ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳ ದೀಪೋತ್ಸವದ ಮೆರುಗನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಭಕ್ತರು ಸಾಕ್ಷಿಯಾದರು. ಕ್ಷೇತ್ರದ ಪ್ರಮುಖ ಹಬ್ಬಗಳಲ್ಲಿ ಒಂದಾದ ಲಕ್ಷ ದೀಪೋತ್ಸವ ಆರಂಭಗೊಂಡಿದ್ದು, ನಿನ್ನೆ ರಾತ್ರಿ ಕ್ಷೇತ್ರದಲ್ಲಿ ನಡೆದ ವಿಶೇಷ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳು ದೀಪೋತ್ಸವಕ್ಕೆ ಕಳೆ ಕಟ್ಟಿದವು.
ಕಾರ್ತಿಕ ಮಾಸದಲ್ಲಿ ನಾಡಿನೆಲ್ಲೆಡೆ ಇರುವ ಶಿವಾಲಯಗಳಲ್ಲಿ ದೀಪೆಪೋತ್ಸವ ನಡೆಯುವುದು ವಾಡಿಕೆ. ಅದೇ ರೀತಿ ಧರ್ಮಸ್ಥಳದಲ್ಲಿ ಪ್ರತಿ ಕಾರ್ತಿಕ ಮಾಸದ ಕಡೆಯ ವಾರದಲ್ಲಿ ದೀಪೋತ್ಸವವನ್ನು ಆಚರಿಸಲಾಗುವುದು. ಈ ಬಾರಿಯೂ ಸಹ ಆರು ದಿನಗಳ ಕಾಲ ದೀಪೋತ್ಸವ ಸಂಪನ್ನಗೊಳ್ಳಲಿದ್ದು, ನಿನ್ನೆಯಿಂದ ಆರಂಭಗೊಂಡಿರುವ ಉತ್ಸವದಿಂದಾಗಿ ಎಲ್ಲೆಡೆ ದೀಪಗಳ ಸೊಬಗು ಮೇಳೈಸಿದೆ.
ಧಾರ್ಮಿಕ ಹಾಗೂ ಸಾಹಿತ್ಯ ಸಮ್ಮೇಳನಗಳು, ವಸ್ತು ಪ್ರದರ್ಶನ, ಪ್ರತಿದಿನ ಸಾಂಸ್ಕøತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ವೇದಿಕೆಯಾಗಿ ಧಾರ್ಮಿಕ, ಸಾಹಿತ್ಯಿಕ ವಾತಾವರಣದ ಕೊಂಡಿಯಾಗಿ ನಡೆಯುವ ದೀಪೋತ್ಸವ ಭಕ್ತರು ಹಾಗೂ ಪ್ರವಾಸಿಗರ ಕಣ್ಮನ ತಣಿಸುತ್ತದೆ.
ಈ ಬಾರಿ ಆರಂಭವಾಗಿರುವ ದೀಪೋತ್ಸವ ಡಿಸೆಂಬರ್ 2ರ ವರೆಗೂ ನಡೆಯಲಿದ್ದು, ಪ್ರತಿದಿನ ಶ್ರೀಕ್ಷೇತ್ರದ ಆರಾಧ್ಯ ದೈವ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸೇರಿದಂತೆ ಇನ್ನಿತರ ವಿಶೇಷ ಸೇವೆಗಳು ನೆರವೇರಲಿವೆ. ಉತ್ಸವದಲ್ಲಿ ಪಾಲ್ಗೊಳ್ಳಲು ಹಾಗೂ ದೇವರ ಅನುಗ್ರಹಕ್ಕೆ ಪಾತ್ರರಾಗಲು ಲಕ್ಷಾಂತರ ಮಂದಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ನಿನ್ನೆಯಿಂದಲೇ ಭಕ್ತರ ದಂಡು ಕ್ಷೇತ್ರದಲ್ಲಿ ನೆಲೆಸಿದ್ದು, ಪ್ರತಿದಿನ ಸಾಕಷ್ಟು ಮಂದಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.