ಆರ್ಸಿಬಿ ತಂಡಕ್ಕೆ ನಾಚಿಕೆಯಾಗಬೇಕು!; ಕೊಹ್ಲಿ ತಂಡದ ವಿರುದ್ಧ ತಿರುಗಿ ಬಿದ್ದ ಕನ್ನಡಿಗರು; ಅಷ್ಟಕ್ಕೂ ಆಗಿದ್ದೇನು?-ಕಹಳೆ ನ್ಯೂಸ್
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಹೆಚ್ಚು ಎನರ್ಜಿ ಇರುವ ತಂಡವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. 12 ಆವೃತ್ತಿ ಕಳೆದರೂ ಕೊಹ್ಲಿ ಪಡೆ ಒಮ್ಮೆಯೂ ಕಪ್ ಗೆದ್ದಿಲ್ಲ. ಆದರೂ ಆರ್ಸಿಬಿಗೆ ಅಭಿಮಾನಿಗಳೇ ದೇವರು. ಗೆದ್ದರು- ಸೋತರು ಸದಾ ಆರ್ಸಿಬಿ ತಂಡಕ್ಕೆ ಬೆಂಬಲಿಸುತ್ತಾ ಬಂದಿದ್ದಾರೆ ಕನ್ನಡಿಗರು.
ಆದರೆ, ಸದ್ಯ ಆರ್ಸಿಬಿ ಅಭಿಮಾನಿಗಳು ಆರ್ಸಿಬಿ ತಂಡದ ವಿರದ್ಧವೇ ತಿರುಗಿ ಬಿದ್ದಿದ್ದಾರೆ. ಅಲ್ಲದೆ ನಾವಿನ್ನು ಆರ್ಸಿಬಿಗೆ ಬೆಂಬಲವನ್ನೇ ನೀಡುವುದಿಲ್ಲ ಎಂದು ಕೆಲವರು ಪಟ್ಟು ಹಿಡಿದು ಕೂತಿದ್ದಾರೆ. ಇದಕ್ಕೆ ಕಾರಣವಾದರೂ ಏನು..?
ಆರ್ಸಿಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ 30 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದೆ. ಇಷ್ಟು ಫಾಲೋವರ್ಗಳಲ್ಲಿ ಕನ್ನಡಿಗರ ಸಂಖ್ಯೆ ಕೊಂಚ ಹೆಚ್ಚಿದೆ ಎನ್ನಬಹುದು. ಹೀಗಿರುವಾಗ ಆರ್ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬೆಂಗಳೂರು ಪದ ಕೈಬಿಟ್ಟು ರಾಯಲ್ ಚಾಲೆಂಜರ್ಸ್ ಎಂದು ಬದಲಾವಣೆ ಮಾಡಿಕೊಂಡಿದೆ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಆರ್ಸಿಬಿ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಅನೇಕರು ಟ್ವೀಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲು ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಸಿಂಪಲ್ ಸಿನಿ ಅವರು, “ಒಂದು ಕಪ್ ಗೆಲ್ಲದಿದ್ದರೂ, ಒಬ್ಬ ಕನ್ನಡಿಗನನ್ನೂ ಆಡಿಸದಿದ್ದರೂ, ನಾವು ನಿಮ್ಮನ್ನು ಇಷ್ಟಪಡಲು ಕಾರಣ ರಾಯಲ್ ಚಾಲೆಂಜರ್ ಅಲ್ಲ. ನಿಮ್ಮ ಊರು, ಸೂರು, ಕ್ರೀಡಾಂಗಣ ಮತ್ತು ನೀವೆ ಆಗಿದ್ದ ‘ಬೆಂಗಳೂರು’. ಈಗ ಅದನ್ನೇ ಬಿಟ್ಟು ಮುನ್ನೆಡೆಯಲು ಹೊರಟರೆ ಅಭಿಮಾನಿಗಳ ಕೆಂಗಣ್ಣು ಬಿದ್ದೀತು. ದಯವಿಟ್ಟು ಬೆಂಗಳೂರು ಸೇರಿಸಿ, ಸೋಲೋ ಗೆಲುವೋ ಜೊತೆಗೇ ಇರುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.