ಚಿಕ್ಕಬಳ್ಳಾಪುರ: ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಅನೈತಿಕ ಮೈತ್ರಿ ಮೂಲಕ ಸರ್ಕಾರ ರಚನೆ ಮಾಡಿದರು. ನಮಗೆ ಸಿಕ್ಕ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ಕೊಂಡೊಯ್ದರು ಇದರಿಂದ ಬೇಸತ್ತು ರಾಜೀನಾಮೆ ನೀಡಿ ಬಂದಿದ್ದೇನೆ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ತಿಳಿಸಿದರು.
ತಾಲ್ಲೂಕಿನ ಆವಲಗುರ್ಕಿ, ಕೇತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ನಿಮಗೆ ಇಸ್ಪೀಟ್ ಕ್ಲಬ್ ಬೇಕಾ? ಮೆಡಿಕಲ್ ಕಾಲೇಜು ಬೇಕಾ? ಕಾಂಗ್ರೆಸ್‌ನವರು ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಆಡುವವರು ಆರು ತಿಂಗಳು, ನೋಡುವವರು ಮೂರು ತಿಂಗಳು ಅನ್ನುವ ಮಾತಿದೆ. ಇಂದು ಕಾಂಗ್ರೆಸ್ ಅಭ್ಯರ್ಥಿಗೆ ಮತ ಕೊಟ್ಟರೆ ನಿಮ್ಮ ಮನೆ ಹಾಳಾಗಲಿದೆ. ಇಸ್ಪೀಟ್ ಕ್ಲಬ್ ಮತ್ತೆ ಬರಲಿದೆ. ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಒಂದೇ ಒಂದು ಇಸ್ಪೀಟ್ ಕ್ಲಬ್ ತೆರೆಯಲು ಅವಕಾಶ ಕೊಟ್ಟಿಲ್ಲ. ಊರು ಕೇರಿ ಗೊತ್ತಿಲ್ಲದ ಅಡ್ರೆಸ್ ಇಲ್ಲದವರನ್ನು ಜೆಡಿಎಸ್‌ನವರು ಕಣಕ್ಕಿಳಿಸಿದ್ದಾರೆ’ ಎಂದರು.
ಬಡವರು ಆರೋಗ್ಯಕ್ಕಾಗಿ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿಸಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಮುಂದಿನ ಮೂರೂವರೆ ವರ್ಷದಲ್ಲಿ ಜಿಲ್ಲೆಯ ರೈತರಿಗೆ ನೀರು, ಯುವಕರಿಗೆ ಉದ್ಯೋಗ ತಂದುಕೊಡುತ್ತೇನೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಿದ್ದಂತೆ ಜಿಲ್ಲೆಗೆ ವೈದ್ಯಕೀಯ ಕಾಲೇಜು ಕೊಟ್ಟಿದ್ದಾರೆ. ಮಂಚೇನಹಳ್ಳಿ ತಾಲ್ಲೂಕಾಗಿ ಘೋಷಣೆ ಮಾಡಿದ್ದಾರೆ. ನಗರದ ನಿವಾಸಿಗಳಿಗೆ 5 ಸಾವಿರ ಹಕ್ಕುಪತ್ರ ನೀಡುವ ಕಾರ್ಯ ಆಗುತ್ತಿದೆ ಎಂದು ತಿಳಿಸಿದರು.
ಕೇತೇನಹಳ್ಳಿ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿ ಮಾಡುತ್ತೇನೆ. ಜಲಮಡಗು ಜಲಪಾತದ ನೀರನ್ನು ನಿಲ್ಲಿಸಿ, ಜಲಾಶಯವೊಂದನ್ನು ಕಟ್ಟಿಸಿ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ಕೊಟ್ಟರು.
ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ‘ಡಾ.ಕೆ. ಸುಧಾಕರ್ ನಿಮ್ಮ ಅಭಿವೃದ್ಧಿ ಬಯಸಿ ಬಂದಿದ್ದಾರೆ. ಯಾವ ಶಾಸಕರಿಗೆ ಸ್ವಾಭಿಮಾನದ ಗೌರವ ಸಿಗುವುದಿಲ್ಲವೋ ಅಲ್ಲಿ ರಾಜಕಾರಣ ಮಾಡಬೇಕಾಗುತ್ತದೆ. ಜನರಿಗಾಗಿ ರಾಜೀನಾಮೆ ನೀಡಿ ಕ್ಷೇತ್ರದ ಜನತೆಗಾಗಿ ಬಂದಿದ್ದಾರೆ. ಚುನಾವಣೆಯಲ್ಲಿ ಅವರನ್ನು ಬೆಂಬಲಿಸುವಂತೆ’ ಮತಯಾಚಿಸಿದರು.
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಸಂಸದ ಪಿ.ಸಿ.ಮೋಹನ್, ಶಾಸಕರಾದ ತಿಪಟೂರು ನಾಗೇಶ್ ಬೆಳ್ಳಿ ಪ್ರಕಾಶ್, ಗೂಳಿಹಟ್ಟಿ ಶೇಖರ್ ಮುಖಂಡರಾದ ಮಂಚನಬಲೆ ಸುರೇಶ್ ಗೌಡ, ಮಂಚೇನಹಳ್ಳಿ ಪ್ರಾಣೇಶ್, ಮಾಜಿ ಶಾಸಕ ಎಂ. ಶಿವಾನಂದ್, ಕೋಮುಲ್ ಮಾಜಿ ಅಧ್ಯಕ್ಷ ನಗರಾಜ್, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಣ್ಣ ಸೇರಿ ಮುಖಂಡರು ಉಪಸ್ಥಿತರಿದ್ದರು.