ನವದೆಹಲಿ: ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆದುಕೊಂಡಿರುವ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರ ತೀರ್ಪಿನ ವಿರುದ್ಧ ಮತ್ತು ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿಯಾಗಿ ಮತ್ತು ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ. ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಸಂಯೋಜನೆ ಸಲ್ಲಿಸಿದ ಅರ್ಜಿಗಳ ಕುರಿತು ಕೇಂದ್ರ, ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರಿಗೆ ನ್ಯಾಯಾಲಯ ಭಾನುವಾರ ನೋಟಿಸ್ ನೀಡಿದೆ.
ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಬೆಳಿಗ್ಗೆ 10.30 ಕ್ಕೆ ವಿಚಾರಣೆಯನ್ನು ಪ್ರಾರಂಭಿಸಲಿದ್ದು, ಮಧ್ಯಾಹ್ನ 12 ರ ಮೊದಲು ತೀರ್ಪು ಹೊರಬರುವ ನಿರೀಕ್ಷೆಯಿದೆ.
ಈ ಅರ್ಜಿಗಳ ಕುರಿತು ಭಾನುವಾರ ಬೆಳಿಗ್ಗೆ ತುರ್ತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಎರಡು ಪತ್ರಗಳನ್ನು ಹಾಜರುಪಡಿಸುವಂತೆ ಕೇಳಿದೆ – ಮಹಾರಾಷ್ಟ್ರದ ರಾಜ್ಯಪಾಲರು ಸರ್ಕಾರವನ್ನು ರಚಿಸಲು ಬಿಜೆಪಿಯನ್ನು ಆಹ್ವಾನಿಸಿದ ಪುರಾವೆ ಮತ್ತು ಫಡ್ನವೀಸ್ ಅವರು ಹಕ್ಕು ಚಲಾಯಿಸಲು ಬಳಸಿದ ಬೆಂಬಲ ಪತ್ರವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಅಶೋಕ್ ಭೂಷಣ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಸಲ್ಲಿಸಿದ್ದ ಮನವಿ ಅರ್ಜಿಯಲ್ಲಿ ತಕ್ಷಣವೇ ಬಹುಮತ ಸಾಬೀತು ಪಡಿಸುವಂತೆ ಮನವಿ ಮಾಡಿದೆ. ಅಲ್ಲದೆ ಬಿಜೆಪಿಯನ್ನು ಸರ್ಕಾರ ರಚಿಸುವಂತೆ ರಾಜ್ಯಪಾಲರು ಯಾವಾಗ ಆಹ್ವಾನ ನೀಡಿದರು ಎಂದು ಪ್ರಶ್ನಿಸಿದೆ. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು ರಾಜ್ಯಪಾಲರ ಆಹ್ವಾನ ಪರಿಶೀಲಿಸಿದ ನಂತರ ತೀರ್ಮಾನಿಸುವುದಾಗಿ ತಿಳಿಸಿದೆ. ರಾಜ್ಯಪಾಲರಿಂದ ದಾಖಲೆಗಳನ್ನು ಕೋರಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ ಎಂದು ಸಾಲಿಸಿಟರ್ ಜನರಲ್ ಮೆಹ್ತಾ ಹೇಳಿದ್ದಾರೆ.
ಭಾನುವಾರ, ಕೆಲವು ಬಿಜೆಪಿ ಶಾಸಕರು ಮತ್ತು ಇಬ್ಬರು ಸ್ವತಂತ್ರ ಶಾಸಕರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ ವಾದಿಸಿ, ಅರ್ಜಿದಾರರು 19 ದಿನಗಳಿಂದ ನಿದ್ರಿಸುತ್ತಿದ್ದರೆ ಎಂದು ಪ್ರಶ್ನಿಸಿದರಲ್ಲದೆ, ಈಗ ಅವರು ಇಂದು ಸ್ವತಃ ಶೀಘ್ರವೇ ಬಹುಮತ ಸಾಬೀತು ಪಡಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಬಂದಿದ್ದಾರೆ. “ನಾನು ಎಲ್ಲಾ ಸಂಗತಿಗಳನ್ನು ಹೊರತರುತ್ತೇನೆ, ಇದಕ್ಕಾಗಿ ನನಗೆ ಎರಡರಿಂದ ಮೂರು ದಿನಗಳ ಕಾಲಾವಕಾಶಬೇಕು” ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿದರು.
ಕಾಂಗ್ರೆಸ್ ಮತ್ತು ಎನ್‌ಸಿಪಿ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ, ನ್ಯಾಯಾಲಯವು ಸಮ್ಮಿಶ್ರ ಸರ್ಕಾರದ ಬಹುಮತ ಸಾಬೀತಿಗೆ ಆದೇಶಿಸಬೇಕು ಅಥವಾ ತಮ್ಮ ಬಹುಮತವನ್ನು ಸಾಬೀತುಪಡಿಸಲು ಬಿಜೆಪಿಯನ್ನು ಕೇಳಬೇಕು. ಈ ಪ್ರಕ್ರಿಯೆ ಭಾನುವಾರ ಅಥವಾ ಸೋಮವಾರವೇ ನಡೆಯಬೇಕು ಎಂದು ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನ ಭಾನುವಾರ, ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ, ಅಜಿತ್ ಪವಾರ್ ತಮ್ಮ ಮೌನ ಮುರಿದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮತ್ತು ಇತರರಿಗೆ ಧನ್ಯವಾದಗಳನ್ನು ತಿಳಿಸಿ ಸರಣಿ ಟ್ವೀಟ್‌ಗಳನ್ನು ಮಾಡಿದರು. ಆದರೆ ‘ಆಶ್ಚರ್ಯಕರವಾಗಿ’ ಅವರು ಇನ್ನೂ ಎನ್‌ಸಿಪಿಯಲ್ಲಿದ್ದಾರೆ ಮತ್ತು ಮುಂದೆಯೂ ಎನ್‌ಸಿಪಿಯಲ್ಲೇ ಇರುವುದಾಗಿ ತಿಳಿಸಿದರು.. ಆದರೆ, ಅವರ ಹೇಳಿಕೆಯನ್ನು ಎನ್‌ಸಿಪಿ ಮುಖ್ಯಸ್ಥ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ಅವರು ಅಲ್ಲೆಗೆಳೆದಿದ್ದು, ಅಜಿತ್ ಅವರ ಈ ಹೇಳಿಗೆ ‘ಸುಳ್ಳು ಮತ್ತು ದಾರಿತಪ್ಪಿಸುವ’ ತಂತ್ರ ಎಂದು ಕಿಡಿಕಾರಿದ್ದಾರೆ.
“ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಶಿವಸೇನೆ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಎನ್‌ಸಿಪಿ ಸರ್ವಾನುಮತದಿಂದ ನಿರ್ಧರಿಸಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಗೊಂದಲ ಮತ್ತು ಸುಳ್ಳು ಗ್ರಹಿಕೆ ಸೃಷ್ಟಿಸುವ ಸಲುವಾಗಿ ಅಜಿತ್ ಪವಾರ್ ಸುಳ್ಳು ಹೇಳಿಕೆ ನೀಡುವ ಮೂಲಕ ಜನರನ್ನು ದಾರಿತಪ್ಪಿಸುತ್ತಿದ್ದಾರೆ” ಎಂದು ಓಅP ಮುಖ್ಯಸ್ಥ ಶರದ್ ಪವಾರ್ ಹೇಳಿದರು.
ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನಾ ಮೂವರು ತಮ್ಮ ಶಾಸಕರನ್ನು ಪ್ರತ್ಯೇಕ ಹೋಟೆಲ್‌ಗಳಲ್ಲಿ ಇರಿಸಿದ್ದು, ಶಾಸಕರು ಬಿಜೆಪಿ ಮತ್ತು ಎನ್‌ಸಿಪಿ ಬಂಡಾಯ ಶಾಸಕರನ್ನು ಬೇಟೆಯಾಗದಂತೆ ತಡೆಯುವ ಪ್ರಯತ್ನದಲ್ಲಿದೆ. ಶಿವಸೇನೆ ತಮ್ಮ ಶಾಸಕರನ್ನು ಹೋಟೆಲ್ ಲಲಿತ್‌ನಲ್ಲಿ ಒರೋಸೋದ್ದರೆ. ಜೆಡಬ್ಲ್ಯೂ ಮ್ಯಾರಿಯಟ್‌ನಲ್ಲಿ ಕಾಂಗ್ರೆಸ್ ಶಾಸಕರೂ ಹಾಗೂ ಮುಂಬೈನ ನವೋದಯದಲ್ಲಿ ಎನ್‌ಸಿಪಿ ಎಂಎಲ್‌ಎಗಳು ತಂಗಿದ್ದಾರೆ.
ಶಿವಸೇನೆ ಮುಖಂಡ ಸುಭಾಷ್ ದೇಸಾಯಿ ಶಿವಸೇನೆ ಶಾಸಕರೊಂದಿಗೆ ಇದ್ದು, ಶಾಸಕರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಹೋಟೆಲ್ ಅನ್ನು ಸುತ್ತುವರಿಯಲಾಗಿದೆ ಮತ್ತು ಅವರಲ್ಲಿ ಯಾರಿಗೂ ಹೊರಹೋಗಲು ಅನುಮತಿ ಇಲ್ಲ, ಆದರೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಉನ್ನತ ಸಹಾಯಕ ಮಿಲಿಂದ್ ನರ್ವೇಕರ್ ಭದ್ರತೆಯ ಬಗ್ಗೆ ನಿರ್ದೇಶನಗಳನ್ನು ನೀಡುತ್ತಿದ್ದಾರೆ. ಶಾಸಕರನ್ನು ತಮ್ಮ ಮನೋಸ್ಥೈರ್ಯವನ್ನು ಹೆಚ್ಚಿಸಲು ಉತ್ತರಾಧಿಕಾರಿ ಆದಿತ್ಯ ಠಾಕ್ರೆ ಕೂಡ ಭೇಟಿಯಾಗುತ್ತಿದ್ದಾರೆ.
ಶರದ್ ಪವಾರ್ ಅವರ ಸೋದರಳಿಯ ಮತ್ತು ಎನ್‌ಸಿಪಿಯ ಮಹಾರಾಷ್ಟ್ರದ ಅಂದಿನ ಶಾಸಕಾಂಗ ಪಕ್ಷದ ಮುಖಂಡ ಅಜಿತ್ ಪವಾರ್ ಅವರು ಶನಿವಾರ ಬೆಳಿಗ್ಗೆ ಮುಖ್ಯಮಂತ್ರಿ ಫಡ್ನವೀಸ್ ಅವರ ಜೊತೆಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಎನ್‌ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಸಂಯೋಜನೆಯು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು.
ಮಹಾರಾಷ್ಟ್ರದ 288 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 105 ಶಾಸಕರನ್ನು ಹೊಂದಿರುವ ಏಕೈಕ ಅತಿದೊಡ್ಡ ಪಕ್ಷವಾಗಿದ್ದು, ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕ್ರಮವಾಗಿ 56, 54 ಮತ್ತು 44 ಸದಸ್ಯರನ್ನು ಹೊಂದಿವೆ.