ಮುಂಬೈ: ವಿಶ್ವಾಸಮತ ಯಾಚನೆಗೂ ಮುನ್ನವೇ ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿಗೆ ಬೆಂಬಲ ಘೋಷಿಸಿ ದೇವೇಂದ್ರ ಫಡ್ನವೀಸ್ ಜೊತೆಯಲ್ಲಿ ಅಜಿತ್ ಪವಾರ್ ಭಾನುವಾರ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಜಿತ್ ಪವಾರ್ ಗೆ ಬೆಂಬಲ ನೀಡಿದ್ದ ಶಾಸಕರು ಮಾತೃಪಕ್ಷಕ್ಕೆ ಹಿಂದಿರುಗಿದ್ದರು. ಇಂದು ಸುಪ್ರೀಂಕೋರ್ಟ್ ನಾಳೆ ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಸಾಬೀತು ಮಾಡುವಂತೆ ಮಧ್ಯಂತರ ಆದೇಶ ನೀಡಿದೆ. ಈ ಬೆನ್ನಲ್ಲೇ ಅಜಿತ್ ಪವಾರ್ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ. ಇತ್ತ ಸಿಎಂ ದೇವೇಂದ್ರ ಫಡ್ನವೀಸ್ ಮಧ್ಯಾಹ್ನ 3.30ಕ್ಕೆ ಸುದ್ದಿಗೋಷ್ಠಿ ಕರೆದಿದ್ದಾರೆ.
ಇತ್ತ ಸಂಜೆ 5 ಗಂಟೆಗೆ ಎನ್‍ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಜಂಟಿ ಸುದ್ದಿಗೋಷ್ಠಿಯನ್ನು ಕರೆದಿವೆ. ಈಗಾಗಲೇ ಅಜಿತ್ ಪವಾರ್ ಅವರನ್ನು ಎನ್‍ಸಿಪಿ ಶಾಸಕಾಂಗ ನಾಯಕ ಸ್ಥಾನದಿಂದ ಉಚ್ಛಾಟಿಸಿ ಜಯಂತ್ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ಅಜಿತ್ ಪವಾರ್ ಅವರನ್ನು ಎನ್‍ಸಿಪಿಗೆ ಸೆಳೆಯಲು ಶರದ್ ಪವಾರ್ ಕುಟುಂಬಸ್ಥರು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಮಹಾ ಅಂಗಳದಲ್ಲಿ ಕೇಳಿ ಬರುತ್ತಿವೆ.
ಸುಪ್ರಿಂಕೋರ್ಟ್ ಆದೇಶವೇನು?
ಚುನಾವಣೆ ನಡೆಸದೇ ಹಿರಿಯ ಶಾಸಕರೊಬ್ಬರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಬೇಕು. ಬುಧವಾರ ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಸಾಬೀತು ಪಡಿಸಬೇಕು. ಬಹುಮತ ಸಾಬೀತು ಸಂಪೂರ್ಣ ಪ್ರಕ್ರಿಯೆ ನೇರ ಪ್ರಸಾರವಾಗಬೇಕು. ವಿಶ್ವಾಸಮತ ಯಾಚನೆಗೂ ಮುನ್ನ ಎಲ್ಲ ಶಾಸಕರ ಪ್ರಮಾಣವಚನ ತೆಗೆದುಕೊಳ್ಳಬೇಕು. ಗುಪ್ತ ಮತದಾನ ಮಾಡುವಂತಿಲ್ಲ, ಎಲ್ಲ ಪ್ರಕ್ರಿಯೆಗಳು ಪಾರದರ್ಶಕವಾಗಿರಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.