ಬೆಳಗಾವಿ: ಜಿಲ್ಲೆಯ ಮಲಪ್ರಭಾ ನದಿಯ ಒಡಲಿನಲ್ಲಿ ಮಹಾಪೂರ ಕಡಿಮೆಯಾದಾಗಿನಿಂದ ಮರಳನ್ನು ಲೂಟಿ ಮಾಡುವ ಕಾರ್ಯ ಎಗ್ಗಿಲ್ಲದೇ ನಡೆಯುತ್ತಿದೆ.
ನದಿಯೊಳಗೆ ಹಾಗೂ ದಂಡೆಯಲ್ಲಿ ಹರಡಿಕೊಂಡಿರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮರಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿವ ಕುರಿತು ಪರಿಸರ ಪ್ರೇಮಿಗಳು ಮತ್ತು ಪ್ರಜ್ಞಾವಂತರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ರಾತ್ರೋರಾತ್ರಿ ಟ್ರ್ಯಾಕ್ಟರ್, ಲಾರಿಗಳ ಮೂಲಕ ಕದ್ದುಮುಚ್ಚಿ ಮರಳನ್ನು ಸಾಗಿಸಲಾಗುತ್ತದೆ. ದಂಧೆಕೋರರ ಹೊಡೆತಕ್ಕೆ ಸಿಲುಕಿ ನದಿ ನರಳುತ್ತಿದೆ. ಈ ಮೂಲಕ ಸರ್ಕಾರದ ಬೊಕ್ಕಸ ತುಂಬಿಸಲು ಬಳಸಿಕೊಳ್ಳಬಹುದಾಗಿದ್ದ ಅವಕಾಶವನ್ನು ಅಧಿಕಾರಿಗಳು ತಪ್ಪಿಸಿಕೊಂಡಿದ್ದಾರೆಯೇ ಎನ್ನುವ ಪ್ರಶ್ನೆಯೂ ಮೂಡುತ್ತಿದೆ.
ವಿಶೇಷವಾಗಿ ಸವದತ್ತಿ ತಾಲ್ಲೂಕಿನ ಮುನವಳ್ಳಿ ಭಾಗದಲ್ಲಿ ನದಿಯ ಒಡಲನ್ನು ಬಗೆಯುತ್ತಿರುವುದು ಸಾಮಾನ್ಯವಾಗಿದೆ. ಈ ಕುರಿತು ಸ್ಥಳೀಯರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.
ಮನವಿ ಸಲ್ಲಿಸಿದ್ದರು:
ಪ್ರವಾಹದ ಸಂದರ್ಭದಲ್ಲಿ ಮರಳಿನ ದಿಬ್ಬಗಳನ್ನು ಸೃಷ್ಟಿಸಿ ನದಿಯು ಹರಿದಿತ್ತು. ಈ ಮರಳನ್ನು ರಕ್ಷಿಸಬೇಕು. ಅಕ್ರಮವಾಗಿ ಸಾಗಿಸುವುದಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಗಿತ್ತು. ಆದರೆ, ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲದಿರುವುದು ನದಿಯ ಒಡಲನ್ನು ಗಮನಿಸಿದಾಗ ಕಂಡುಬರುತ್ತಿದೆ.
‘ಪ್ರವಾಹ ಬಂದು ಮೂರು ತಿಂಗಳುಗಳೇ ಕಳೆದಿವೆ. ಮುನವಳ್ಳಿಯ ಮಲಪ್ರಭಾ ನದಿ ತೀರದಲ್ಲಿ ನೀರಿನ ರಭಸಕ್ಕೆ ಕಳೆಗಿಡಗಳು ಕೊಚ್ಚಿ ಹೋಗಿವೆ. ನದಿಯು 30 ವರ್ಷಗಳ ಹಿಂದಿನ ವೈಭವ ಮರಳಿ ಪಡೆದಿದೆ. ನದಿಗುಂಟ ಅಪಾರ ಪ್ರಮಾಣದಲ್ಲಿ ಮರಳು ಸಂಗ್ರಹವಾಗಿದೆ. ಆದರೆ, ಮರಳು ಕಳ್ಳರಿಗೆ ಅದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ರಾತ್ರಿ ವೇಳೆ ಕದಿಯುವ ಕಾರ್ಯಚರಣೆ ನಡೆಸುತ್ತಿದ್ದಾರೆ. ತಾಲ್ಲೂಕು ಆಡಳಿತ ಅಥವಾ ಜಿಲ್ಲಾಡಳಿತದ ಅಧಿಕಾರಿಗಳು ಇತ್ತ ಗಮನಿಸದೇ ಇರುವುದು ಸರಿಯಲ್ಲ’ ಎಂದು ಮುನವಳ್ಳಿಯ ಪರಿಸರ ಪ್ರೇಮಿ ಕಿರಣ ಯಲಿಗಾರ ತಿಳಿಸಿದರು.
ಕ್ರಮ ಕೈಗೊಳ್ಳಬೇಕು:
‘ದಂಡೆಗುಂಟ ಬಹಳಷ್ಟು ತ್ಯಾಜ್ಯವೂ ಸಂಗ್ರಹವಾಗಿದೆ. ಅದನ್ನು ತೆರವುಗೊಳಿಸುವ ಕಾರ್ಯವನ್ನೂ ಸಂಬಂಧಿಸಿದ ಇಲಾಖೆಯವರು ಮಾಡಿಲ್ಲ. ಇಲ್ಲಿನ ಸೇತುವೆಗಳ ಮೇಲೆ ಯಾವುದೇ ವಿದ್ಯುತ್ ದೀಪಗಳ ಸೌಲಭ್ಯವಿಲ್ಲ. ಇದು, ಮರಳನ್ನು ಅಕ್ರಮವಾಗಿ ಸಾಗಿಸುವವರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಕನಿಷ್ಠ ಎಚ್ಚರಿಕೆಯ ಫಲಕಗಳೂ ಇಲ್ಲ. ಸೇತುವೆಗಳ ಮೇಲೆ ವಿದ್ಯುತ್ ದೀಪಗಳ ಜೊತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ರಾತ್ರಿ ವೇಳೆ ಪೊಲೀಸರ ಗಸ್ತು ನಿಯೋಜಿಸಬೇಕು. ಇಲ್ಲದಿದ್ದರೆ, ನದಿಯಲ್ಲಿರುವ ಮರಳು ಕೆಲವೇ ದಿನಗಳಲ್ಲಿ ಮರಳು ಸಂಪೂರ್ಣ ಕಾಣೆಯಾದರೆ ಅಚ್ಚರಿ ಇಲ್ಲ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
‘ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮರಳು ರಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡವರಿಗೆ ಮರು ನಿರ್ಮಾಣಕ್ಕೆ ಮರಳಿನ ಅಗತ್ಯವಿರುತ್ತದೆ. ಅವರಿಗೆ ನದಿಯ ಮರಳನ್ನು ಆದ್ಯತೆ ಮೇಲೆ ನೀಡಬೇಕು. ಈ ಮೂಲಕ ಸಂತ್ರಸ್ತರಿಗೆ ಎದುರಾಗಿರುವ ಮರಳಿನ ಕೊರತೆಯನ್ನು ನೀಗಿಸಬೇಕು. ನಿಯಮಗಳ ಪ್ರಕಾರ ಮರಳು ಹರಾಜಿಗೆ ಕ್ರಮ ವಹಿಸಬೇಕು’ ಎಂದು ಒತ್ತಾಯಿಸುತ್ತಾರೆ ಅವರು.
ಪ್ರತಿಕ್ರಿಯೆಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಲಭ್ಯವಾಗಲಿಲ್ಲ