ದುಬೈ: ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ್ಯಾಂಕಿಂಗ್ನ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರಸ್ಥಾನದ ಸನಿಹ ತಲುಪಿದ್ದಾರೆ. ಅದರೊಂದಿಗೆ ಟೀಮ್ ಇಂಡಿಯಾ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಇದೇ ಮೊದಲ ಬಾರಿಗೆ ಅಗ್ರ 10 ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಕೋಲ್ಕತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 136 ರನ್ ಸಿಡಿಸಿದ ಕೊಹ್ಲಿ 928 ಅಂಕದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಅದರೊಂದಿಗೆ ಅಗ್ರಸ್ಥಾನಿ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ರೊಂದಿಗಿನ ಅಂಕಗಳ ಅಂತರವನ್ನು 25ರಿಂದ 3 ಅಂಕಕ್ಕೆ ಇಳಿಸಿದ್ದಾರೆ. ಸ್ಟೀವನ್ ಸ್ಮಿತ್ 931 ಅಂಕದೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಇಂದೋರ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದ ಮಯಾಂಕ್ ಅಗರ್ವಾಲ್, ಒಂದು ಸ್ಥಾನ ಏರಿಕೆ ಕಂಡು, 700 ಅಂಕದೊಂದಿಗೆ 10ನೇ ಸ್ಥಾನದಲ್ಲಿದ್ದಾರೆ. ಟಾಪ್ 10 ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿರುವ ನಾಲ್ಕನೇ ಭಾರತೀಯ ಆಟಗಾರ ಇವರಾಗಿದ್ದಾರೆ. ಚೇತೇಶ್ವರ ಪೂಜಾರ (791 ಅಂಕ) ಹಾಗೂ ಅಜಿಂಕ್ಯ ರಹಾನೆ (759 ಅಂಕ) ಈಗಾಗಲೇ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮ ಅಗ್ರ 10ರಿಂದ ಹೊರಬಿದ್ದಿದ್ದು, 13ನೇ ಸ್ಥಾನಕ್ಕಿಳಿದಿದ್ದಾರೆ.
ಬಾಂಗ್ಲಾದೇಶ ತಂಡದ ಅನುಭವಿ ಬ್ಯಾಟ್ಸ್ಮನ್ ಮುಶ್ಪಿಕರ್ ರಹೀಂ ನಾಲ್ಕು ಸ್ಥಾನ ಏರಿಕೆ ಕಂಡಿದ್ದಾರೆ. ಕೋಲ್ಕತ ಟೆಸ್ಟ್ ಪಂದ್ಯದಲ್ಲಿ ಹೋರಾಟದ 74 ರನ್ ಬಾರಿಸಿದ್ದ ರಹೀಂ 26ನೇ ಸ್ಥಾನಕ್ಕೇರಿದ್ದರೆ, ಲಿಟನ್ ದಾಸ್ 8 ಸ್ಥಾನ ಏರಿಕೆ ಕಂಡು 78ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಇದೇ ಮೊದಲ ಬಾರಿಗೆ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರ 10ರೊಳಗಿನ ಸ್ಥಾನ ಸಂಪಾದಿಸಿದ್ದಾರೆ. ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 91 ಹಾಗೂ 28 ರನ್ ಬಾರಿಸಿದ್ದ ಸ್ಟೋಕ್ಸ್ 704 ಅಂಕದೊಂದಿಗೆ 9ನೇ ಸ್ಥಾನದಲ್ಲಿದ್ದಾರೆ.
ಇಶಾಂತ್ ಶರ್ಮ, ಉಮೇಶ್ಗೆ ಬಡ್ತಿ
ಭಾರತದ ವೇಗದ ಬೌಲರ್ಗಳಾದ ಇಶಾಂತ್ ಶರ್ಮ ಹಾಗೂ ಉಮೇಶ್ ಯಾದವ್ ರ್ಯಾಕಿಂಗ್ನಲ್ಲಿ ಈವರೆಗಿನ ಗರಿಷ್ಠ ಅಂಕಗಳನ್ನು ಸಂಪಾದಿಸುವಲ್ಲಿ ಯಶ ಕಂಡಿದ್ದಾರೆ. ಇಶಾಂತ್ 712 ಅಂಕ ಸಂಪಾದಿಸಿದ್ದರೂ 17ನೇ ಸ್ಥಾನದಲ್ಲಿ ಉಳಿದು ಕೊಂಡಿದ್ದಾರೆ. ಉಮೇಶ್ ಯಾದವ್ 672 ಅಂಕದೊಂದಿಗೆ ಒಂದು ಸ್ಥಾನ ಏರಿಕೆ ಕಂಡಿದ್ದು 21ನೇ ಸ್ಥಾನದಲ್ಲಿದ್ದಾರೆ. ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 772 ಅಂಕದೊಂದಿಗೆ ಒಂದು ಸ್ಥಾನ ಏರಿಕೆ ಕಂಡು 9ನೇ ಸ್ಥಾನ ಪಡೆದಿದ್ದರೆ, ಗಾಯದಿಂದಾಗಿ ತಂಡದಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ 794 ಅಂಖದೊಂದಿಗೆ ಒಂದು ಸ್ಥಾನ ಕೆಳಗಿಳಿದು 5ನೇ ಸ್ಥಾನದಲ್ಲಿದ್ದಾರೆ.