Thursday, April 17, 2025
ಸುದ್ದಿ

ಧರ್ಮಸ್ಥಳ ಲಕ್ಷ ದೀಪೋತ್ಸವ: ಇದು ದೀಪ ಸಂಭ್ರಮದ ಪರ್ವ- ಕಹಳೆ ನ್ಯೂಸ್‍

ಬೃಹತ್ ಯೋಜನೆಗಳನ್ನು ಕೈಗೊಳ್ಳಬೇಕಿದ್ದರೆ ಅದು ಕೇವಲ ಅಧಿಕಾರ, ಹಣದಿಂದ ಸಾಧ್ಯವಿಲ್ಲ. ಅಧಿಕಾರಿಯಲ್ಲಿ ಉತ್ತಮ ಭಾವನೆ, ಶುದ್ಧಚಾರಿತ್ರ್ಯ, ನೈತಿಕತೆ ಇರಬೇಕಾಗುತ್ತದೆ. ಧರ್ಮಸ್ಥಳದ ವಿಚಾರದಲ್ಲಿ ಇದು ಅಕ್ಷರಶಃ ಸತ್ಯವಾಗಿದೆ.

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತನ್ನದೇ ಆದ ಪ್ರಾಚೀನ ಪರಂಪರೆ ಹಾಗೂ ಧಾರ್ವಿುಕ ಹಿನ್ನೆಲೆ ಇದೆ. ಇಲ್ಲಿನ ಧರ್ವಧಿಕಾರಿಗಳು ದೇವರ ಸೇವೆ, ಸಾನ್ನಿಧ್ಯ ರಕ್ಷಣೆಗೆ ಪ್ರಥಮ ಆದ್ಯತೆ ಮತ್ತು ಮಾನ್ಯತೆ ನೀಡುತ್ತಾರೆ. ಹೀಗಾಗಿ ಇಲ್ಲಿ ನಡೆಯುವ ಪೂಜೆ, ಆರಾಧನೆ, ರಥೋತ್ಸವ ಮೊದಲಾದ ವಿವಿಧ ಧಾರ್ವಿುಕ ಆಚರಣೆಗಳು, ಅತ್ಯಂತ ಶಾಸ್ತ್ರೋಕ್ತವಾಗಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕಾರ್ತಿಕ ಮಾಸ ಕೃಷ್ಣಪಕ್ಷದ ಏಕಾದಶಿಯಿಂದ ಆರಂಭವಾಗಿ ಅಮಾವಾಸ್ಯೆಯವರೆಗೆ ಧರ್ಮಸ್ಥಳದಲ್ಲಿ ನಡೆಯುವ ಲಕ್ಷದೀಪೋತ್ಸವ ಕೇವಲ ಕ್ಷೇತ್ರಕ್ಕಷ್ಟೇ ಸೀಮಿತವಾಗಿರದೆ ನಾಡಿನಾದ್ಯಂತ ಪ್ರಸಿದ್ಧವಾಗಿದ್ದು, ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. ಸಮಸ್ತ ಆಸ್ತಿಕವರ್ಗಕ್ಕೂ ಸಂತಸ, ಸಂಭ್ರಮದ ಪರ್ವ, ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿಪ್ರಿಯರಿಗೂ ಸಂಭ್ರಮದಕ್ಷಣಗಳು, ‘ಧರ್ಮಸ್ಥಳ ದೀಪ’ ಎಂದೇ ಕರೆಯಲಾಗುತ್ತಿರುವ ಈ ಉತ್ಸವ ಜನ ಮರುಳೋ, ಜಾತ್ರೆ ಮರುಳೋ ಎಂಬಂತಿರದೆ ಹಲವು ಹತ್ತು ಕಾರ್ಯಕ್ರಮಗಳ ಮೂಲಕ ಸಮಾಜಮುಖಿಯಾಗಿ ಬೆಳೆದು ನಿಂತಿರುವ ಒಂದು ಸಾಂಸ್ಕೃತಿಕ ಕಾರ್ಯಕ್ರಮವೂ ಆಗಿದೆ. ಜನರ ನಂಬಿಕೆ, ಶ್ರದ್ಧೆ, ಭಕ್ತಿಗಳಿಂದ ಹರಿದು ಬಂದಿರುವ ಕಾಣಿಕೆಯನ್ನು ಮಾನವ ಕಲ್ಯಾಣಕ್ಕೆ ಬಳಸಿಕೊಂಡ ನಿದರ್ಶನ ಇಲ್ಲಿಯದ್ದಾಗಿದೆ. ದೇವಾಲಯಗಳು ಸಮಾಜದ ಬದುಕನ್ನು ರೂಪಿಸಲು ಹೇಗೆ ಶ್ರಮಿಸಬಹುದು ಎಂಬುದಕ್ಕೆ ಧರ್ಮಸ್ಥಳ ಒಂದು ಮಾದರಿಯಾಗಿದೆ. ಯಾವ ಧರ್ಮವು ಮಾನವನ ಎಲ್ಲ ಶಕ್ತಿಗಳ ಪ್ರಗತಿಪರ ವಿಕಾಸಕ್ಕೆ ಕಾರಣೀಭೂತವಾಗುತ್ತದೋ ಆ ಧರ್ಮವೇ ನಿಜವಾದ ಧರ್ಮ ಎಂಬ ಪರಿಕಲ್ಪನೆಯಲ್ಲಿ ‘ಧರ್ಮಸ್ಥಳ’ ಆದರ್ಶಪ್ರಾಯವಾಗಿ ನಿಂತಿದೆ. ಜೊತೆಗೆ ಕ್ಷೇತ್ರದಲ್ಲಿ ಧರ್ವಮೃತ ಸಮಾರಾಧನೆಯೂ ನಡೆಯುತ್ತಿರುವುದು ಇಲ್ಲಿನ ವೈಶಿಷ್ಟ್ಯ. ಕಳೆದ 87 ವರ್ಷಗಳಿಂದ ಅನುಚಾನವಾಗಿ ನಡೆದುಕೊಂಡು ಬರುತ್ತಿದೆ, ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ.

ಜಾಹೀರಾತು
ಜಾಹೀರಾತು
ಜಾಹೀರಾತು

ದೀಪೋತ್ಸವಕ್ಕೆ ಬಂದವರು ಒಂದಷ್ಟು ಜ್ಞಾನವನ್ನು ಪಡೆಯಲಿ ಎಂಬ ಉದ್ದೇಶದಿಂದ 1933ರಲ್ಲಿ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರು ಪ್ರಾರಂಭಿಸಿದ ಈ ಅಪೂರ್ವ ವ್ಯವಸ್ಥೆ ಮುಂದೆ ಪರಂಪರೆಯಾಗಿ ಬೆಳೆದುಕೊಂಡು ಬಂದು, ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರ ಕಾಲದಲ್ಲಿ ಬೆಳ್ಳಿಹಬ್ಬವನ್ನು ಆಚರಿಸಿತು ಪ್ರಸ್ತುತ ಧರ್ವಧಿಕಾರಿಯವರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಇನ್ನಷ್ಟು ಪ್ರವರ್ಧಮಾನವಾಗಿ ಬೆಳೆದು, 1982ರಲ್ಲಿ ಸುವರ್ಣ ಮಹೋತ್ಸವ, 2007ರಲ್ಲಿ ಅಮೃತಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ವೈದಿಕ, ಜೈನ, ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ ಹೀಗೆ ಸರ್ವಧರ್ವಿುಯರು ತಮ್ಮ ಧರ್ಮಗಳ ಬಗ್ಗೆ ವಿಷಯ ಮಂಡಿಸಲು ಇಲ್ಲಿ ಅವಕಾಶವಿದೆ. ಹೀಗೆ ಸರ್ವಧರ್ಮಗಳು ಸಮನ್ವಯ ಭಾವವನ್ನು ಹೊಂದಿವೆ. ಕೊನೆಯ ದಿನ ಭಗವಾನ್ ಶ್ರೀಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಸಮವಸರಣ ಪೂಜೆ ನಡೆಯುವ ಮೂಲಕ ಶ್ರೀ ಕ್ಷೇತ್ರವು, ಕಲೆ, ಸಾಹಿತ್ಯ, ಸಂಸ್ಕೃತಿಗಳಿಗೆ ಪೋ›ತ್ಸಾಹ ನೀಡಿ ಸುಜ್ಞಾನವನ್ನು ನಾಡಿನೆಲ್ಲೆಡೆ ಪಸರಿಸತಕ್ಕ ಕಾರ್ಯವನ್ನು ತನ್ಮೂಲಕ ಕೈಗೊಳ್ಳುತ್ತಿದೆ. ಪೂಜ್ಯ ಹೆಗ್ಗಡೆಯವರು ನುಡಿದಂತೆ-ದೀಪೋತ್ಸವ ಜ್ಯೋತಿಯ ಪ್ರತೀಕ, ಅದು ಕತ್ತಲನ್ನು ಹೊಡೆದೋಡಿಸುವುದು ಮತ್ತು ತನ್ನ ತೇಜಪುಂಜದಿಂದ ಜೀವರಾಶಿಗಳಿಗೆ ಉಸಿರನ್ನು, ಶಕ್ತಿಯನ್ನು ನೀಡಿ ಬದುಕುವ ಪ್ರೇರಣೆ ನೀಡುತ್ತದೆ. ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆಯುವ ಲಕ್ಷದೀಪೋತ್ಸವ ಲಕ್ಷಾಂತರ ಮಂದಿಯ ಮನಸ್ಸನ್ನು ಬೆಳಗಿಸುತ್ತಿದೆ ಮತ್ತು ಬೆಳೆಯುತ್ತಿದೆ. ಕಾರ್ತಿಕಮಾಸದಲ್ಲಿ ನಡೆಯುವ ಹಬ್ಬ ಭಕ್ತರ ನಿರೀಕ್ಷೆಯನ್ನು ಹೆಚ್ಚಿಸುತ್ತದೆ. ಶ್ರೀ ಮಂಜುನಾಥಸ್ವಾಮಿ ದೇವಾಲಯದಿಂದ ರಾತ್ರಿ ಸಮಯದಲ್ಲಿ ಹೊರಬಂದು ಸರ್ವರಿಗೂ ದರ್ಶನವೀಯುತ್ತಾರೆ. ಆಗ ಭಕ್ತಾದಿಗಳೆಲ್ಲರೂ ಭೇದಭಾವಗಳಿಲ್ಲದೆ ಅಖಂಡವಾಗಿ ಜಯಘೊಷ ಹಾಕುವಾಗ ‘ಮನುಜ ಕುಲವೆಲ್ಲ ಒಂದೇ’ ಎಂಬ ಭಾವನೆ ಮೂಡುತ್ತದೆ. ದೀಪವೊಂದು ನೂರಾಗಿ, ಸಾವಿರವಾಗಿ, ಲಕ್ಷವಾಗಿ ಪಸರಿಸಿ ಮಾನವ ಸಮುದಾಯದಲ್ಲಿರುವ ಅಜ್ಞಾನದ ಅಂಧಕಾರವನ್ನು ನಾಶಮಾಡಲಿ, ನಾಡಿನ ಜನತೆ ಸಮೃದ್ಧಿ ಮತ್ತು ಸಂತೃಪ್ತಿಯಿಂದ ಇದ್ದು ಎಲ್ಲರಿಗೂ ಮಂಗಳವಾಗಲಿ ಎಂದು ಸ್ವಾಮಿಯಲ್ಲಿ ಹೆಗ್ಗಡೆಯವರು ಪ್ರಾರ್ಥಿಸುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೀಪೋತ್ಸವ ಸಂದರ್ಭ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನಗಳೊಂದಿಗೆ ನಡೆಯುವ ವಿವಿಧ ಲಲಿತಕಲೆಗಳ ಗೋಷ್ಠಿಗಳ ಕೊಡುಗೆ ಅಪಾರವಾಗಿದೆ, 1975ರಿಂದ ಆರಂಭವಾದ ಈ ಗೋಷ್ಠಿಯ ವೇದಿಕೆಯಲ್ಲಿ ನೃತ್ಯ, ನಾಟಕ, ಯಕ್ಷಗಾನ, ವಿವಿಧ ವಾದ್ಯಗಳು, ನೃತ್ಯಗಳು, ಹಾಡುಗಳು, ಶಂಖ-ಜಾಗಟೆ, ತಮಟೆ ಈ ಮೊದಲಾದ ಕಲಾ ಪ್ರಕಾರಗಳಿಗೂ ಪ್ರೋತ್ಸಾಹ ನೀಡುತ್ತಿರುವುದು ಇಲ್ಲಿನ ವಿಶೇಷವಾಗಿದೆ. ಭಗವಂತನ ದರ್ಶನಕ್ಕಾಗಿ ಆಗಮಿಸುವ ಸಾವಿರಾರು ಪಾದಯಾತ್ರಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಬರುವುದು ವೈಶಿಷ್ಟ್ಯವಾಗಿದೆ. ಈ ಪಾದಯಾತ್ರೆ ಸ್ವಚ್ಛ ಸಮಾಜದ ರಚನೆಯ ಕಲ್ಪನೆ ಹಾಗೂ ಶಕ್ತಿಗೆ ಯೋಗದ ಬಲ ಬೇಕಿದ್ದರೆ ಭಗವಂತನ ದರ್ಶಕ್ಕಾಗಿ ಪಾದಯಾತ್ರೆ ಮಾಡುವುದಾಗಿದೆ.

ಪ್ರತಿ ವರುಷ ನಡೆಯುತ್ತಿರುವ ರಾಜ್ಯಮಟ್ಟದ ವಸ್ತುಪ್ರದರ್ಶನ ಪ್ರವರ್ಧಮಾನವಾಗಿ ಬೆಳೆಯುತ್ತಿದ್ದು, ಗ್ರಾಮೀಣ ಜನರ ಜ್ಞಾನವಿಕಾಸಕ್ಕೆ ಪೂರಕವಾದ ವಾತಾವರಣವನ್ನು ನಿರ್ವಿುಸುವಂತಾಗಿದೆ. 200ಕ್ಕೂ ಅಧಿಕ ಮಳಿಗೆಗಳಲ್ಲಿ ವಿವಿಧ ರೀತಿಯ ಉತ್ಪನ್ನಗಳ ಮಾರಾಟ, ಗ್ರಾಮೀಣಾಭಿವೃದ್ಧಿ ಯೋಜನೆಗಳ ಪುಟ್ಟ ಅವಲೋಕನ, ಸ್ವ ಉದ್ಯೋಗಗಳ ಪರಿಕಲ್ಪನೆ, ಶ್ರೀ ಕ್ಷೇತ್ರ ಧರ್ಮಸ್ಥಳದ ವಿವಿಧ ಶಿಕ್ಷಣ ಸಂಸ್ಥೆಗಳ ಮುನ್ನೋಟ, ಧಮೋತ್ಥಾನ ಟ್ರಸ್ಟ್, ರತ್ನಮಾನಸ, ಸಿರಿ, ರುಡ್​ಸೆಟ್, ಕೃಷಿ ಮೊದಲಾದ ಪ್ರದರ್ಶನ ಮಳಿಗೆಗಳಿವೆ. ವಸ್ತುಪ್ರದರ್ಶನ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಈಗ ಇದು ಶ್ರೇಷ್ಠ ಮಟ್ಟದ ಕಾರ್ಯಕ್ರಮಗಳಿಗೆ ವೇದಿಕೆಯಾಗಿದೆ. ಕಲಾವಿದರು ಈ ವೇದಿಕೆ ಮೂಲಕ ತಮ್ಮ ಮೊದಲ ಕಾರ್ಯಕ್ರಮವನ್ನು ನಡೆಸಿ, ಕಲಾಬದುಕನ್ನು ಪ್ರಾರಂಭಿಸುತ್ತಾರೆ.

ಶ್ರೀ ಕ್ಷೇತ್ರದಲ್ಲಿ ಕಳೆದ 60 ವರ್ಷಗಳಿಂದಲೂ ನಿರಂತರವಾಗಿ ನಡೆದು ಕೊಂಡು ಬರುತ್ತಿರುವ ಅನ್ನದಾನ, ವಿದ್ಯಾದಾನ, ಔಷಧದಾನ ಹಾಗೂ ಅಭಯದಾನಗಳೆಂಬ ಚತುರ್ದಾನಗಳ ಮೂಲಕ ನಿಜಾರ್ಥದಲ್ಲಿ ಶ್ರೀ ಹೆಗ್ಗಡೆಯವರು ಧರ್ಮಸ್ಥಳವನ್ನು ದೇಶಕ್ಕೆ ಒಂದು ಮಾರ್ಗದರ್ಶಿ ಸಂಸ್ಥೆಯಾಗಿ ರೂಪಿಸಿದ್ದಾರೆ. ಇಲ್ಲಿಗೆ ಬಂದ ಪ್ರತಿಯೊಬ್ಬ ವ್ಯಕ್ತಿಯೂ ಉಪಯುಕ್ತವಾದ ಕಾರ್ಯಕ್ರಮಗಳನ್ನು ಇಲ್ಲಿಂದ ಹಮ್ಮಿಕೊಳ್ಳಬಹುದಾಗಿದೆ. ಇಲ್ಲಿನ ಶಿಸ್ತು, ಸ್ವಚ್ಛತೆ, ಇಲ್ಲಿನ ಸಿಬ್ಬಂದಿಯ ಪ್ರೀತಿಯ ಆತಿಥ್ಯ ಎಲ್ಲವೂ ಅನುಕರಣೀಯ ಹಾಗೂ ಆದರ್ಶವಾಗಿದೆ.

ಧರ್ಮಸ್ಥಳದಲ್ಲಿ ಯೋಜನೆಗಳನ್ನು ರಚಿಸಿ, ಅನುಷ್ಠಾನಗೊಳಿಸಿ ಕೈಬಿಡುವ ಪದ್ಧತಿ ಇಲ್ಲ. ನಾಡಿನ ಇನ್ನಿತರ ಸಂಸ್ಥೆಗಳಿಗೆ ಪ್ರೇರಣೆಯಾಗುತ್ತಿರುವ, ಪರಿವರ್ತನೆ ತನ್ಮೂಲಕ ಸದೃಢ ಸಮಾಜ ನಿರ್ವಣದ ಗುರಿ ಈ ಯೋಜನೆಗಳಾಗಿವೆ. ಮುಖ್ಯವಾಗಿ ವೈಭವವನ್ನು ನಿಯಂತ್ರಿಸುವ ಸಾಮೂಹಿಕ ವಿವಾಹ, ಸ್ವಾವಲಂಬಿಗಳನ್ನಾಗಿಸುವ ರುಡ್​ಸೆಟ್, ಪುರಾತನ ದೇವಾಲಯಗಳ ಜೀಣೋದ್ಧಾರ ಮಾಡುವ ಧಮೋತ್ಠಾನ ಟ್ರಸ್ಟ್, ಮದ್ಯವರ್ಜನ ಶಿಬಿರ, ಭಜನಾ ಪರಂಪರೆ ಮುಂದುವರಿಸುವ ಭಜನಾ ತರಬೇತಿ ಕಮ್ಮಟ, ತುಳುಭಾಷೆಯ ಉಳಿವಿಗಾಗಿ ನಡೆಸಿದ ವಿಶ್ವ ತುಳು ಸಮ್ಮೇಳನ, ಯೋಗ ಮತ್ತು ನೈತಿಕ ಶಿಕ್ಷಣ ಕಾರ್ಯಕ್ರಮಗಳು, ಪ್ರಾಚೀನ ಸಂಸ್ಕೃತಿಯ ಸಂರಕ್ಷಣೆಗಾಗಿ ರೂಪುಗೊಂಡ ‘ಮಂಜೂಷಾ ಮ್ಯೂಸಿಯಂ’, ಅಕ್ಷರ ಸಂಸ್ಕೃತಿಯನ್ನು ರಕ್ಷಿಸುವ ಪ್ರಾಚೀನ ಹಸ್ತಪ್ರತಿ ಭಂಡಾರ ‘ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ’ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ನಾಡಿನ ಕಣ್ತೆರೆಸಿವೆ. ಹೀಗೆ ಶ್ರೀ ಕ್ಷೇತ್ರವು ಕಲೆ, ಸಾಹಿತ್ಯ, ಧರ್ಮ, ಸಂಸ್ಕೃತಿಗಳನ್ನು ಪೋಷಿಸುವ ಸಾಂಸ್ಕೃತಿಕ ಕೇಂದ್ರವಾಗಿದೆ. ಅದರೊಂದಿಗೆ ಕ್ಷೇತ್ರಕ್ಕೆ ವಿಶಿಷ್ಟವೆನಿಸಿರುವ ನ್ಯಾಯಪದ್ಧತಿ ಹುಯಿಲು ಅಥವಾ ‘ಹೊೖಲು’ ತೀರ್ಮಾನ ಇಂದಿಗೂ ಗೌರವಯುತವಾದ, ಆರೋಗ್ಯಕರ, ಸಮಾಜಮುಖಿ ನಿಲುವನ್ನು ಪಡೆದ ಯಶಸ್ವಿ ಪದ್ಧತಿಯಾಗಿದೆ. ಹೆಗ್ಗಡೆಯವರು ಬೀಡಿನ ಚಾವಡಿಯಲ್ಲಿ ಕುಳಿತಾಗ ವೈಯಕ್ತಿಕ ಅಥವಾ ಸಾಂಸ್ಕೃತಿಕ ನೆಲೆಯಲ್ಲಿ ದಾನ ಕೇಳಿದರೆ ‘ಇಲ್ಲ’ ಎನ್ನುವಂತಿಲ್ಲ, ದಾನ ಕೇಳುತ್ತಿರುವ ಹಿನ್ನೆಲೆ, ಉದ್ದೇಶ, ಯೋಗ್ಯತೆಗನುಗುಣವಾಗಿ ದರ್ಶನ ದೊರೆಯುತ್ತದೆ, ಹೆಗ್ಗಡೆಯವರ ಮನಕ್ಕೆ ಕ್ಷಣದಲ್ಲಿ ಸ್ವಾಮಿಯ ಪ್ರೇರಣೆ ಆದಂತೆ ನೀಡುವ ‘ಕೈಧರ್ಮ’ ದಾನ ವ್ಯಾಪ್ತಿಯನ್ನು ಹೇಳುವಂತಿಲ್ಲ. ಈ ದಾನಕ್ಕೆ ಯಾವುದೇ ಮತ, ಜಾತಿ, ಧರ್ಮದ ನಿರ್ಬಂಧವಿಲ್ಲ.

‘ಪರಂಪರೆ ಮತ್ತು ಆಧುನಿಕತೆಯ ಸಮನ್ವಯ ಧರ್ಮಸ್ಥಳ ದಾನ ಪರಂಪರೆ ವೈಶಿಷ್ಟ್ಯ’ ಎಂಬ ಹೆಗ್ಗಡೆಯವರ ಮಾತು ಸ್ಮರಣೀಯ. ಹೆಗ್ಗಡೆಯವರ ವೈಯಕ್ತಿಕ ಜೀವನ ನಿರಾಡಂಬರದ ಗೋಪುರಕ್ಕೆ ನಿರಹಂಕಾರದ ಕಳಸವೆನ್ನುವಂತಿದೆ. ಸೌಮ್ಯ, ಪ್ರಸನ್ನ, ಪ್ರಪುಲ್ಲ ಮುಖಮುದ್ರೆ ಶುಭ್ರಸರಳ, ನಿಷ್ಕಲಂಕ ಚಾರಿತ್ರ್ಯ, ನಿರಂತರ ಕರ್ತವ್ಯ ತತ್ಪರತೆ, ನಾಡುನುಡಿಗಳ ಪ್ರೇಮ, ನಾಡಿಗರ ಮೇಲ್ಮೆಗಾಗಿ ದಣಿವಿಲ್ಲದ ದುಡಿತ, ನಿತ್ಯ ಅಸಂಖ್ಯ ಆಸ್ತಿಕರಿಗೆ ಅನ್ನಸಂತರ್ಪಣೆ, ಕಲ್ಯಾಣಮಂಟಪಗಳ, ವಿದ್ಯಾಭವನಗಳ, ಬೈಷಜ್ಯ ಭವನಗಳ ನಿರ್ವಣಕಾರ್ಯ, ಅಗಣಿತ ಸಾಂಸ್ಕೃತಿಕ ಸಂಸ್ಥೆಗಳಿಗೆ ಧಾರಾಳವಾದ ದಾನಗಳು ಸ್ಥಾನಮಹಿಮೆಗೆ ವ್ಯಕ್ತಿ ಗರಿಮೆ ಸೇರಿದರೆ ಎಂಥ ಅದ್ಭುತ ಸಾಧನೆಗಳನ್ನು ಸಾಧಿಸ ಬಹುದೆಂಬುದಕ್ಕೆ ಗೌರವದ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರೇ ನಿದರ್ಶನ.

 

23ರಂದು ಕೆರೆಕಟ್ಟೆ ಉತ್ಸವ, 24ರಂದು ಲಲಿತೋದ್ಯಾನ ಉತ್ಸವ, 25ರಂದು ಕಂಚಿಮಾರುಕಟ್ಟೆ ಉತ್ಸವ 26ರಂದು ಗೌರಿಮಾರುಕಟ್ಟೆ ಉತ್ಸವ, 27ರಂದು ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.

ಸರ್ವಧರ್ಮ ಸಮ್ಮೇಳನ: ನ.25ರಂದು ಸಾಯಂಕಾಲ 5ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ನಿಕಟಪೂರ್ವ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಉದ್ಘಾಟಿಸಲಿದ್ದಾರೆ. ಇಂಡಿಯನ್ ಲೈಫ್​ಸ್ಟೈಲ್ ಕೋಚ್ ಇಸ್ಕಾನ್​ನ ಗೌರ್ ಗೋಪಾಲದಾಸ್ ಅಧ್ಯಕ್ಷತೆ ವಹಿಸುವರು. ಮೈಸೂರಿನ ಫೋಕಸ್ ಅಕಾಡೆಮಿ ಜೀವನ ಕೌಶಲ ಮತ್ತು ಉದ್ಯಮಿಶೀಲ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಡಿ.ಟಿ. ರಾಮಾನುಜಮ್ ‘ಜೀವನ ಮತ್ತು ಧರ್ಮ’ ವಿಷಯ ಕುರಿತು, ಕದ್ರಿ ನವನೀತ ಶೆಟ್ಟಿ ರಾಜಕೀಯ ಮತ್ತು ಭಾರತೀಯ ಸಿದ್ಧಾಂತ ವಿಷಯದ ಕುರಿತು, ಖ್ಯಾತ ಸಾಹಿತಿ ಬೋಳುವಾರ್ ಮಹಮದ್ ಕುಂಞ ‘ಗಾಂಧಿ ಎಂಬ ಪ್ರವಾದಿ’ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ಸಾಹಿತ್ಯ ಸಮ್ಮೇಳನ: ನ.26ರಂದು ಸಾಯಂಕಾಲ 5ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಉದ್ಘಾಟಿಸಲಿದ್ದಾರೆ. ಜನಪದ ವಿದ್ವಾಂಸ ಡಾ. ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಶ್ರೀಧರ ಬಳಗಾರ ಕುಮಟಾ ಅವರಿಂದ ‘ಸಾಹಿತ್ಯ ಮತ್ತು ವಿಶ್ವಮಾನವ ಪ್ರಜ್ಞೆ’, ಸಾಹಿತಿ ವೀಣಾ ಬನ್ನಂಜೆ ಅವರಿಂದ ‘ಅಕ್ಷರ ಪ್ರಪಂಚ ಮತ್ತು ಸತ್ಯದರ್ಶನ’, ವಾಗ್ಮಿ ರಿಚರ್ಡ್ ಲೂಯಿಸ್ ಅವರಿಂದ ‘ರಂಗಭೂಮಿಯಲ್ಲಿ ಹಾಸ್ಯ’ ವಿಷಯ ಕುರಿತು ಉಪನ್ಯಾಸ ನಡೆಯಲಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ