ಮಂಗಳೂರು: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 2018ರ ಸೆಪ್ಟೆಂಬರ್ 20ರಂದು ನಡೆದ ನಗರದ ಯೆಯ್ಯಾಡಿ ಸಮೀಪದ ಬಾರೆಬೈಲು ನಿವಾಸಿ ಡೇನಿಯಲ್ ಫೆರ್ನಾಂಡಿಸ್ (56) ಅವರ ಕೊಲೆಯಲ್ಲದ ಮಾನವ ಹತ್ಯೆ ಪ್ರಕರಣವು ಸಾಬೀತಾಗಿದೆ. ತಪಿತಸ್ಥ ಬಿಜೈ ಬಾರೆಬೈಲು ನಿವಾಸಿ ಜಗದೀಶ್ ಶೆಟ್ಟಿ(49) 7 ವರ್ಷದ ಕಠಿಣ ಸಜೆ ವಿಧಿಸಲಾಗಿದೆ.
ಇದು ’ಕೊಲೆಯಲ್ಲದ ಮಾನವ ಹತ್ಯ’ ಎಂದು ವಿಚಾರಣೆ ನಡೆಸಿ ತಿರ್ಮಾನಿಸಿದ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್ಯ ಅಪರಾಧಿಗೆ 7 ವರ್ಷದ ಕಠಿಣ ಸಜೆ ಹಾಗೂ10,000 ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಹಾಗೆಯೇ ಮೃತ ಡೇನಿಯಲ್ ಅವರ ಪತ್ನಿ ಜಿಲ್ಲಾ ಕಾನೂನು ಸೇವಾ ಪ್ರಾಕಾರದಲ್ಲಿ ಪರಿಹಾರ ಪಡೆದುಕೊಳ್ಳಲು ಅರ್ಹರೆಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
ಕ್ಯಾಟೀನ್ ಕಾರ್ಮಿಕನಾಗಿದ್ದ ಜಗದೀಶ್ ಶೆಟ್ಟಿ ಮತ್ತು ಪೈಂಟರ್ ಆಗಿದ್ದ ಮೃತ ಡೇನಿಯಲ್ ರಾತ್ರಿ ಮನೆಗೆ ಹೋಗದೆ ಯೆಯ್ಯಾಡಿಯ ಪ್ಲೈವುಡ್ ಮಳಿಗೆ ಸಮೀಪ ಮಲಗುತ್ತಿದ್ದರು. ಪ್ರತಿ ದಿನ ರಾತ್ರಿ ಮದ್ಯಪಾನ ಮಾಡಿ ಜಗಳವಾಡುತ್ತಿದ್ದರು. 2018ರ ಸೆಪ್ಟೆಂಬರ್ 20ರಂದು ನಡೆದ ಜಗಳ ತೀವ್ರಗೊಂಡಿದ್ದು ಜಗದೀಶ್ ಶೆಟ್ಟಿ ಮಲಗಿದ್ದ ಡೇನಿಯಲ್ ಮೇಲೆ ಕಲ್ಲು ಎತ್ತಿ ಹಾಕಿದ್ದು, ಗಂಭೀರ ಗಾಯಗೊಂಡ ಡೇನಿಯಲ್ ನನ್ನು ಆಸ್ಪತ್ರಗೆ ದಾಖಲು ಮಾಡಲಾಗಿತ್ತು. ಆದರೆ ಸೆಪ್ಟೆಂಬರ್ 23 ರಂದು ಡೇನಿಯಲ್ ಮೃತಪಟ್ಟಿದ್ದಾರೆ.
ಈ ಕುರಿತು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊಲೆ ಯತ್ನ ಕೇಸು ದಾಖಲಿಸಿ ನಂತರ ಕೊಲೆ ಎಂದು ಪರಿಗಣಿಸಿ ಪ್ರಕರಣ ದಾಖಲು ಮಾಡಿದ್ದರು. ಠಾಣೆಯ ಎಸ್ ಐ ಪ್ರದೀಪ್ ಟಿ ಆರ್ ಪ್ರಕರಣದ ತನಿಖೆ ನಡೆಸಿ, ನಿರೀಕ್ಷಕ ಅಶೋಕ್ ಪಿ ದೋಷರೋಹಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜು ಪೂಜರಿ ಬನ್ನಾಡಿ ವಾದಿಸಿದ್ದರು.