ನಿನ್ನೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಿದ ಕುಲಪತಿ ಡಾ| ಎಸ್ ವಿದ್ಯಾಶಂಕರ್-ಕಹಳೆ ನ್ಯೂಸ್
ಪುತ್ತೂರು: ‘ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ’ ಎಂಬ ಧ್ಯೇಯ ವಾಕ್ಯದೊಂದಿಗೆ ದೂರ ಶಿಕ್ಷಣವನ್ನು ನೀಡುತ್ತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಲಕ್ಷಾಂತರ ವಿದ್ಯಾಕಾಂಕ್ಷಿಗಳಿಗೆ ಗುಣ ಮಟ್ಟದ ಉನ್ನತ ಶಿಕ್ಷಣವನ್ನು ನೀಡಿ, ಸಹಸ್ರಾರು ಫಲಾನುಭವಿಗಳ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಯಶಸ್ವಿಯಾಗಿದೆ ಎಂದು ಕರಾಮುವಿ ಅಧ್ಯಯನ ಕೇಂದ್ರಗಳ ಪರಾಮರ್ಶೆ ಸಮಿತಿಯ ಮುಖ್ಯಸ್ಥ ಹಾಗೂ ಕರಾಮುವಿ ಮೈಸೂರು ಇದರ ಕುಲಪತಿ ಡಾ| ಎಸ್ ವಿದ್ಯಾಶಂಕರ್ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಧ್ಯಯನ ಕೇಂದ್ರಕ್ಕೆ ನಿನ್ನೆ ಭೇಟಿ ನೀಡಿ, ಪರಾಮರ್ಶೆ ಸಭೆಯಲ್ಲಿ ಮಾತನಾಡಿದ ಅವರು, ಈ ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ನೀಡಲಾಗುವ ಸ್ನಾತಕ/ಸ್ನಾತಕೋತ್ತರ ಶಿಕ್ಷಣವು ಯುಜಿಸಿಯ ಮಾನ್ಯತೆ ಪಡೆದಿರುತ್ತದೆ. ಪ್ರಸ್ತುತ ದೂರ ಶಿಕ್ಷಣದ ಮೂಲಕ ಪದವಿಗಳಿಸಿದ, ಸಾವಿರಾರು ವಿದ್ಯಾರ್ಥಿಗಳು ಸೂಕ್ತ ಉದ್ಯೋಗವನ್ನು ಪಡೆಯುವ ಮೂಲಕ ತಮ್ಮ ಜೀವನದಲ್ಲಿ ಸಾರ್ಥಕ್ಯವನ್ನು ಹೊಂದಿದ್ದಾರೆ. ಈ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕರಾಮುವಿ ಅಧ್ಯಯನ ಕೇಂದ್ರವು ಎಲ್ಲಾ ರೀತಿಯ ಮೂಲಭೂತ ಸೌಲಭ್ಯವನ್ನು ಹೊಂದಿದ್ದು, ಶಿಕ್ಷಣಾಸಕ್ತರಿಗೆ ಉತ್ತಮ ರೀತಿಯ ಸೇವೆಯನ್ನು ನೀಡುತ್ತಿರುವುದು ಬಹಳ ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಪರಾಮರ್ಶೆ ತಂಡದ ಸದಸ್ಯರಾದ ಬೆಂಗಳೂರಿನ ಐಇಎಮ್ ಮತ್ತು ಬಿಐಟಿ ವಿಭಾಗದ ಡಾ| ಎ ಪಿ ಪಾರ್ಥ ಮಾತನಾಡಿ, ಸಮರ್ಥ ಆಡಳಿತ ವರ್ಗ ಮತ್ತು ಬದ್ಧತೆಯುಳ್ಳ ಶಿಕ್ಷಕ ಸಮುದಾಯ ಜೊತೆ ಸೇರಿ ಕಾರ್ಯ ಪ್ರವೃತ್ತರಾದಾಗ ಶಿಕ್ಷಣದ ಮೂಲ ಉದ್ದೇಶ ಈಡೇರುತ್ತದೆ. ಕರಾಮುವಿಯು ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಿದ್ದು, ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಕೇಂದ್ರ ಕಛೇರಿ ಅಥವಾ ತಮ್ಮ ಹತ್ತಿರದ ಪ್ರಾದೇಶಿಕ ಕೇಂದ್ರಗಳನ್ನು ಸಂಪರ್ಕಿಸಿ, ಆನ್‍ಲೈನ್ ಅಥವಾ ಖುದ್ದಾಗಿ ಅರ್ಜಿ ಸಲ್ಲಿಸುವ ಮೂಲಕ ಪ್ರವೇಶಾತಿಯನ್ನು ಪಡೆಯಬಹುದು ಎಂದರು.
ಈ ಸಭೆಯಲ್ಲಿ ಭಾಗವಹಿಸಿದ ಪರಾಮರ್ಶೆ ತಂಡದ ಸಂಯೋಜಕ ಹಾಗೂ ಕರಾಮುವಿವಿಯ ಮಂಗಳೂರಿನ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಬಸವರಾಜು ಬಿ ಮಾತನಾಡಿ, ಕರಾಮುವಿ ಮೂಲಕ ನಡೆಸಲಾಗುವ ಸ್ನಾತಕ/ಸ್ನಾತಕೋತ್ತರ ಹಾಗೂ ಪಿಜಿ ಡಿಪ್ಲೋಮಾ ಕೋರ್ಸುಗಳ ಕುರಿತು ವಿವರ ನೀಡಿದರು.
ಈ ಸಭೆಯಲ್ಲಿ ಪಾಲ್ಗೊಂಡ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ| ಡಾ| ಆಂ್ಯಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಈ ಶಿಕ್ಷಣ ಸಂಸ್ಥೆಯು ವಿಶಾಲ ಹಾಗೂ ಅಧ್ಯಯನಕ್ಕೆ ಪೂರಕವಾದ ಕ್ಯಾಂಪಸನ್ನು ಹೊಂದಿದೆ. ಪದವಿ ಹಂತದಲ್ಲಿ ಬಿಎ, ಬಿಕಾಮ್, ಬಿಎಸ್ಸಿ, ಬಿಬಿಎ, ಬಿಸಿಎ, ಬಿಎಸ್‍ಡಬ್ಲ್ಯೂ ಹಾಗೂ ಸ್ನಾತಕೋತ್ತರ ಹಂತದಲ್ಲಿ ಎಮ್‍ಎಸ್‍ಡಬ್ಲ್ಯೂ ಅರ್ಥಶಾಸ್ತ್ರದಲ್ಲಿ ಎಂಎ, ಹಿಂದಿಯಲ್ಲಿ ಎಂಎ, ಎಂಕಾಮ್, ಭೌತಶಾಸ್ತ್ರದಲ್ಲಿ ಎಂಎಸ್ಸಿ, ಗಣಿತಶಾಸ್ತ್ರದಲ್ಲಿ ಎಂಎಸ್ಸಿ ಮತ್ತು ಗಣಕ ವಿಜ್ಞಾನದಲ್ಲಿ ಎಂಎಸ್ಸಿ ಅಧ್ಯಯನಕ್ಕೆ ವಿಶೇಷ ಅವಕಾಶವಿದೆ. ಇಲ್ಲಿ ಅಧ್ಯಯನ ಗೈಯುತ್ತಿರುವ ವಿದ್ಯಾರ್ಥಿಗಳು ಕೌಶಲ ಗಳಿಕೆ ಮತ್ತು ಸಂಶೋಧನೆಗಳಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಇಲ್ಲಿರುವ ಮುಕ್ತ ಮತ್ತು ದೂರ ಶಿಕ್ಷಣದ ಸೌಲಭ್ಯವು ಸಂಸ್ಥೆಯ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಪ್ರೊ| ಲಿಯೋ ನೊರೋನ್ಹಾ ಮಾತನಾಡಿ, ಈ ಸಂಸ್ಥೆಯಲ್ಲಿ ಸಾಂಪ್ರದಾಯಿಕ ಶಿಕ್ಷಣದೊಂದಿಗೆ ದೂರ ಶಿಕ್ಷಣದ ಸೌಲಭ್ಯವಿರುವುದು ಒಂದು ವಿಶೇಷವಾಗಿದೆ. 2002ರಲ್ಲಿ ಪರೀಕ್ಷಾ ಕೇಂದ್ರವಾಗಿ ಪ್ರಾರಂಭಗೊಂಡು, 42 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು. 2009ರಲ್ಲಿ ಇದೊಂದು ಪೂರ್ಣ ಪ್ರಮಾಣದ ಅಧ್ಯಯನ ಕೇಂದ್ರವಾಗಿ ಮೇಲ್ದರ್ಜೆಗೇರಿತು. 2016ರಲ್ಲಿ ಸುಮಾರು 2000 ಮಂದಿ ಅಭ್ಯರ್ಥಿಗಳು ದಾಖಲಾತಿ ಹೊಂದಿ, ಪರೀಕ್ಷೆಗೆ ಹಾಜರಾಗಿರುವುದು ಒಂದು ದೊಡ್ಡ ಮಟ್ಟದ ಸಾಧನೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ| ಎ ಪಿ ರಾಧಾಕೃಷ್ಣ, ಪಿಆರ್‍ಒ ದಿನಕರ ರಾವ್, ಅಧ್ಯಯನ ಕೇಂದ್ರದ ಕಛೇರಿ ಸಿಬ್ಬಂದಿ ಜೋಕಿಮ್ ಮಿನೇಜಸ್ ಮತ್ತು ಮಾರ್ಟಿನ್ ಡಿ’ಸೋಜ ಉಪಸ್ಥಿತರಿದ್ದು, ಸಹಕರಿಸಿದರು.
ಅಧ್ಯಯನ ಕೇಂದ್ರದ ಸಂಯೋಜಕ ಹಾಗೂ ಕಾಲೇಜಿನ ವ್ಯವಹಾರ ಅಧ್ಯಯನ ವಿಭಾಗ ಮುಖ್ಯಸ್ಥ ರಾಧಾಕೃಷ್ಣ ಗೌಡ ಪರಾಮರ್ಶೆ ಸಭೆಯನ್ನು ಸಂಯೋಜಿಸಿದರು.