ಕೋಲ್ಕೊತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ-ಬಾಂಗ್ಲಾದೇಶ ನಡುವೆ ಐತಿಹಾಸಿಕ ಡೇ ನೈಟ್ ಟೆಸ್ಟ್ ಆರಂಭವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಬಾಂಗ್ಲಾ ತಂಡಕ್ಕೆ ಆರಂಭದಲ್ಲೇ ಪಿಂಕ್ ಬಾಲ್ ಶಾಕ್ ನೀಡುವಲ್ಲಿ ಟೀಂ ಇಂಡಿಯಾ ವೇಗಿಗಳು ಯಶಸ್ವಿಯಾಗಿದ್ದಾರೆ.
ಬಾಂಗ್ಲಾ ಆರಂಭಿಕ ಇಮ್ರುಲ್ ಕೇಯ್ಸ್‌ರನ್ನು (4) ಬಲಗೈ ವೇಗಿ ಇಶಾಂತ್ ಶರ್ಮಾ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರೊಂದಿಗೆ ಪಿಂಕ್ ಚೆಂಡಿನಲ್ಲಿ ಭಾರತ ಪರ ಮೊದಲ ವಿಕೆಟ್ ಪಡೆದ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು.
ಇಶಾಂತ್ ಬೆನ್ನಲ್ಲೇ ದಾಳಿಗಿಳಿದ ಉಮೇಶ್ ಯಾದವ್ ಕರಾರುವಾಕ್ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದರು. ಬಾಂಗ್ಲಾದೇಶದ ನಾಯಕ ಮೊಮಿನುಲ್ ಹಕ್ರನ್ನು ಶೂನ್ಯಕ್ಕೆ ಪೆವಿಲಿಯನ್ ಕಳುಹಿಸಿದ ಉಮೇಶ್ ಯಾದವ್, ಬಳಿಕ ಬಂದ ಮಿಥನ್(0) ರನ್ನು ಖಾತೆ ತೆರೆಯುವ ಮುನ್ನವೇ ಮರಳಿ ಕಳುಹಿಸಿ ಡಬಲ್ ಶಾಕ್ ನೀಡಿದರು. ಇನ್ನು ರಿವರ್ಸ್ ಸ್ವಿಂಗ್ ಮೂಲಕ ಗಮನ ಸೆಳೆದ ಮೊಹಮ್ಮದ್ ಶಮಿ ತಂಡದ ಮೊತ್ತ 26 ಇದ್ದಾಗ ಬಾಂಗ್ಲಾಗೆ ಮತ್ತೊಂದು ಆಘಾತ ನೀಡಿದರು. ತಂಡದಲ್ಲಿರುವ ಅನುಭವಿ ಆಟಗಾರ ಮುಷ್ಫಿಕರ್ ರಹೀಂ (0) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಟೀಂ ಇಂಡಿಯಾಗೆ 4ನೇ ಯಶಸ್ಸು ತಂದುಕೊಟ್ಟರು.
ಆದರೆ ಮತ್ತೊಂದೆಡೆ ಭಾರತೀಯ ಬೌಲರುಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಆರಂಭಿಕ ಆಟಗಾರ ಎರಡಂಕಿ ಮೊತ್ತ ಗಳಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಶದ್ಮಾನ್ ಇಸ್ಲಾಂ ಅವರು ವೈಯುಕ್ತಿಕ ಮೊತ್ತ 29 ರನ್ಗಳಿಸಿದ್ದ ವೇಳೆ ಉಮೇಶ್ ಯಾದವ್ ಅವರ ಸೀಮ್ನ್ನು ಗುರುತಿಸುವಲ್ಲಿ ಎಡವಿ ವೃದ್ಧಿಮಾನ್ ಸಹ ಕ್ಯಾಚ್ ನೀಡಿ 5ನೇ ವಿಕೆಟ್ ಆಗಿ ಹೊರ ನಡೆದರು.
ಬಾಂಗ್ಲಾದೇಶ ವಿರುದ್ಧದ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯವೂ ಇದಾಗಿದ್ದು, ಈಗಾಗಲೇ ಟೀಂ ಇಂಡಿಯಾ 1-0 ಮುನ್ನಡೆ ಕಾಪಾಡಿಕೊಂಡಿದೆ. ಅಲ್ಲದೆ ಅಂತಿಮ ಟೆಸ್ಟ್ ಅನ್ನು ಪಂದ್ಯವನ್ನು ಗೆಲ್ಲುವ ಮೂಲಕ ಕೊಹ್ಲಿ ಪಡೆ ಸರಣಿ ಕ್ಲೀನ್‌ಸ್ವೀಪ್ ಮಾಡುವ ಗುರಿ ಇಟ್ಟುಕೊಂಡಿದೆ.
ಇತ್ತೀಚಿನ ವರದಿ ಬಂದಾಗ ಬಾಂಗ್ಲಾದೇಶ 18 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 60 ರನ್ಗಳಿಸಿದೆ.