ಛಾಯಾಚಿತ್ರಗ್ರಹಣ ಕೇವಲ ದೃಶ್ಯಾತ್ಮಕ ಆನಂದಕ್ಕಾಗಿ ವಸ್ತುವಿನ ಸೆರೆಹಿಡಿಯುವಿಕೆ ಮಾತ್ರವಾಗಿರದೆ, ನಮ್ಮ ಕಲ್ಪನೆ ಹಾಗೂ ಗ್ರಹಿಕೆಗೆ ಅತೀತವಾದ ಅನುಭೂತಿಯಾಗಿದೆ. ಒಂಟಿ ಮರಗಳು ಹಾಗೂ ಅನ್ಯ ಲಿಂಗದ ಉಡುಗೆ ತೊಟ್ಟ, ಮಂಗಳಮುಖಿಯರಂಥ ಅಲಕ್ಷಿತರು ಪ್ರಕೃತಿಯೊಂದಿಗೆ ಅನನ್ಯವಾಗಿ ಬೆರೆತು ಹೋಗಿರುವುದನ್ನು ಇಷ್ಟೊಂದು ಸಮರ್ಪಕವಾಗಿ ಮನಸೆಳೆಯುವಂತೆ ಸೆರೆಹಿಡಿದಿರುವುದಕ್ಕೆ ಈ ಛಾಯಾ ಚಿತ್ರ ಪ್ರದರ್ಶನ ಸಾಕ್ಷಿಯಾಗಿದೆ.
ಒಂದೆಡೆ ಒಂಟಿ ವೃಕ್ಷಗಳು ಒಂಟಿ ಹೃದಯಗಳೊಂದಿಗೆ ಸಮ್ಮಿಳಿತವಾಗಿರುವುದು ಪರಸ್ಪರ ಒಬ್ಬರಿಗೊಬ್ಬರು ಜೀವ ತುಂಬುವಂತಿದ್ದರೂ, ಭಾರತದ ಟೆಕ್ ತಾಣಗಳಲ್ಲಿ ಅವರ ಉತ್ಸಾಹೀ ಅಸ್ತಿತ್ವ ಉದಾಸೀನ ಧೋರಣೆಯ, ಸಂವೇದನಾರಹಿತ ಮನಸುಗಳ ದೃಷ್ಟಿಯಲ್ಲಿ ಗೌಣವಾಗಿಯೇ ಉಳಿದಿದೆ.
ನಗರದ ಸ್ಫೋಟಕ ಬೆಳವಣಿಗೆಯಿಂದಾಗಿ ಆಗುತ್ತಿರುವ ಕ್ಷಿಪ್ರ ಬದಲಾವಣೆಗಳಿಗೆ ಈ ಬೃಹತ್ ಮರಗಳು ಮೂಕ ಸಾಕ್ಷಿಯಾಗಿರುವಾಗಲೂ ಸಹ, ಅವು ಇತರ ಮನುಷ್ಯರಿಗಿಂತ ಯಾವ ರೀತಿಯಲ್ಲಿಯೂ ಕಡಿಮೆಯಲ್ಲದಿದ್ದರೂ ಸಹ, ಅವುಗಳ ಅಸ್ತಿತ್ವವನ್ನೇ ಕಡೆಗಣಿಸಿ, ಅವುಗಳನ್ನು ಹಗುರವಾಗಿ ಪರಿಗಣಿಸಲಾಗುತ್ತಿದೆ.
ಈ ಬೃಹದಾಕಾರದ ಮರಗಳು ಮುಖ್ಯ ರಸ್ತೆಗಳಲ್ಲಿ ಮತ್ತು ವಾಸ ಸ್ಥಳಗಳಲ್ಲಿ ಹಸಿರು ಛಾವಣಿಯನ್ನು ಹರಡಿಕೊಂಡು, ಎಲ್ಲರಿಗೂ ಆಶ್ರಯದಾತರಾಗಿ ಉದ್ಯಾನ ನಗರಿಯ ಅವಿಭಾಜ್ಯ ಭಾಗವೇ ಆಗಿವೆ. ಆದರೆ ಸುಮಿತ್ರಾರಂತಹ ಮಂಗಳಮುಖಿಯರು, ಲಿಂಗ ಪ್ರಧಾನ ಅಥವಾ ಪೂರ್ವಾಗ್ರಹ ಪೀಡಿತ ಸಮಾಜದಲ್ಲಿ ಒಂದು ಗುರುತಿಸುವಿಕೆಗಿಂತ ಹೆಚ್ಚಾಗಿ ಅಸ್ಮಿತೆ, ಗೌರವಾದರ ಹಾಗೂ ತಮ್ಮನ್ನು ಅಂಗೀಕರಿಸಿಕೊಳ್ಳುವ ಮನಃಸ್ಥಿತಿಗಾಗಿ ಹಂಬಲಿಸುತ್ತಾರೆ.
ಗ್ಲಾಮರ್ ಲೋಕದಲ್ಲಿ ತಮ್ಮ ಸೊಬಗನ್ನು ಪ್ರದರ್ಶಿಸುತ್ತಾ ಆರ್ಥಿಕ ಲಾಭಕ್ಕಾಗಿ ಯಾವುದೋ ಉತ್ಪನ್ನದ ಜಾಹೀರಾತಿಗಾಗಿ ನಡೆದಾಡುವ ರೂಪದರ್ಶಿಗಳನ್ನು ಬಿಂಬಿಸುವ ಬದಲಾಗಿ, ಕರ್ನಾಟಕದ ಖ್ಯಾತ ಛಾಯಾಚಿತ್ರ ಪತ್ರಕರ್ತರಾದ ಕೆ.ವೆಂಕಟೇಶ್ ಅವರು ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಛಾಯಾಚಿತ್ರ ಪ್ರದರ್ಶನಕ್ಕಾಗಿ, ಛಾಯಾಚಿತ್ರದ ವಸ್ತುವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಹಾಗೂ ವಿಷಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತಮ್ಮ ಬಡ ಬಂಧುಗಳನ್ನು ಆಯ್ದುಕೊಂಡಿದ್ದಾರೆ.
ನನಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವ ಜನರನ್ನು ವಿಘಟಿಸುವ ದಾರಿಯ ಮಧ್ಯೆ ಅಥವಾ ಪಾದಚಾರಿ ಮಾರ್ಗಗಳಲ್ಲಿ ಬೆಳೆದು ನಿಂತಿರುವ ದೊಡ್ಡ ದೊಡ್ಡ ಮರಗಳ ಅಥವಾ ಬೃಹತ್ತಾದ ಕಾಂಡಗಳ ಇರುವಿಕೆ ಹಾಗೂ ಉಳಿದ ಎರಡು ಲಿಂಗಗಳ ನಡುವೆ ಸಿಲುಕಿಕೊಂಡಿರುವ ಮಂಗಳಮುಖಿಯರ ಜೀವನಗಳ ನಡುವೆ ಅತಿಯಾದ ಸಾಮ್ಯತೆ ಕಾಣಿಸುತ್ತದೆ.
ಅವರಿಬ್ಬರು ಉಳಿದವರಿಗೂ ದೊರಕುವಂಥ ಲಕ್ಷ್ಯಕ್ಕೆ ಅರ್ಹರಾಗಿದ್ದಾರೆ; ಅವರಿಬ್ಬರನ್ನೂ ಸಮಾಜ ಸಮಾನವಾಗಿ ಕಂಡು, ವರ್ತಿಸಬೇಕಾಗಿದೆ ಎಂದು ಕ್ಯಾಮೆರಾದ ಕೇಂದ್ರ-ಬಿಂದುವಿನಾಚೆಯ ಸ್ಥಿತಿಯನ್ನು ಈ ಛಾಯಾಚಿತ್ರಗ್ರಾಹಕರು ಹೇಳುತ್ತಾರೆ.
ಪರಸ್ಪರ ಪೂರಕವಾಗಿರುವಂಥ ಮರಗಳು ಹಾಗೂ ಮಂಗಳಮುಖಿಯರು, ಸವಾಲಾಗಿರುವ ತಮ್ಮ ಬದುಕಿನಲ್ಲಿ ತಮ್ಮ ಕನಸುಗಳ ಬೆನ್ನು ಹತ್ತುತ್ತಿರುವ ಅಥವಾ ಅನಿಶ್ಚಿತತೆಗಳ ಜಗತ್ತಿನಲ್ಲಿ ಕಳೆದುಹೋಗಿರುವ ಜನರ ಗಮನವನ್ನು ತಮ್ಮ ಅಸ್ತಿತ್ವದತ್ತ ಸೆಳೆಯುತ್ತಿದ್ದಾರೆ.
ಈ ಅಸಮಾನ ಜಗತ್ತಿನಲ್ಲಿಯೂ ಸಹ ಗಂಡು-ಹೆಣ್ಣುಗಳು ತಮ್ಮನ್ನು ತಾವು ಉಳಿಸಿ ಬೆಳೆಸಿ ಪೋಷಿಸಿಕೊಳ್ಳುವ ಅದೃಷ್ಟವನ್ನು ಹೊಂದಿರುವಾಗ, ಮಂಗಳಮುಖಿಯರು ತಮ್ಮ ಯೋಗಕ್ಷೇಮ ತಾವೇ ನೋಡಿಕೊಂಡು, ದೇವರ ಕೃಪೆಯನ್ನು ಬಯಸುವಂತಾಗಿದ್ದು, ಅವರ ಸ್ಥಿತಿಯೂ ದಾರಿ ಮಧ್ಯೆ ನಿಂತ ಮರಗಳ ಮುರಿದುಬಿದ್ದ ಕಾಂಡಗಳ ಸ್ಥಿತಿಯಂತಿದೆ.
ಪೂರ್ಣ ಪ್ರಮಾಣದಲ್ಲಿ ಬೆಳೆದು ನಿಂತಿರುವ ಮರದೊಂದಿಗೆ ಸ್ನೇಹ ಬೆಸೆಯುವಲ್ಲಿ ಅಥವಾ ಅವುಗಳ ಕಾಂಡದೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುವಲ್ಲಿ ಮಂಗಳಮುಖಿಯರು, ಜನರು ತಮ್ಮ ಬದುಕಿನತ್ತ ತೋರಿಸುವ ಉದಾಸೀನದಿಂದ ಇನ್ನಷ್ಟು ವೃದ್ಧಿಸಿರುವ ಅವರ ಒಡೆದುಹೋದ ಬದುಕಿನ ಒಂದು ಚಿತ್ರಣವನ್ನು ತೋರಿಸುತ್ತಾರೆ.
ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಕಾಡಿನಷ್ಟು ಹಳೆಯದಾದುದು. ಆದರೆ ಆ ಸಂಬಂಧವನ್ನು ಯಾವಾಗಲೂ ಪುರುಷ ಅಥವಾ ಸ್ತ್ರೀಯೊಂದಿಗೆ ಸಂಯೋಜಿಸಿಕೊಂಡು ಅರ್ಥೈಸಲಾಗುತ್ತದೆಯೇ ವಿನಃ ಉಳಿದವರಂತೆಯೇ ಗೌರವ ಹಾಗೂ ಅಭಿಮಾನದೊಂದಿಗೆ ಬದುಕುವ ಎಲ್ಲಾ ಹಕ್ಕನ್ನೂ ಹೊಂದಿರುವ ಮಧ್ಯದಲ್ಲಿರುವವರನ್ನು ಒಳಗೊಳ್ಳುವುದಿಲ್ಲ.
ಪ್ರಕೃತಿಯ ಭಾಗವಾಗಿರುವ ಮರಗಳು ಹಾಗೂ ಮರದ ಕಾಂಡಗಳು ದೈವದ ಸೃಷ್ಟಿ, ವಿಕಾಸ ಹಾಗೂ ವಿನಾಶಗಳ ಅಭಿವ್ಯಕ್ತಿಯೇ ಆಗಿವೆ. ಮಂಗಳಮುಖಿಯರಾದ ದೀಪು, ಸ್ಟೆಲ್ಲಾ, ಸುಶ್ಮಿತಾ ಹಾಗೂ ಇನ್ನೂ ಅನೇಕರೂ, ಲಯರಂತಹ ವಿರುದ್ಧ ಲಿಂಗದ ಉಡುಪುಧಾರಿಗಳೂ ಸಹ ಅವುಗಳಂತೆಯೇ ಆಗಿದ್ದು, ಅವರು ಸ್ತ್ರೀಯಂತೆ ಸೌಂದರ್ಯವತಿಯರೂ, ಪುರುಷರಂತೆ ಸಶಕ್ತರೂ ಆರೋಗ್ಯವಂತರೂ ಆಗಿದ್ದಾರೆ ಎಂದು ಅಮೂರ್ತ ವಸ್ತು ವಿಷಯಗಳಿಗೆ ರೂಪ, ಆಕಾರಗಳನ್ನು ನೀಡಿ ಅವುಗಳನ್ನು ಸೃಜನಾತ್ಮಕ ಕಲಾಕೃತಿಯಾಗಿಸುವ ಛಾಯಾಚಿತ್ರಗ್ರಾಹಕರ ಅಭಿವ್ಯಕ್ತಿ ವಿಶಿಷ್ಟವಾದುದು.
ಅನುಚಿತವಾಗಿ ಲಕ್ಷ್ಯಕ್ಕೆ ಒಳಗಾಗುವುದರಿಂದ ಅಥವಾ ಕಾಮದೃಷ್ಟಿಯನ್ನು ಬೀರುವ ಜನರ ಕುತೂಹಲಗಳಿಂದ ವಿಚಲಿತರಾಗದೆ ಈ ಸಾಕಾರಮೂರ್ತಿಗಳು ತಮ್ಮದೇ ಉಡುಗೆಯಲ್ಲಿ ಆಕರ್ಷಕವಾಗಿ ಹಾಗೂ ನಿರಾಡಂಬರರಾಗಿ ಗೋಚರಿಸುತ್ತಿದ್ದು, ಗ್ಲ್ಯಾಮರ್ ಜಗತ್ತಿನ ಅತ್ಯಂತ ಮನಮೋಹಕ ವ್ಯಕ್ತಿತ್ವಗಳಿಗಿಂತ ತಾವೇನೂ ಕಡಿಮೆಯಿಲ್ಲವೆಂಬಂತೆ ದಿಟ್ಟತನದಿಂದ ಕಂಡುಬರುತ್ತಾರೆ.
ಸೌಂದರ್ಯ ಅಥವಾ ಅಭಿಲಾಷೆಗಳ ವಸ್ತುಗಳನ್ನೇ ತೋರ್ಪಡಿಸುವ ರೂಪದರ್ಶಿಗಳಿಗೆ ಹೋಲಿಸಿ ನೋಡಿದಾಗ ಅವರು ತಮ್ಮದೇ ಆದ ರೀತಿಯಲ್ಲಿ ತಮ್ಮ ವಿಶಿಷ್ಟವಾದ ಅಸ್ಮಿತೆಯನ್ನು ಕಾಯ್ದುಕೊಂಡಿದ್ದು, ಇನ್ನ್ಯಾವುದೋ ಅಸ್ಮಿತೆಯನ್ನು ಪ್ರಚಾರಗೊಳಿಸುತ್ತಿಲ್ಲ ವೆಂಬುದು ಇಲ್ಲಿನ ವಾಸ್ತವವಾಗಿದೆ.
ನಗರದಲ್ಲಿ ಆಧುನಿಕ ಜೀವನ ಶೈಲಿಗೆ ತೆರೆದುಕೊಂಡಿರುವ ಮಂಗಳಮುಖಿಯರು ಹಾಗೂ ಅನ್ಯ ಲಿಂಗದ ಉಡುಗೆ ಧರಿಸುವವರು ಸಾಂಪ್ರದಾಯಿಕ ಭಾರತೀಯ ಉಡುಪುಗಳಾದ ಸೀರೆ, ಕುರ್ತಿ, ನಿಲುವಂಗಿಗಳಲ್ಲಿಯೂ, ಪಾಶ್ಚಿಮಾತ್ಯ ಧಿರಿಸುಗಳಾದ ಶಾಟ್ರ್ಸ್, ಫ್ರಾಕ್, ಜೀನ್ಸ್‍ಗಳಲ್ಲಿಯೂ ಆರಾಮದಾಯಕವಾಗಿ, ಆಕರ್ಷಕವಾಗಿ ಕಾಣುತ್ತಾರೆ.
ಇತರ ಎರಡು ಲಿಂಗಗಳ ಜನರು ಸೇರಿ ತಮ್ಮ ದುರಾಸೆಗಳ ಪರಿಣಾಮವಾಗಿ ಕಾಂಕ್ರೀಟ್ ಕಾಡನ್ನಾಗಿ ಪರಿವರ್ತಿಸಿರುವ ಭಾರತದ ನಗರ ಪ್ರದೇಶದಲ್ಲಿ ಕಂಡು ಬರುವ ಈ ಮರಗಳಂತೆ, ಕೊಂಬೆ ಕಾಂಡಗಳಂತೆ ಅವರೂ ಸಹಬಾಳ್ವೆ ನಡೆಸುತ್ತಿದ್ದಾರೆ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಿದ್ದಾರೆ.
ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಕೆ.ವೆಂಕಟೇಶ್ ಅವರು ಒಂಟಿ ಮರಗಳು ಮತ್ತು ಅಲಕ್ಷಿತ ಮಂಗಳಮುಖಿಯರ ನಂಟು ಶೀರ್ಷಿಕೆಯಡಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದು, ನಾಳೆ ಬೆಳಗ್ಗೆ ಪ್ರದರ್ಶನ ಉದ್ಘಾಟನೆಗೊಳ್ಳುತ್ತಿದೆ. ಸೋಮವಾರದಿಂದ ಗುರುವಾರದವರೆಗೆ ನಡೆಯುವ ಈ ಪ್ರದರ್ಶನ ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 7ರವರೆಗೆ ವೀಕ್ಷಿಸಲು ಅವಕಾಶವಿದೆ.