Saturday, November 16, 2024
ಸುದ್ದಿ

ಹತ್ತೂರಿಗೂ ಮಾದರಿಯಾಯಿತು ಪುತ್ತೂರಿನ ಸಾಹಿತ್ಯ ಸಂಭ್ರಮ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ ಸಂಭ್ರಮ-2018 ಇದರ ಉದ್ಘಾಟನೆಯನ್ನು ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ  ನೆರವೇರಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್, ಸಾಹಿತ್ಯ ಕ್ಷೇತ್ರದ ಮೇರು ಪರ್ವತ ಡಾ. ಕೆ. ಶಿವರಾಮ ಕಾರಂತರ ಕರ್ಮಭೂಮಿಯಾದ ಪುತ್ತೂರು ಸಾಹಿತ್ಯ ಮತ್ತು ಸಾಂಸ್ಕøತಿಕ ಚಟುವಟಿಕೆಗಳ ಗಂಡುಮೆಟ್ಟಿನ ನೆಲ. ಭಾಷೆ, ಮಣ್ಣಿನ ಪ್ರೀತಿಯಿಂದ ಪುತ್ತೂರಿನ ಜನರು ಈ ಊರನ್ನು ಶ್ರೀಮಂತಗೊಳಿಸಿದ್ದಾರೆ. ಈ ನೆಲದಲ್ಲಿ ಹಲವು ಸಾಹಿತ್ಯ ಕೃತಿಗಳು ಹುಟ್ಟಿಕೊಂಡಿವೆ. ಡಾ. ಶಿವರಾಮ ಕಾರಂತರ ಶ್ರೇಷ್ಠ ಕೃತಿಗಳಿಗೆ ಪ್ರೇರಣೆ ನೀಡಿದ ಪುಣ್ಯ ನೆಲ ಪುತ್ತೂರು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಹಿತ್ಯ, ಸಂಸ್ಕøತಿ, ಕಲಾ ಪ್ರಕಾರಗಳು ಯಾರ ಸ್ವತ್ತೂ ಅಲ್ಲ. ಯಾರೂ ಅದನ್ನು ಗುತ್ತಿಗೆ ಪಡೆದಿಲ್ಲ. ಈ ಪ್ರಕಾರಗಳು ಸ್ಫೂರ್ತಿಯಿಂದ ಉದ್ಧೀಪನಗೊಂಡು ಪ್ರತಿಭೆಯ ಮೂಲಕ ಪ್ರಕಟಗೊಳ್ಳುತ್ತವೆ. ಸೃಜನಶೀಲತೆಯ ಮಾಧ್ಯಮವಾದ ಸಾಹಿತ್ಯವು ಎಲ್ಲಿಯೂ ಹುಟ್ಟುತ್ತದೆ. ಯಾಕೆಂದರೆ ಸಾಹಿತ್ಯ ಜಾತಿ, ಮತಗಳ ಎಲ್ಲೆ ಮೀರಿ ನಿಂತ ಅನುಭಾವವನ್ನು ಹೊಂದಿದೆ. ಸಾಹಿತ್ಯದ ಸೆಲೆ ಅಂತರಂಗದಿಂದ ಸ್ಫುಟಗೊಳ್ಳುತ್ತದೆ. ಈ ಮೂಲಕ ಬೌದ್ಧಿಕ ಚಿಂತನೆಗೆ ಪ್ರೇರಣೆ ನೀಡುತ್ತದೆ. ಮತ್ತು ಸಾಹಿತ್ಯ ಸದಾ ಮರುಹುಟ್ಟು ಪಡೆಯುತ್ತದೆ ಎಂದು ಡಾ. ತಾಳ್ತಜೆ ವಿಶ್ಲೇಷಣೆ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಣಿಪುರ ಯಕ್ಷಗಾನ ಮಾಸ ಪತ್ರಿಕೆಯ ಪ್ರಧಾನ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಮಾತನಾಡಿ, ಪುತ್ತೂರು ಸಾಹಿತ್ಯ ಮತ್ತು ಸಂಸ್ಕøತಿಯ ಗಟ್ಟಿ ನೆಲ. ಎಲ್ಲಾ ಭಾಷೆಗಳಿಗೂ ಯಕ್ಷಗಾನವೂ ಸೇರಿದಂತೆ ಎಲ್ಲಾ ಕಲಾ ಪ್ರಕಾರಗಳಿಗೂ ನೀರೆರೆದು ಪೋಷಿಸುವ ಸಹೃದಯರ ಊರು ಪುತ್ತೂರು. ಸಾಹಿತ್ಯ ಚಟುವಟಿಕೆಗಳಿಂದ ಕರ್ನಾಟಕ ರಾಜ್ಯದಾದ್ಯಂತ ಹೆಸರು ಮಾಡಿದೆ. ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ನಡೆಯುವ ಸಾಹಿತ್ಯ ಚಟುವಟಿಕೆಗಳು ಪುತ್ತೂರಿನಲ್ಲಿ ನಡೆಯುತ್ತಿವೆ. ವಿವಿಧ ವೃತ್ತಿಪರರು, ವಿದ್ಯಾರ್ಥಿಗಳು, ಜನಸಾಮಾನ್ಯರು ಪುತ್ತೂರಿನಲ್ಲಿ ಸಾಹಿತ್ಯವನ್ನು ಬೆಳೆಸುವಲ್ಲಿ ಶ್ರಮಿಸಿದ್ದಾರೆ ಎಂದು ಅಭಿಪ್ರಾಯಿಸಿದರು.
ಕಾಸರಗೋಡು ಅಸ್ತಿತ್ವಂ ಪ್ರತಿಷ್ಠಾನದ ಪ್ರಧಾನ ಸಂಚಾಲಕ ಎಸ್.ಎಂ. ಉಡುಪ ಮಾತನಾಡಿ, ಸಾಹಿತ್ಯ ಭಾವನೆಗಳ ಬೇರು. ಅದಕ್ಕೆ ಭಾಷೆಯ ಕಟ್ಟುಪಾಡು ಇಲ್ಲ. ಎಲ್ಲಾ ಭಾರತೀಯ ಭಾಷೆಗಳಲ್ಲೂ ಶ್ರೀಮಂತ ಸಾಹಿತ್ಯ ಕೃತಿಗಳು ಹುಟ್ಟಿಕೊಂಡಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಇಂದು ಸಾಹಿತ್ಯ ಪ್ರಸಾರ ನಡೆಯುತ್ತಿದೆ. ಮೊಬೈಲ್ ಮಾಧ್ಯಮದ ಸಾಹಿತ್ಯ ಕೂಡಾ ಇಂದು ಅನಿವಾರ್ಯವಾಗಿದೆ. ಭಾಷೆ ಮತ್ತು ಸಂಸ್ಕøತಿಯ ಒಟ್ಟು ಬೆಳವಣಿಗೆಗೆ ಇದು ಪೂರಕವಾಗಿದೆ ಎಂದರು. ಸುಳ್ಯ ಕೇಶವ ಕೃಪಾದ ಶ್ರೀದೇವಿ ನಾಗರಾಜ ಭಟ್, ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕಿ ಹರಿಣಿ ಪುತ್ತೂರಾಯ ಶುಭ ಹಾರೈಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಮಾತನಾಡಿ, ಈ ದೇಶದ ಬಹುಸಂಖ್ಯಾತ ಯುವ ಸಂಪನ್ಮೂಲಕ್ಕೆ ಸಾಹಿತ್ಯ ಮತ್ತು ರಾಜಕೀಯ ಚಟುವಟಿಕೆಗಳನ್ನು ನಡೆಸಲು ಸೂಕ್ತ ವೇದಿಕೆಗಳು ಸಿಗುತ್ತಿಲ್ಲ. ಪುತ್ತೂರು ಸಾಹಿತ್ಯ ವೇದಿಕೆಯು ದೇಶ, ಭಾಷೆಗಳಲ್ಲಿ ಸಾಧನೆ ಮಾಡಿರುವ ದೇಶೀಯ ಕಲಾ ಪ್ರಕಾರಗಳಲ್ಲಿ ತೆರೆಯ ಮರೆಯ ಕೆಲಸ ಮಾಡಿರುವ ಯುವ ಸಮೂಹಕ್ಕೆ ಅವಕಾಶ ಒದಗಿಸುವ ಮೂಲಕ ನಿಜ ಅರ್ಥದಲ್ಲಿ ಸಾಹಿತ್ಯ ವೇದಿಕೆಯಾಗಿ ಕೆಲಸ ಮಾಡಲು ಮುಂದಾಗಿರುವುದು ಶ್ಲಾಘನೀಯ ವಿಚಾರ ಎಂದರು. ಯುವಕರನ್ನು ಆಕರ್ಷಿಸುವಲ್ಲಿ ಸಾಹಿತ್ಯ ವೇದಿಕೆ ಯಶಸ್ಸು ಕಾಣಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಪುತ್ತೂರು ಸಾಹಿತ್ಯ ವೇದಿಕೆಯ ಸಂಚಾಲಕ ಶ್ಯಾಮ್ ಸುದರ್ಶನ್ ಹೊಸಮೂಲೆ ಉಪಸ್ಥಿತರಿದ್ದರು.
ವೇದಿಕೆಯ ಗೌರವಾಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು ಸ್ವಾಗತಿಸಿದರು. ವೇದಿಕೆಯ ಅಧ್ಯಕ್ಷ ಕೆ. ಗೋಪಾಲಕೃಷ್ಣ ಭಟ್ ಕಟ್ಟತ್ತಿಲ ಪ್ರಸ್ತಾವನೆಗೈದರು. ಕಾರ್ಯದರ್ಶಿ ಶಾಂತಾ ಕುಂಟಿನಿ ವಂದಿಸಿದರು. ಗೀತಾ ಕೊಂಕೋಡಿ ಮತ್ತು ಸ್ನೇಹಾ ರವೀಶ್ ಕಾರ್ಯಕ್ರಮ ನಿರೂಪಿಸಿದರು.

ನಂತರ ನಡೆದ ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಐವತ್ತಕ್ಕೂ ಅಧಿಕ ಕವಿಗಳು ಭಾಗವಹಿಸಿದ್ದರು. ಗಾನಸಿರಿ ಕಿರಣ್ ಕುಮಾರ್ ಬಳಗದವರಿಂದ ಸ್ವರಸಂಗಮ ಕಾರ್ಯಕ್ರಮ ನಡೆಯಿತು.

ಪ್ರದೀಪ್ ಕುಮಾರ್ ಕಲ್ಕೂರರ ಅಧ್ಯಕ್ಷತೆಯಲ್ಲಿ, ಶೀರೂರು ಶ್ರೀಗಳ ಮಾರ್ಗದರ್ಶನದೊಂದಿಗೆ ಒಡಿಯೂರು ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಸಭಾಪರ್ವ

ಪ್ರಶಸ್ತಿ ಪ್ರಧಾನ – ಕೃತಿಬಿಡುಗಡೆ

ಸಾಹಿತ್ಯರತ್ನ : ಸೀತಾರಾಮ ಭಟ್ ಸೇರಾಜೆ
ಸೇವಾರತ್ನ : ಕುಂಟಾರು ರವೀಶ ತಂತ್ರಿ
ಕಲಾರತ್ನ : ಕು. ದಿಶಾ ಶೆಟ್ಟಿ ಕಟ್ಲ
ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ನಂತರ ವಿವಿಧ ಸಾಹಿತಿಗಳ ಕೃತಿಗಳು ಬಿಡುಗಡೆಗೊಂಡವು. ಕಾರ್ಯಕ್ರಮದಲ್ಲಿ ರಾಜ ಶೇಖರ ಮುಲಾಲಿ, ನಾಗರಾಜ ಶೆಟ್ಟಿ, ಮುರಳಿಕೃಷ್ಣ ಹಸಂತ್ತಡ್ಕ, ಅರ್ಜುನ್ ಕಜೆ, ಸಚಿನ್ ಎ.ಎಸ್. ದಿವ್ಯಪ್ರಭಾ ಚಿಲ್ತಡ್ಕ, ಚಂದ್ರಶೇಖರ್, ಕೃಷ್ಣರಾಜ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಜೆ 6.30 ರಿಂದ ಪಟ್ಲ ಸತೀಶ್ ಶೆಟ್ಟಿ, ಸತ್ಯನಾರಾಯಣ ಪುಣ್ಚಿತ್ತಾಯ ಗಿರೀಶ್ ರೈ ಕಕ್ಕೆಪದವು ಮೂವರು ಮಧುರ ಕಂಠದ ಭಾಗವತಿಗೆಯಲ್ಲಿ “ರಾಧಾ ವಿಲಾಸಾ “ದ ಆಯ್ದ ಹಾಡುಗಳಿಗೆ ಶ್ರೀ ಕೃಷ್ಣ ಪ್ರಕಾಶ ಉಳಿತ್ತಾಯ ರ ಮದ್ದಲೆ ವಾದನದ ಚೈತನ್ಯ ಕೃಷ್ಣ ಪದ್ಯಾಣ ಅವರ ಚೆಂಡೆ, ರಮೇಶ್ ಕಜೆಯವರ ಚಕ್ರತಾಳದ ನಾದಕ್ಕೆ ಡಾ.ವರ್ಷಾ ಶೆಟ್ಟಿ ಹಾಗೂ ಕು.ದಿಶಾ ಶೆಟ್ಟಿ ಅವರಿಂದ   “ಯಕ್ಷರ ನಾಟ್ಯ” ಪ್ರಸ್ತುತಿ ಬಹಳ ಮನಮೋಹಕವಾಗಿ ಮೂಡಿ ಬಂದು ಯಕ್ಷಾಭಿಮಾನಿಗಳ ಮನ ತಣಿಸಿತು.

ವರದಿ : ಕಹಳೆ ನ್ಯೂಸ್

Leave a Response