ಬಿಕನಿ ಧರಿಸಿ ಬಂದರೆ ಉಚಿತ ಪೆಟ್ರೋಲ್ ಎಂದ ಬಂಕ್ ಮಾಲೀಕ: 3 ಗಂಟೆಗಳಲ್ಲೇ ಆಫರ್ ಹಿಂಪಡೆದ, ಏಕೆ ಗೊತ್ತಾ- ಕಹಳೆ ನ್ಯೂಸ್
ಸಾಮರಾ (ರಷ್ಯಾ): ರಷ್ಯಾದ ಸಾಮರಾದಲ್ಲಿನ ಆಲ್ವಿ ಗ್ಯಾಸ್ ಸ್ಟೇಷನ್ ಎಂಬ ಪೆಟ್ರೋಲ್ ಬಂಕ್ ಮಾಲೀಕ ಬಿಸಿನೆಸ್ ಇಲ್ಲದೆ ದಿವಾಳಿ ಏಳುವ ಭೀತಿಗೆ ಸಿಲುಕಿದ್ದ. ಈ ಹಿನ್ನೆಲೆಯಲ್ಲಿ ಆತ ಬಿಕನಿ ಧರಿಸಿ ಬರುವವರಿಗೆ ಉಚಿತವಾಗಿ ಪೆಟ್ರೋಲ್ ಕೊಟ್ಟು, ಗ್ರಾಹಕರನ್ನು ತನ್ನ ಪೆಟ್ರೋಲ್ ಬಂಕ್ನತ್ತ ಸೆಳೆಯಲು ನಿರ್ಧರಿಸಿದ.
ಬಂಕ್ ಮಾಲೀಕನ ಪ್ರಕಾರ ಬಿಕನಿ ತೊಟ್ಟ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರೆಡೆಗೆ ಆಕರ್ಷಿತರಾಗಿ ಪುರುಷ ವಾಹನ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪೆಟ್ರೋಲ್ ತುಂಬಿಸಿಕೊಳ್ಳುತ್ತಾರೆ. ಇದರಿಂದ ವಹಿವಾಟು ಹೆಚ್ಚಾಗಿ ದಿವಾಳಿ ಏಳುವ ಆಪತ್ತಿನಿಂದ ಪಾರಾಗಬಹುದು ಎಂಬುದು ಆತನ ಲೆಕ್ಕಾಚಾರವಾಗಿತ್ತು.
ಆದರೆ, ಅಲ್ಲಿ ಆಗಿದ್ದೇ ಬೇರೆ. ಪುರುಷರೇ ಬಿಕನಿ ಧರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಬಂಕ್ಗೆ ಬಂದು ಉಚಿತವಾಗಿ ಪೆಟ್ರೋಲ್ ತುಂಬಿಸಿಕೊಂಡು ಹೋದರು. ಕೆಲ ಪುರುಷರಂತೂ ಬಿಕನಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಹೈಹೀಲ್ಡ್ಸ್ ಚಪ್ಪಲಿಗಳನ್ನು ಧರಿಸಿ ಬಂದಿದ್ದರು.
ಬರುಬರುತ್ತ ಇಂಥವರ ಸಂಖ್ಯೆ ಹೆಚ್ಚಾಯಿತು. ಇದನ್ನು ಕಂಡು ಆತಂಕಗೊಂಡ ಬಂಕ್ ಮಾಲೀಕ ಆಫರ್ ಆರಂಭಿಸಿ 3 ಗಂಟೆ ಕಳೆಯುವಷ್ಟರಲ್ಲಿ ಬಿಕನಿ ಧರಿಸಿ ಬರುವವರಿಗೆ ಉಚಿತ ಪೆಟ್ರೋಲ್ ನೀಡುವ ಆಫರ್ ಅನ್ನು ಸ್ಥಗಿತಗೊಳಿಸಿದ.
ಈ ಎಲ್ಲ ಗೊಂದಲಕ್ಕೆ ಕಾರಣ ಏನು ಗೊತ್ತಾ? ಬಿಕನಿ ಧರಿಸಿ ಮಹಿಳೆಯರಷ್ಟೇ ಬರಬೇಕು ಎಂಬ ಷರತ್ತನ್ನು ವಿಧಿಸಲು ಪೆಟ್ರೋಲ್ ಬಂಕ್ ಮಾಲೀಕ ಮರೆತದ್ದು ಈ ಎಲ್ಲ ಗೊಂದಲಗಳಿಗೆ ಕಾರಣವಾಗಿತ್ತು. ಹಾಗಾಗಿ ಪುರುಷರು ಕೂಡ ಬಿಕನಿ ಧರಿಸಿ ಬಂದು ಉಚಿತವಾಗಿ ಪೆಟ್ರೋಲ್ ತುಂಬಿಸಿಕೊಂಡು ಹೋದರು ಎನ್ನಲಾಗಿದೆ.