ಲಕ್ನೋ: ಅಯೋಧ್ಯಾ ನಗರದಲ್ಲಿ ಹಸುಗಳಿಗೂ ಬಟ್ಟೆ ತೊಡಿಸಲು ಸ್ಥಳೀಯ ಆಡಳಿತ ಮುಂದಾಗಿದೆ.ಉತ್ತರ ಭಾರತದಲ್ಲಿ ಬೀಸುತ್ತಿರುವ ಚಳಿಗಾಳೀಯಿಂದ ಹಸು ಹಾಗೂ ಕರುಗಳನ್ನು ರಕ್ಷಿಸಲು ಅಯೋಧ್ಯಾ ನಗರದ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಆರಂಭದಲ್ಲಿ ಹಸು ಕರುಗಳಿಗೆ ಬಟ್ಟೆ ಹಾಕಲು ನಿರ್ಧರಿಸಿದ್ದರೆ, ಮುಂದಿನ ಹಂತದಲ್ಲಿ ಸಾವಿರಕ್ಕೂ ಅಧಿಕ ಬಟ್ಟೆ ತೊಡಿಸಲು ನಿರ್ಧರಿಸಲಾಗಿದೆ. ಬ್ಲೇಜರ್ ರೀತಿಯ ಬಟ್ಟೆಯನ್ನು ಆಕಳು ಹಾಗೂ ಕರುಗಳಿಗೆ ಹಾಕಲಾಗುತ್ತಿದೆ. ಇದಕ್ಕಾಗಿ ನಗರ ಪಾಲಿಕೆಯು 250-300 ವ್ಯಯಿಸುತ್ತಿದೆ.
ಇತ್ತೀಚೆಗೆ ನಗರ ಪಾಲಿಕೆ ಅಧಿಕಾರಿಗಳನ್ನು ಭೇಟಿಯಾಗಿದ್ದ ಸಾಧು ಸಂತರ ನಿಯೋಗವು ಹಸುಗಳನ್ನು ಚಳಿಯಿಂದ ರಕ್ಷಿಸುವಂತೆ ಮನವಿ ಮಾಡಿದ್ದರು.ಇದಕ್ಕೆ ಸ್ಥಳೀಯ ಪ್ರಾಧಿಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಆದರೆ ಸರ್ಕಾರದ ಈ ಕ್ರಮಕ್ಕೆ ವಿರೋಧವೂ ವ್ಯಕ್ತವಾಗಿದೆ. ನಗರದಲ್ಲಿ 40 ಸಾವಿರಕ್ಕೂ ಅಧಿಕ ಭಿಕ್ಷುಕರು ಹಾಗೂ ನಿರ್ಗತಿಕರಿದ್ದಾರೆ. ಚಳಿಯಿಂದ ಅವರನ್ನು ರಕ್ಷಣೆ ಮಾಡುವ ಕೆಲಸವಾಗಬೇಕಿದೆ, ಮನುಷ್ಯರನ್ನು ಬಿಟ್ಟು ಗೋವುಗಳನ್ನು ರಕ್ಷಣೆ ಮಾಡುವ ಅಗತ್ಯವೇನಿದೆ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಅಂದಹಾಗೆ ನಗರದಲ್ಲಿ ಏಳು ಸಾವಿರಕ್ಕೂ ಅಧಿಕ ಬೀದಿ ದನಕರುಗಳಿವೆ.