ಮಂಗಳೂರು(ನ.22): ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಿಂದ ನಡೆಯುತ್ತಿರುವ ಆರು ಯಕ್ಷಗಾನ ಬಯಲಾಟ ಮೇಳಗಳ ಈ ಸಾಲಿನ ತಿರುಗಾಟ ಈ ಹಿಂದೆ ನಿಗದಿಯಾದಂತೆ ನ.22ರಂದು ನಡೆಯಲಿದೆ. ಈ ಮಧ್ಯೆ ಕಟೀಲು ಮೇಳಗಳ ಏಲಂ ವಿವಾದ ಕುರಿತು ಗುರುವಾರ ಹೈಕೋರ್ಟ್‌ನ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ.
ಈ ಆದೇಶದಲ್ಲಿ ಯಕ್ಷಗಾನ ಮೇಳದ ಉಸ್ತುವಾರಿಯನ್ನು ಜಿಲ್ಲಾಧಿಕಾರಿ ನೋಡಿಕೊಳ್ಳುವಂತೆ ಸೂಚನೆ ನೀಡಿದೆ. ಅಲ್ಲದೆ ಮೇಳದ ನಿರ್ವಹಣೆಯನ್ನು ಆಡಳಿತ ಮಂಡಳಿ ವಹಿಸಿಕೊಳ್ಳಬೇಕು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕಟೀಲು ಮೇಳಗಳ ತಿರುಗಾಟ ಸದ್ಯದ ಮಟ್ಟಿಗೆ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಅವರ ಸಂಚಾಲಕತ್ವದಲ್ಲೇ ಮುಂದುವರಿಯಲಿದೆ.
ಕಳೆದ ಕೆಲವು ದಿನಗಳಿಂದ ಹೈಕೋರ್ಟ್‌ನ ಏಕಸದಸ್ಯ ಪೀಠದಲ್ಲಿ ನಡೆಯುತ್ತಿರುವ ವಿಚಾರಣೆ ಮಧ್ಯಂತರ ಆದೇಶ ಬಳಿಕ ಡಿ.9ಕ್ಕೆ ಮುಂದೂಡಲಾಗಿದೆ. ಅಲ್ಲಿವರೆಗೆ ಕಟೀಲು ಮೇಳಗಳ ತಿರುಗಾಟ ಹಾಗೂ ಕಲಾವಿದರ ವೇತನದ ವಿಚಾರದ ಎಲ್ಲ ಲೆಕ್ಕಪತ್ರವನ್ನು ಪ್ರತಿ 15 ದಿನಕ್ಕೊಮ್ಮೆ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದೆ.
ಹೈಕೋರ್ಟ್‌ನ ಏಕಸದಸ್ಯ ಪೀಠದಲ್ಲಿ ಗುರುವಾರ ನಡೆದ ವಿಚಾರಣೆಯಲ್ಲಿ ಕಲಾವಿದರ ಸಂಬಳ ವಿಚಾರ ಪ್ರಸ್ತಾಪಗೊಂಡಿದೆ. ಕಲಾವಿದರಾಗಿದ್ದ ಗೇರುಕಟ್ಟೆಗಂಗಯ್ಯ ಶೆಟ್ಟಿಅವರಿಗೆ ಸೂಕ್ತ ವೇತನ ನೀಡಿಲ್ಲ ಎಂಬ ದೂರಿನ ಕುರಿತೂ ಏಕಸದಸ್ಯ ಪೀಠ ಛಿಮಾರಿ ಹಾಕಿದೆ. ಕಲಾವಿದರಿಗೆ ಎಲ್ಲ ವ್ಯವಸ್ಥೆ ಮಾಡಿಕೊಡಬೇಕು. ಕಲಾವಿದರನ್ನು ಕಾರ್ಮಿಕ ಕಾಯ್ದೆಯ ಅಡಿಯಲ್ಲಿ ತರಬೇಕು.
ಅವರಿಗೆ ಕ್ಷೇಮನಿಧಿ ಸೌಲಭ್ಯವನ್ನು ಕಲ್ಪಿಸಬೇಕು ಎಂಬ ಮಾತನ್ನು ಏಕಸದಸ್ಯ ಪೀಠ ಹೇಳಿದೆ. ಅಲ್ಲದೆ ನ್ಯಾಯಾಲಯಕ್ಕೆ ಹಾಜರಾದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರನ್ನೂ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಾಲಯದ ತಡೆಯಾಜ್ಞೆ ಇರುವಾಗ ಏಲಂ ಕುರಿತು ಆದೇಶ ನೀಡಿರುವ ಆಯುಕ್ತರ ಕ್ರಮವನ್ನು ನ್ಯಾಯಾಲಯ ಪ್ರಶ್ನಿಸಿದೆ.ಮಾತ್ರವಲ್ಲ ಹಾಗಾದರೆ ಇದುವರೆಗೆ ಯಾಕೆ ಸುಮ್ಮನಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದೆ. ನಾನು ರಜೆಯಲ್ಲಿ ಇರುವಾಗ ಇದ್ದ ಆಯುಕ್ತರು ಈ ಆದೇಶ ಹೊರಡಿಸಿದ್ದರು ಎಂದು ಈಗಿನ ಆಯುಕ್ತರು ನ್ಯಾಯಾಲಯಕ್ಕೆ ಅಫಿದವಿತ್ ಸಲ್ಲಿಸಿದರು. ಮುಂದಿನ ವಿಚಾರಣೆ ಡಿ.9ಕ್ಕೆ ಮುಂದೂಡಿ ಅಧ್ಯಂತರ ಆದೇಶ ಹೊರಡಿಸಲಾಯಿತು. ಇದರಿಂದಾಗಿ ಕಟೀಲು ಯಕ್ಷಗಾನ ಮೇಳದ ತಿರುಗಾಟ ಯಥಾಪ್ರಕಾರ ನಡೆಯುವುದು ಬಹುತೇಕ ಖಚಿತವಾದಂತಾಗಿದೆ.
ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಮೇಳಗಳ ಆಡಳಿತ ಹಾಗೂ ಸಂಚಾಲಕತ್ವದ ಕುರಿತು ಯಾವುದೇ ವ್ಯತ್ಯಾಸವನ್ನು ಮಾಡುವ ಕುರಿತು ಒಪ್ಪಿಗೆ ಸೂಚಿಸದೆ ಇದ್ದ ವ್ಯವಸ್ಥೆಯಂತೆಯೇ ಮುಂದುವರಿಯಬೇಕು ಎಂದು ಆದೇಶಿಸಿರುತ್ತಾರೆ. ಜೊತೆಗ ಪ್ರತಿ 15 ದಿನಗಳಿಗೊಮ್ಮೆ ಮೇಳದ ಲೆಕ್ಕಪತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕೆಂದೂ, ಮೇಳದ ವ್ಯವಸ್ಥೆಯ ಉಸ್ತುವಾರಿಯನ್ನು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿ ಆದೇಶ ಹೊರಡಿಸಿ ವಿಚಾರಣೆಯನ್ನು ಮುಂದೂಡಿ ಆದೇಶಿಸಿರುತ್ತಾರೆ.
ಧಾರ್ಮಿಕ ಇಲಾಖಾ ಕಾನೂನಿನಂತೆ ಜಿಲ್ಲಾಧಿಕಾರಿಗಳು ದೇವಸ್ಥಾನದ ನಿರೀಕ್ಷಣೆಯನ್ನು ನೋಡಿಕೊಳ್ಳಲೇ ಬೇಕಾಗಿರುತ್ತದೆ.ಅಂದರೆ ಪ್ರತಿನಿತ್ಯದ ವ್ಯವಹಾರಕ್ಕೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸುವುದು ಎಂಬ ಅರ್ಥಬರುವುದಿಲ್ಲ. ಇದು ಈಗಾಗಲೇ ಧಾರ್ಮಿಕ ದತ್ತಿ ಕಾನೂನಿನ ಸೆಕ್ಷನ್ 3 (3) ರಲ್ಲಿ ನೀಡಲಾದ ಅಧಿಕಾರವಾಗಿದೆಯೇ ವಿನಃ ನ್ಯಾಯಾಲಯವು ಆಡಳಿತ ಮಂಡಳಿ ಅಥವಾ ಸಂಚಾಲಕರ ವಿರುದ್ಧ ಹೊರಡಿಸಿದ ಹೊಸ ಆದೇಶ ಎಂದು ಹೇಳಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳು ಯಾವುದಾದರೂ ದೂರುಗಳಿದ್ದರೆ ವಿವರಣೆ ಕೇಳಬಹುದು. ಅಗತ್ಯಬಿದ್ದಲ್ಲಿ ನಿರ್ದೇಶನ ನೀಡಬಹುದು ಯಾ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬಹುದು. ಆಡಳಿತ ನೋಡಿಕೊಳ್ಳಬೇಕೆಂಬ ಅರ್ಥವೇ ಆ ಶಬ್ದಕ್ಕಿಲ್ಲ. ಲೆಕ್ಕಪತ್ರವನ್ನು ನೀಡಲು ದೇವಳಕ್ಕಾಗಲೀ ಅಥವಾ ಮೇಳದ ಸಂಚಾಲಕರಿಗಾಗಲೀ ಯಾವುದೇ ಸಮಸ್ಯೆಇರುವುದಿಲ್ಲ.
ದೂರುದಾರ ಮಾಧವ ಬಂಗೇರರಿಗಾಗಲಿ, ಮೇಳಗಳ ಸಂಚಾಲಕರೆಂದು ಹೇಳಿಕೊಂಡ ಐವರು ಹೊಸ ಅರ್ಜಿದಾರರಾಗಲೀ
ತಮ್ಮನ್ನು ಪ್ರತಿವಾದಿಗಳೆಂದು ಪರಿಗಣಿಸಬೇಕೆಂಬ ಯಾವುದೇ ವಿನಂತಿಯನ್ನು ನ್ಯಾಯಾಲಯ ಪರಿಗಣಿಸಿಲ್ಲ ಈ ವಿಚಾರಗಳ ಕುರಿತಾಗಿರುವ ಅಪಪ್ರಚಾರಗಳಿಗೆ ಯಾವ ಭಕ್ತರೂ ತಲೆಕೆಡಿಸಿಕೊಳ್ಳದೆ ಯಾವುದೇ ಗೊಂದಲಕ್ಕೆ ಒಳಗಾಗದೆ ಎಂದಿನಂತೆ ನ.22ರಿಂದ ಆರಂಭವಾಗುವ ಯಕ್ಷಗಾನ ಮೇಳಗಳ ತಿರುಗಾಟಕ್ಕೆ, ಸಂಜೆ 5ರಿಂದ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.
ಹೈಕೋರ್ಟ್‌ನ ಮಧ್ಯಂತರ ತೀರ್ಪು ಸಮಾಧಾನ ತಂದಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇಳದ ತಿರುಗಾಟ ನಡೆಯುತ್ತಿರುವುದು ಉತ್ತಮ ಲಕ್ಷಣ. ಅಲ್ಲದೆ ಇದರಿಂದಾಗಿ ಮೇಳದ ಎಲ್ಲ ಕಲಾವಿದರಿಗೆ ಒಳ್ಳೆಯ ವ್ಯವಸ್ಥೆ ಸಿಗುವ ಲಕ್ಷಣ ಇದೆ ಎಂದು ದೂರುದಾರ ಕಲಾವಿದ ಮಾಧವ ಕೊಳತ್ತಮಜಲು ಹೇಳಿದ್ದಾರೆ.
ಹೈಕೋರ್ಟ್‌ನ ಮಧ್ಯಂತರ ಆದೇಶದ ವಿಚಾರ ಅಧಿಕೃತವಾಗಿ ಗಮನಕ್ಕೆ ಬಂದಿಲ್ಲ. ಆದೇಶದ ಪ್ರತಿಯನ್ನು ನೋಡಿಕೊಂಡು ಮುಂದುವರಿಯುತ್ತೇನೆ. ಅಲ್ಲಿವರೆಗೆ ನಿಖರವಾಗಿ ಏನನ್ನೂ ಹೇಳುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ರೂಪೇಶ ತಿಳಿಸಿದ್ದಾರೆ.