ಮಂಗಳೂರು : ಮಂಗಳೂರು ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದು ಅಲ್ಲಿಂದ ಕಾರಿನಲ್ಲಿ ಕುಂಬಳೆಗೆ ತೆರಳುತ್ತಿದ್ದ ಯುವಕನನ್ನು ಕಾರಿನಲ್ಲಿ ಬೆನ್ನಟ್ಟಿ ಬಂದ ತಂಡವೊಂದು ಅಡ್ಡಗಟ್ಟಿ ನಿಲ್ಲಿಸಿ ಸೂಟ್‌ಕೇಸ್ ಎಗರಿಸಿ ಪರಾರಿಯಾದ ಘಟನೆ ನವೆಂಬರ್ 22ರ ಶುಕ್ರವಾರದ ಸಂಜೆ ನಗರದ ಪದವಿನಂಗಡಿ ಬಳಿ ನಡೆದಿದೆ.
ಸಂಜೆ 7 ಗಂಟೆಗೆ ದುಬೈನಿಂದ ಮಂಗಳೂರಿಗೆ ಬಂದ 25 ವರ್ಷದ ಯುವಕ ತನ್ನ ಊರಾದ ಕುಂಬಳೆಗೆ ಕೇರಳ ನೋಂದಣಿಯ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಇದನ್ನು ಗಮನಿಸಿದ ನಾಲ್ವರ ತಂಡವೊಂದು ಮಂಗಳೂರು ನೋಂದಣಿಯ ಕಾರಿನಲ್ಲಿ ಬೆನ್ನಟ್ಟಿದ್ದು ಪದವಿನಂಗಡಿ ಬಳಿ ಯುವಕನಿಗೆ ಹಲ್ಲೆ ಮಾಡಿ 2 ಸೂಟ್‌ಕೇಸ್‌ಗಳನ್ನು ಎಗರಿಸಿ ಕಾವೂರಿನತ್ತ ಪರಾರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರು ಅಲ್ಲಿ ಗುಂಪು ಸೇರಿದ್ದು ದುಷ್ಕರ್ಮಿಗಳು ‘ಆತ ನಮ್ಮ ಗೆಳೆಯ’ ಎಂದು ಹೇಳಿದ್ದು ಈ ಕಾರಣದಿಂದ ಸ್ಥಳೀಯರು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ದುಷ್ಕರ್ಮಿಗಳು ಯುವಕನಿದ್ದ ಕಾರನ್ನು ಓವರ್‌ಕೇಟ್ ಮಾಡಿ ಮುಂದೆ ಹೋದ ವೇಳೆ ಯುವಕನಿದ್ದ ಕಾರಿನ ಚಾಲಕ ಬ್ರೇಕ್ ಹಾಕಿದ್ದು ಕಾರು ಹಿಂದೆ ಇದ್ದ ಇಲಾಖಾ ಬೋರ್ಡ್ ಇದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಆ ಕಾರಿನ ಚಾಲಕನು ಯುವಕರ ಕಾರಿನ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದು ಇದು ದುಷ್ಕರ್ಮಿಗಳಿಗೆ ಮತ್ತಷ್ಟೂ ಪೂರಕವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ದುಷ್ಕರ್ಮಿಗಳು ಪರಾರಿಯಾಗುತ್ತಿದ್ದಂತೆ ಆ ಸರಕಾರಿ ಕಾರು ಕೂಡಾ ಸ್ಥಳದಿಂದ ನಾಪತ್ತೆಯಾಗಿದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಯುವಕನು ಸೂಟ್‌ಕೇಸ್‌ನಲ್ಲಿ ಯಾವುದೇ ಬೆಳೆ ಬಾಳುಬಾಳುವ ವಸ್ತುಗಳಿರಲಿಲ್ಲ. ಚಾಕಲೇಟ್ ಮತ್ತು ಬಟ್ಟೆಗಳು ಇತ್ತು ಎಂದು ಗೊಂದಲದ ಹೇಳಿಕೆಯನ್ನು ನೀಡಿದ್ದು ಅನುಮಾನಸ್ಪದವಾಗಿದೆ.
ಈ ಕುರಿತು ಮಂಗಳೂರು ನಗರದ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಈಗಾಗಲೇ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ಯುವಕ ಮತ್ತು ಕಾರು ಚಾಲಕನ ಬಳಿ ಮಾಹಿತಿ ಪಡೆಯಲಾಗುತ್ತಿದ್ದು ಈ ಪ್ರಕರಣ ಸೂಕ್ಷ್ಮವಾಗಿದ್ದು ಈ ಕೂಡಲೇ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ದರೋಡೆ ನಡೆಸಿ ತಂಡ ಪರಾರಿಯಾಗುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಆ ಕೂಡಲೇ ನಗರದ ಚೆಕ್‌ಪೋಸ್ಟ್ ನಲ್ಲಿ ತಪಾಸಣೆ ಆರಂಭಿಸಲಾಗಿದೆ.
ಈ ಕೃತ್ಯವನ್ನು ಪರಿಚಯಸ್ಥರೇ ನಡೆಸಿರುವ ಶಂಕೆ ಇರುವ ಹಿನ್ನಲೆಯಲ್ಲಿ ಈ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ತನ್ನ ಮೇಲೆ ಹಲ್ಲೆ ಮಾಡಿದವರ ಪರಿಚಯ ನನಗಿಲ್ಲವೆಂದು ಪೊಲೀಸರಿಗೆ ತಿಳಿಸಿದ್ದು ಈ ಕುರಿತು ಪೊಲೀಸರು ದುಬೈನಿಂದ ಬಂದ ಯುವಕ ಮತ್ತು ಕಾರು ಚಾಲಕನನ್ನು ವಿಚಾರಣೆ ಮಾಡುತ್ತಿದ್ದಾರೆ.