Saturday, November 23, 2024
ಸುದ್ದಿ

ಇಂದಿನಿಂದ ಧರ್ಮಸ್ಥಳ ಲಕ್ಷ ದೀಪೋತ್ಸವ ಆರಂಭ- ಕಹಳೆ ನ್ಯೂಸ್

ಬೆಳ್ತಂಗಡಿ:  ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅಪೂರ್ವ ಸಾನಿಧ್ಯ ಹೊಂದಿರುವ, ಚತುರ್ದಾನ ಪರಂಪರೆಗೆ ಖ್ಯಾತಿ ಪಡೆದ ವಿವಿಧ ಜನಕಲ್ಯಾಣಗಳ ಮೂಲಕ ಸಮಸ್ತ ಜನತೆಯನ್ನು ತನ್ನತ್ತ ಸೆಳೆಯುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ನ.22ರಿಂದ 26ರವರೆಗೆ ನಡೆಯಲಿದೆ.ಶ್ರೀಕ್ಷೇತ್ರದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಇತರೆ ಉತ್ಸವಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಶ್ರೀ ಮಂಜುನಾಥಸ್ವಾಮಿಯ ಐದು ದಿನಗಳ ಉತ್ಸವಗಳು, ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ನಡುವೆಯೇ, ಖ್ಯಾತ ವಿದ್ವಾಂಸರು, ಗಣ್ಯರು ಹಾಗೂ ಕಲಾವಿದರ ಸಹಭಾಗಿತ್ವದಲ್ಲಿ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ 87ನೇ ಅಧಿವೇಶನವೂ ಸಂಪನ್ನಗೊಳ್ಳಲಿವೆ.

ನ.22ರಂದು ರಾಜ್ಯಮಟ್ಟದ ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆಗೊಳ್ಳಲಿದ್ದು, ಮುಕ್ತ ಅವಕಾಶದ ಜತೆಗೆ ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿನಡೆಯುವ ಲಕ್ಷ ದೀಪೋತ್ಸವ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ ಜತೆಗೆ ಎಲ್ಲರಿಗೂ ಜ್ಞಾನದ ವೇದಿಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಾ. ಹೆಗ್ಗಡೆ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ: ಐದು ದಿನಗಳ ಲಕ್ಷದೀಪೋತ್ಸವದ ಯಶಸ್ಸು ಹಾಗೂ ಅಚ್ಚುಕಟ್ಟಾಗಿ ಶಿಸ್ತಾಗಿ ನಿರ್ವಹಿಸಲು ಕ್ಷೇತ್ರದ ಸಾವಿರಾರು ಕಾರ್ಯಕರ್ತರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಮ್ಮೇಳನಗಳ ಯಶಸ್ಸಿಗೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದೆ. ಉಪಾಧ್ಯಕ್ಷರಾಗಿ ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಪ್ರೊ. ಎಸ್‌. ಪ್ರಭಾಕರ್‌, ಪ್ರೊ. ಎನ್‌. ವಜ್ರಕುಮಾರ್‌ ಮಾರ್ಗದರ್ಶನ ಮಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ವಧರ್ಮ ಸಮ್ಮೇಳನದ 87ನೇ ಅಧಿವೇಶನ: ನ.25ರಂದು ಸರ್ವಧರ್ಮ ಸಮ್ಮೇಳನದ 87ನೇ ಅಧಿವೇಶನವನ್ನು ಲೋಕಸಭೆಯ ನಿಕಟಪೂರ್ವ ಅಧ್ಯಕ್ಷರಾದ ಸುಮಿತ್ರಾ ಮಹಾಜನ್‌ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಅಧ್ಯಕ್ಷತೆಯನ್ನು ಇಸ್ಕಾನ್‌ ಸಂಸ್ಥೆಯ ಗೌರ್‌ ಗೋಪಾಲದಾಸ್‌ ಅಧ್ಯಕ್ಷತೆ ವಹಿಸುವರು. ಧರ್ಮಾಧಿಕಾರಿ, ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತ ಭಾಷಣ ಮಾಡಲಿದ್ದಾರೆ. ಮೈಸೂರಿನ ಫೋಕಸ್‌ ಅಕಾಡೆಮಿ ಮುಖ್ಯ ಕಾರ್ಯನಿರ್ವಾಹಕ ಡಿ.ಟಿ. ರಾಮಾನುಜಮ್‌, ಟೈಮ್ಸ್‌ ಗ್ರೂಫ್ಸ್‌ನ ಉಪ ಮಹಾಪ್ರಬಂಧಕ ಕದ್ರಿ ನವನೀತ ಶೆಟ್ಟಿ ಮತ್ತು ಖ್ಯಾತ ಲೇಖಕ ಬೊಳುವಾರು ಮಹಮ್ಮದ್‌ ಕುಂಞ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ವಿದ್ವಾನ್‌ ಡಾ. ಕೆ. ವಾಗೀಶ್‌ ಮತ್ತು ಬಳಗದಿಂದ ಶಾಸ್ತ್ರೀಯ ಸಂಗೀತ ಗಾಯನ ಮತ್ತು ವಿದುಷಿ ವಾಣೀಗೋಪಾಲ್‌ ಮತ್ತು ತಂಡದಿಂದ ಸಮೂಹ ನೃತ್ಯ ನಡೆಯಲಿದೆ.

ಸಾಹಿತ್ಯ ಸಮ್ಮೇಳನದ 87ನೇ ಅಧಿವೇಶನ: ನ.26ರಂದು ಸಾಹಿತ್ಯ ಸಮ್ಮೇಳನದ 87ನೇ ಅಧಿವೇಶನವನ್ನು ಡಿಸಿಎಂ ಡಾ. ಅಶ್ವತ್ಥ ನಾರಾಯಣ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ವಹಿಸಲಿದ್ದು, ಧರ್ಮಾಧಿಕಾರಿ, ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತ ಭಾಷಣ ಮಾಡಲಿದ್ದಾರೆ. ಖ್ಯಾತ ಸಾಹಿತಿ ಶ್ರೀಧರ ಬಳಗಾರ ಕುಮಟಾ, ಉಡುಪಿಯ ವೀಣಾ ಬನ್ನಂಜೆ ಮತ್ತು ಖ್ಯಾತ ವಾಗ್ಮಿ ರಿಚರ್ಡ್‌ ಲೂಯಿಸ್‌ ಉಪನ್ಯಾಸ ನೀಡುವರು. ಅದೇ ದಿನ ಬೆಂಗಳೂರಿನ ವಿದ್ವಾನ್‌ ಅಶೋಕ್‌ ಕುಮಾರ್‌ ಮತ್ತು ಬಳಗದವರಿಂದ ಕಥಕ್‌, ನೃತ್ಯರೂಪಕ ಪ್ರದರ್ಶನವಿದೆ