ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದಾರೆ. ಅವರನ್ನು ರಕ್ಷಣೆ ಮಾಡಬೇಕೆಂದು ಕೋರಿ ಬೆಂಗಳೂರು ಮೂಲದ ದಂಪತಿಗಳು ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಜನಾರ್ದನ ಶರ್ಮಾ ಎಂಬುವವರು ತಮ್ಮ ಮಕ್ಕಳನ್ನು ಬಂಧನ ಮುಕ್ತಗೊಳಿಸಿ ಎಂದು ಕೋರಿದ್ದು, ” ನಿತ್ಯಾನಂದ ಅವರು ನಿರ್ವಹಿಸುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ 7 ವರ್ಷದಿಂದ 15 ವರ್ಷದವರೆಗಿನ ತಮ್ಮ ನಾಲ್ವರು ಮಕ್ಕಳನ್ನು 2013ರಲ್ಲಿ ಸೇರಿಸಿದ್ದೆವು. ಆದರೆ ೨ ಹೆಣ್ಣು ಮಕ್ಕಳನ್ನು ಮಾತ್ರ ಬೆಂಗಳೂರಿನಿಂದ ಅಹಮದಾಬಾದ್’ನಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯ ಆವರಣದಲ್ಲಿರುವ ನಿತ್ಯಾನಂದನ ಧ್ಯಾನಪೀಠವಾಗಿರುವ ಯೋಗಿನಿ ಸರ್ವಜ್ಞಾನಪೀಠಂ ಎಂಬಲ್ಲಿಗೆ ವರ್ಗಾವಣೆ ಮಾಡಲಾಗಿದೆ” ಎಂದು ಹೇಳಿದ್ದಾರೆ.
ಮಕ್ಕಳನ್ನು ಭೇಟಿ ಮಾಡುವ ಅವಕಾಶವನ್ನು ಶಿಕ್ಷಣ ಸಂಸ್ಥೆ ನೀಡುತ್ತಿಲ್ಲ. ಶಿಕ್ಷಣ ಸಂಸ್ಥೆಗೆ ನಮ್ಮ ಮಕ್ಕಳನ್ನು ನಮಗೆ ನೀಡುವಂತೆ ಮನವಿ ಮಾಡಲಾಗಿದ್ದು ಮಕ್ಕಳ ವಿಡಿಯೋವನ್ನು ಆಗಾಗ ಹರಿಯಬಿಡುತ್ತಿದ್ದಾರೆ. ಆದ್ದರಿಂದ ಏನೋ ತಪ್ಪು ನಡೆಯುತ್ತಿದೆ ಎಂದು ನಮಗೆ ಅನಿಸುತ್ತಿದೆ. ಹೀಗಾಗಿ ನಾವು ಕೋರ್ಟ್ ಮೆಟ್ಟಿಲೇರಿದ್ದೇವೆ ಎಂದು ಶರ್ಮಾಎವರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಇದರಲ್ಲಿ ಈ ದಂಪತಿಗಳ ಪುತ್ರಿ ಎಂದು ಹೇಳಲಾಗುತ್ತಿರುವ ನಿತ್ಯಾನಂದಿತಾ ಮಾತನಾಡಿದ್ದು ,ನಾನು ಸ್ವಇಚ್ಛೆಯಿಂದಲೇ ಈ ಆಶ್ರಮದಲ್ಲಿದ್ದೇನೆ. ಕಳೆದ 6 ವರ್ಷಗಳಿಂದ ನಾನು ಆಶ್ರಮದಲ್ಲಿದ್ದು ಸಂತೊಷದಿಂದ ಇದ್ದೇನೆ. ನಾನು ಯಾರನ್ನೂ ಬೇಟಿಯಾಗಲು ಬಯಸುವುದಿಲ್ಲ. ನಾನು ಸನ್ಯಾಸಿನಿಯಾಗಿದ್ದು ಹಾಗೆಯೇ ಮುಂದುವರೆಯುತ್ತೇನೆ. ಇಲ್ಲಿ ನನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನಾನು ಸುರಕ್ಷಿತಳು ಎಂದು ಹೇಳಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ದಂಪತಿಗಳ ಪರ ವಕೀಲ ಪ್ರೀತೇಶ್ ಶಾ “ಗುಜರಾತ್ ಹೈಕೋರ್ಟ್ ಬಳಿ ಮಕ್ಕಳನ್ನು ವಶಕ್ಕೆ ನೀಡುವಂತೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ” ಎಂದು ತಿಳಿಸಿದ್ದಾರೆ.