ಕೆನಡಾದ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಹಿಂದೂ ಮಹಿಳೆ ಅನಿತಾ ಇಂದಿರಾ ಆನಂದ್ ಸ್ಥಾನ ಪಡೆದಿದ್ದಾರೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಬುಧವಾರ ತನ್ನ ಸಚಿವ ಸಂಪುಟವನ್ನು ವಿಸ್ತರಿಸಿದ್ದು ಇದೇ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರಿಗೆ ಸಂಪುಟದಲ್ಲಿ ಸಚಿವ ಸ್ಥಾನ ದೊರೆತಿದೆ. ಇತ್ತೀಚೆಗಗಷ್ಟೇ ಇವರು ಕೆನಡಾ ಸಂಸತ್ತಿಗೆ ಆಯ್ಕೆಯಾಗಿದ್ದರು. ಇನ್ನು ಕೆನಡಾ ಸಂಪುಟದಲ್ಲಿ ಇವರು ಮಾತ್ರವಲ್ಲದೇ ಇನ್ನೂ ಮೂವರು ಇಂಡೋ -ಕೆನಡಿಯನ್ ಮಂತ್ರಿಗಳು ಇದ್ದು ಅವರೆಲ್ಲಾ ಸಿಖ್ಖ್ ಧರ್ಮೀಯರಾಗಿದ್ದಾರೆ ಅನ್ನೋದು ವಿಶೇಷ.ಅಕ್ಟೋಬರ್ ನಲ್ಲಿ ನಡೆದ ಫೆಡರಲ್ ಚುನಾವಣೆಯಲ್ಲಿ ಮೊದಲ ಬಾರಿಗೆ ಹೌಸ್ ಆಫ್ ಕಾಮನ್‍ಗೆ ಆಯ್ಕೆಯಾದ ಅನಿತಾ ಇಂದಿರಾ ಆನಂದ್ ಅವರನ್ನು ಸಾರ್ವಜನಿಕ ಸೇವೆ ಮತ್ತು ಖರೀದಿ ಸಚಿವರಾಗಿ ನೇಮಿಸಲಾಗಿದೆ.
ಟೊರೊಂಟೊ ವಿಶ್ವವಿದ್ಯಾಲಯದ ಮಾಜಿ ಕಾನೂನು ಪ್ರಾಧ್ಯಾಪಕಿ ಅನಿತಾ ಆನಂದ್ ಒಂಟಾರಿಯೊದ ಓಕ್ವಿಲ್ಲೆ ಕ್ಷೇತ್ರದಿಂದ ಅನಿತಾ ಆಯ್ಕೆಯಾಗಿದ್ದಾರೆ. ಇವರು ಕೆನಡಾದಲ್ಲೇ ಜನಿಸಿದರೂ ಆಕೆಯ ತಾಯಿ ದಿ. ಸರೋಜ್ ರಾಮ್ ಪಂಜಾಬಿನ ಅಮೃತಸರ್ ಪ್ರದೇಶದವರಾಗಿದ್ದರೆ, ತಂದೆ ತಮಿಳುನಾಡಿನ ಮೂಲದವರು. ಇವರಿಬ್ಬರೂ ವೈದ್ಯಕೀಯ ವೃತ್ತಿಯಲ್ಲಿದ್ದರು. ನಾಲ್ಕು ಮಕ್ಕಳ ತಾಯಿಯಾಗಿರುವ ಅನಿತಾ ಅವರು ಓಕ್ವಿಲ್ಲೆ ಪ್ರದೇಶದಲ್ಲಿರುವ ಇಂಡೋ-ಕೆನಡಿಯನ್ ಸಮುದಾಯದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.