ಬೆಂಗಳೂರು: ಮುಂದಿನ ತಿಂಗಳ ಮೂರನೇ ತಾರೀಖಿನ ಒಳಗೆ ಮತ್ತೊಂದು ಬಾರಿ 15 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹೋಗುತ್ತೇನೆ. ಶನಿವಾರದಿಂದ ಚುನಾವಣಾ ಪ್ರಚಾರ ಆರಂಭವಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನ ಧವಳಗಿರಿ ನಿವಾಸದಲ್ಲಿ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ಕ್ಷೇತ್ರಗಳಲ್ಲಿ ವಾತಾವರಣ ನಮ್ಮ ನಿರೀಕ್ಷೆಗೂ ಮೀರಿ ತುಂಬಾ ಚೆನ್ನಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ನೂರಕ್ಕೆ ನೂರು 15 ಕ್ಷೇತ್ರಗಳಲ್ಲಿಯೂ ನಮ್ಮದೇ ಗೆಲುವು. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಯಾವುದೇ ಉತ್ತರವನ್ನು ಕೊಡುವುದಕ್ಕೆ ಇಷ್ಟಪಡುವುದಿಲ್ಲ ಎಂದಿದ್ದಾರೆ.
ಉಪ ಚುನಾವಣೆ ಫಲಿತಾಂಶ ಬಂದಮೇಲೆ ಜನ ಯಾರ ಜತೆಗಿದ್ದಾರೆ ಎನ್ನುವುದು ಗೊತ್ತಾಗಲಿದೆ. ಬರುವ ಮೂರು ವರ್ಷಗಳಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವುದೇ ನನ್ನ ಸಂಕಲ್ಪ ಎಂದರು.
ರಾಜ್ಯದಲ್ಲಿ ಸುಸೂತ್ರವಾಗಿ ಸರ್ಕಾರ ನಡೆಯಬಾರದು, ಗೊಂದಲ ಉಂಟಾಗಬೇಕು. ರಾಜ್ಯದಲ್ಲಿ ಅತಂತ್ರ ಸ್ಥಿತಿ ಉಂಟಾಗಬೇಕು ಅನ್ನೊದೇ ಕಾಂಗ್ರೆಸ್, ಜೆಡಿಎಸ್ ನಾಯಕರ ಉದ್ದೇಶ. ಶಾಸಕರಾಗಿದ್ದವರು, ಮಂತ್ರಿಯಾಗಿದ್ದವರು ರಾಜೀನಾಮೆ ಕೊಟ್ಟು ಆ ಸರ್ಕಾರ ತೊರೆದು ನಮ್ಮ ಜತೆ ಬಂದಿದ್ದಾರೆ. ಅದರ ಉದ್ದೇಶ ರಾಜ್ಯದಲ್ಲಿ ಸುಭದ್ರ ಸರ್ಕಾರ ಬರಬೇಕು ಅನ್ನೊದು ಇದೆಲ್ಲ ಜನರಿಗೆ ಗೊತ್ತಾಗಿದೆ. ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.