 10 ಸ್ಥಾನ ಗಳಿಸಿದ್ದ ಕಾಂಗ್ರೆಸ್‌ ಎದುರು ಬಿಎಸ್‌ಆರ್ ಕಾಂಗ್ರೆಸ್‌ 8 ಸ್ಥಾನ ಪಡೆದು ಎರಡನೇ ಸ್ಥಾನದಲ್ಲಿತ್ತು. 2 ಸ್ಥಾನ ಪಡೆದಿದ್ದ ಕೆಜೆಪಿ ಈಗ ಇಲ್ಲ. 1 ಸ್ಥಾನ ಪಡೆದಿದ್ದ ಜೆಡಿಎಸ್‌ ಈ ಬಾರಿಯೂ ಒಂದೇ ವಾರ್ಡ್‌ನಲ್ಲಿ ಮಾತ್ರ ಕಣಕ್ಕೆ ಇಳಿಸಿದ್ದ ಅಭ್ಯರ್ಥಿಯೂ ಸೋತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್‌ ಎರಡು ಅವಧಿಗೂ ಅಧ್ಯಕ್ಷ ಸ್ಥಾನವನ್ನು ತಾನೇ ಪಡೆದಿತ್ತು. ಈ ಬಾರಿ ಆ ಸಾಧ್ಯತೆ ಕ್ಷೀಣಿಸಿದೆ.

ಪಕ್ಷಾಂತರಿಗಳ ಗೆಲುವು: ಈ ಚುನಾವಣೆಯಲ್ಲಿ ಮೂವರು ಪಕ್ಷಾಂತರಿಗಳು ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ 4ನೇ ವಾರ್ಡಿನ ಚಾಂದ್‌ಪಾಷಾ, 9ನೇ ವಾರ್ಡಿನ ಸುಶೀಲಮ್ಮ ಮತ್ತು 10ನೇ ವಾರ್ಡಿನ ಮೌಲಾ ಗೆದ್ದು ಬೀಗಿದ್ದಾರೆ. ಗೆಲ್ಲುವ ಅಭ್ಯರ್ಥಿಗಳು ಎಂದು ಗೊತ್ತಿದ್ದರೂ ನಿರ್ಲಕ್ಷಿಸಿದ್ದ ಆರೋಪಕ್ಕೆ ಗುರಿಯಾಗಿರುವ ಜೆಡಿಎಸ್‌ ಮುಖಭಂಗ ಅನುಭವಿಸಿದೆ.

ಶಾಸಕ ಗಣೇಶ್‌ ವಿರುದ್ಧ ಅಸಮಾಧಾನ ಪ್ರಕಟಿಸಿ ಕಾಂಗ್ರೆಸ್‌ ತೊರೆದು ಬಿಜೆಪಿಯಿಂದ ಸ್ಪರ್ಧಿಸಿದ್ದ 17ನೇ ವಾರ್ಡಿನ ಸಿ.ಆರ್‌.ಹನುಮಂತ, 1ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ವಿ.ಎಲ್‌.ಬಾಬು ಗೆಲುವು ಸಾಧಿಸಿದ್ದಾರೆ.

ಬಲಾಬಲ: ಬಿಜೆಪಿ 13, ಕಾಂಗ್ರೆಸ್‌ 10

ಕೂಡ್ಲಿಗಿಯಲ್ಲಿ ಅತಂತ್ರ ಸ್ಥಿತಿ

ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶ ಗುರುವಾರ ಹೊರಬಿದ್ದಿದ್ದು, ಯಾವ ಪಕ್ಷಕ್ಕೂ ಜನ ಸ್ಪಷ್ಟ ಜನಾದೇಶ ಕೊಟ್ಟಿಲ್ಲ. ಹೀಗಾಗಿ ಸದ್ಯ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಒಟ್ಟು 20 ಸ್ಥಾನಗಳ ಪೈಕಿ ಬಿಜೆಪಿ 7, ಕಾಂಗ್ರೆಸ್‌ 6, ಜೆ.ಡಿ.ಎಸ್‌. 4 ಹಾಗೂ ಮೂವರು ಪಕ್ಷೇತರರು ಜಯಶಾಲಿಯಾಗಿದ್ದಾರೆ. 2013ರ ಚುನಾವಣೆಗೆ ಹೋಲಿಸಿದರೆ ಜನ ಈ ಸಲ ಪಕ್ಷೇತರರಿಗಿಂತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಮಣೆ ಹಾಕಿರುವುದು ವಿಶೇಷ. ಹಿಂದಿನ ಚುನಾವಣೆಗಿಂತ ಕಾಂಗ್ರೆಸ್‌ ಒಂದು ಸ್ಥಾನ ಹೆಚ್ಚು ಗೆದ್ದಿದ್ದು, ಅದರ ಶಕ್ತಿ ಆರು ಸ್ಥಾನಗಳಿಗೆ ವೃದ್ಧಿಯಾಗಿದೆ.

ಬಿಜೆಪಿ ಶಕ್ತಿ ಗಣನೀಯವಾಗಿ ಹೆಚ್ಚಾದರೆ, ಜೆ.ಡಿ.ಎಸ್‌. ಚೇತರಿಸಿಕೊಂಡಿದೆ. ಕಳೆದ ಚುನಾವಣೆಯಲ್ಲಿ ಖಾತೆಯನ್ನೇ ತೆರೆಯದ ಬಿಜೆಪಿ ಈ ಸಲ ಏಳು ಸ್ಥಾನಗಳಲ್ಲಿ ಗೆದ್ದಿದೆ. ಈ ಹಿಂದೆ ಒಂದೇ ಸ್ಥಾನಕ್ಕೆ ಸೀಮಿತವಾಗಿದ್ದ ಜೆ.ಡಿ.ಎಸ್‌. ಶಕ್ತಿ ನಾಲ್ಕು ಸ್ಥಾನಗಳಿಗೆ ಹೆಚ್ಚಾಗಿದೆ. ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರು ಬಿಜೆಪಿ ಬಲ ಹೆಚ್ಚಿಸಿದ್ದಾರೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಅಂತರದಿಂದ ಕ್ಷೇತ್ರದಲ್ಲಿ ಗೆದ್ದಿತ್ತು. ಈ ಚುನಾವಣೆಯಲ್ಲೂ ಗೆಲುವಿನ ನಾಗಾಲೋಟ ಮುಂದುವರೆಸಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಅದು ಹುಸಿಯಾಗಿದೆ.

ಪಕ್ಷದ ಜಿಲ್ಲಾ ಅಧ್ಯಕ್ಷ ಎನ್‌.ಟಿ. ಬೊಮ್ಮಣ್ಣ, ಮಾಜಿಶಾಸಕ ಎನ್‌.ಎಂ. ನಬಿ ಅವರ ಪರಿಶ್ರಮದಿಂದ ಜೆ.ಡಿ.ಎಸ್‌. ಬಲ ಹಿಗ್ಗಿದೆ. ಈ ಹಿಂದೆ 14 ಜನ ಪಕ್ಷೇತರರು ಗೆದ್ದಿದ್ದರು. ಆ ಪೈಕಿ ಶಾಸಕ ಬಿ. ನಾಗೇಂದ್ರ ಬೆಂಬಲಿತ ಹತ್ತು ಜನ ಸದಸ್ಯರು ಆಯ್ಕೆಯಾಗಿದ್ದರು. ಅವರೇ ಅಧಿಕಾರದ ಚುಕ್ಕಾಣಿ ಕೂಡ ಹಿಡಿದಿದ್ದರು. ಈ ಸಲ ಪಕ್ಷೇತರರು ಮೂರು ಸ್ಥಾನಗಳಿಗೆ ಸೀಮಿತರಾಗಿದ್ದಾರೆ. 18ನೇ ವಾರ್ಡಿನಿಂದ ಪಕ್ಷೇತರ ಅಭ್ಯರ್ಥಿ ಬಿ. ಸರಸ್ವತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಅಲ್ಲಿ ಚುನಾವಣೆ ನಡೆದಿರಲಿಲ್ಲ.

ಮೈತ್ರಿಗೆ ಚಿಂತನೆ: ಅತಂತ್ರ ಫಲಿತಾಂಶ ಬಂದಿರುವುದರಿಂದ ಕಾಂಗ್ರೆಸ್‌ ಹಾಗೂ ಜೆ.ಡಿ.ಎಸ್‌. ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇರಲು ಚಿಂತನೆ ನಡೆಸಿವೆ ಎಂಬ ಮಾತುಗಳು ಕೇಳಿ ಬಂದಿವೆ.

ಅಧಿಕಾರ ಹಿಡಿಯಬೇಕಾದರೆ 11 ಸದಸ್ಯರ ಬಲ ಬೇಕು. ಕಾಂಗ್ರೆಸ್‌ ಹಾಗೂ ಜೆ.ಡಿ.ಎಸ್‌. ಸದಸ್ಯರ ಸಂಖ್ಯೆ ಒಟ್ಟುಗೂಡಿಸಿದರೆ 10 ಆಗುತ್ತದೆ. ಬಹುಮತಕ್ಕೆ ಸಂಖ್ಯೆ ಕೊರತೆಯಾಗುವುದರಿಂದ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಗಿಟ್ಟಿಸಲು ಎರಡೂ ಪಕ್ಷಗಳು ಗಂಭೀರ ಚಿಂತನೆ ನಡೆಸಿವೆ. ಇನ್ನಷ್ಟೇ ಎರಡೂ ಪಕ್ಷಗಳ ಮುಖಂಡರ ನಡುವೆ ಮಾತುಕತೆ ನಡೆದು, ಅಧಿಕಾರವನ್ನು ಯಾವ ರೀತಿ ಹಂಚಿಕೆ ಮಾಡಿಕೊಳ್ಳಬಹುದು ಎಂಬುದು ಕೊನೆಗೊಂಡ ನಂತರವಷ್ಟೇ ಎಲ್ಲವೂ ಸ್ಪಷ್ಟಗೊಳ್ಳಲಿದೆ.

ಮೂವರು ಪಕ್ಷೇತರ ಸದಸ್ಯರು ಬೆಂಬಲ ಸೂಚಿಸಿದರೂ ಅಧಿಕಾರಕ್ಕೇರಲು ಬಿಜೆಪಿಗೆ ಒಂದು ಸ್ಥಾನದ ಕೊರತೆ ಎದುರಾಗಲಿದೆ. ಜೆ.ಡಿ.ಎಸ್‌. ವರಿಷ್ಠರು ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸುವ ಮಾತುಗಳನ್ನು ಆಡುತ್ತಿದ್ದಾರೆ. ಒಂದುವೇಳೆ ಅವರು ಬೆಂಬಲ ಕೊಟ್ಟರೆ ಬಿಜೆಪಿ ಅಧಿಕಾರಕ್ಕೇರುವ ಕನಸು ನನಸಾಗಲಿದೆ. ಆದರೆ, ಸದ್ಯದ ಮಟ್ಟಿಗೆ ಮೂರು ಪಕ್ಷಗಳ ನಾಯಕರು ಮೈತ್ರಿ ಬಗ್ಗೆ ಎಲ್ಲೂ ಬಾಯಿ ಬಿಡುತ್ತಿಲ್ಲ. ‘ಕಾದು ನೋಡೋಣ’ ಎಂದು ಜಾಣತನದ ಉತ್ತರ ನೀಡುತ್ತಿದ್ದಾರೆ.