‘ಹತ್ಯಾಚಾರ’: ಆಕೆಯನ್ನು ಹೇಗೆ ಕೊಂದರೋ ಅದೇ ರೀತಿ ನನ್ನ ಮಗನನ್ನೂ ಕೊಂದು ಹಾಕಿ: ಆರೋಪಿಯ ತಾಯಿ
ಹೈದರಾಬಾದ್: ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಸ್ವತಃ ಆರೋಪಿಯ ತಾಯಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಆಕೆಯನ್ನು ಹೇಗೆ ಕೊಂದರೋ ಅದೇ ರೀತಿ ನನ್ನ ಮಗನನ್ನೂ ಕೊಂದು ಹಾಕಿ ಎಂದು ಹೇಳಿದ್ದಾರೆ.
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಹೈದರಾಬಾದ್ ನಲ್ಲಿ ನಡೆದ ಪಶುವೈದ್ಯೆ ಪ್ರಿಯಾಂಕಾರೆಡ್ಡಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸದಂತೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಕರಣ ಸಂಬಂಧ ತ್ವರಿತ ತನಿಖೆ ನಡೆಸಿರುವ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇನ್ನು ಇಂತಹ ಹೀನ ಕೃತ್ಯ ನಡೆಸಿರುವ ಆರೋಪಿಗಳ ಕುಟುಂಬಸ್ಥರು ಇದೀಗ ತೀವ್ರ ಮುಖಭಂಗಕ್ಕೀಡಾಗಿದ್ದು, ಮಗನ ಕೃತ್ಯದ ಬಗ್ಗೆ ಸ್ವತಃ ತಾಯಿಯೇ ಅಸಹ್ಯ ಪಟ್ಟುಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಮಹಮದ್ ನ ತಾಯಿ ಮೊಲಂಬಿ ಘಟನೆ ಕುರಿತಂತೆ ಆಘಾತ ವ್ಯಕ್ತಪಡಿಸಿದ್ದು, ತನ್ನ ಮಗ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಸತ್ಯವೇ ಆಗಿದ್ದರೆ ಆತನನ್ನು ಕೊಂದು ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಲತಃ ತೆಲಂಗಾಣದ ನಾರಾಯಣಪುರ ಜಿಲ್ಲೆಯ ಜಕ್ಕಲೂರು ಗ್ರಾಮದ ನಿವಾಸಿಯಾದ ಮೊಲಂಬಿ ತಮ್ಮ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಗ ಮೊಹಮದ್ ಲಾರಿ ಚಾಲಕನಾಗಿದ್ದು, ಘಟನೆ ನಡೆದ ದಿನ ಮನೆಗೆ ಬಂದ ಆತ ನಾನು ಒಂದು ಅಪಘಾತ ಮಾಡಿದ್ದು, ಅಪಘಾತದಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಹೇಳಿದ. ಅಂದು ರಾತ್ರಿ ಮೂರು ಗಂಟೆ ಸುಮಾರಿಗೆ ಪೊಲೀಸರು ಬಂದು ಆತನನ್ನು ಕೆರೆದುಕೊಂಡು ಹೋದರು ಎಂದು ಮೊಲಂಬಿ ಹೇಳಿದ್ದಾರೆ.
ಮತ್ತೋರ್ವ ಪ್ರಮುಖ ಆರೋಪಿ ಸಿ. ಚನ್ನಕೇಶವುಲು ತಾಯಿ ಶ್ಯಾಮಲಾ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ನನ್ನ ಹೊಟ್ಟೆಯಲ್ಲಿ ಹುಟ್ಟಿದ ನನ್ನ ಮಗ ಹೆಣ್ಣುಮಕ್ಕಳ ಜೊತೆ ಇಷ್ಟು ಕೀಳಾಗಿ ವರ್ತಿಸುತ್ತಾನೆ ಎಂದುಕೊಂಡಿರಲಿಲ್ಲ. ಅವನು ಪಶುವೈದ್ಯೆಗೆ ಮಾಡಿದಂತೆ ಆತನನ್ನೂ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟುಬಿಡಿ. ಇಂತಹ ಹೇಯ ಕೃತ್ಯ ಮಾಡಿದ ಆತನನ್ನು ಗಲ್ಲಿಗೇರಿಸಿ’ ಎಂದು ಹೇಳಿದ್ದಾರೆ.
‘ನನ್ನ ಮಗ ಇಂತಹ ತಪ್ಪು ಮಾಡಿದನಲ್ಲ ಎಂಬ ಆಘಾತವನ್ನೇ ನನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಂಥದ್ದರಲ್ಲಿ ಇವರ ಕೃತ್ಯಕ್ಕೆ ಬಲಿಯಾಗಿರುವ ಆ ವೈದ್ಯೆಯ ಮನೆಯವರಿಗೆ ಯಾವ ರೀತಿಯ ನೋವಾಗಿದೆ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನನಗೂ ಒಬ್ಬಳು ಮಗಳಿದ್ದಾಳೆ. ಹೆಣ್ಣು ಹೆತ್ತವರ ಸಂಕಟ ಏನೆಂದು ನಾನೂ ಅನುಭವಿಸಿದ್ದೇನೆ. ಒಂದುವೇಳೆ ಈಗ ನನ್ನ ಮಗ ಮಾಡಿದ್ದೇ ಸರಿ ಎಂದು ನಾನು ಸಮರ್ಥಿಸಿಕೊಂಡರೆ ಜೀವನಪರ್ಯಂತ ಆ ತಪ್ಪಿತಸ್ಥ ಭಾವನೆ ನನ್ನನ್ನು ಕಾಡುತ್ತಲೇ ಇರುತ್ತದೆ. ನನ್ನ ಸುತ್ತಮುತ್ತಲಿನವರು ಕೂಡ ನಾನು ಸಾಯುವವರೆಗೂ ನನ್ನನ್ನು ದ್ವೇಷಿಸುತ್ತಾರೆ’ ಎನ್ನುವ ಮೂಲಕ ಆರೋಪಿ ಚನ್ನಕೇಶವುಲು ಅವರ ತಾಯಿ ಶ್ಯಾಮಲಾ ಮೃತ ಯುವತಿಯ ಮನೆಯವರಿಗೆ ಬಹಿರಂಗವಾಗಿ ಕ್ಷಮಾಪಣೆ ಕೋರಿದ್ದಾರೆ.
‘5 ತಿಂಗಳ ಹಿಂದೆ ನನ್ನ ಮಗ ಇಷ್ಟಪಟ್ಟ ಹುಡುಗಿಯೊಂದಿಗೆ ಆತನಿಗೆ ಮದುವೆ ಮಾಡಿದ್ದೆವು. ಇಲ್ಲಿಯವರೆಗೆ ಯಾವ ವಿಷಯದಲ್ಲೂ ಆತನ ಮೇಲೆ ನಾವು ಒತ್ತಡ ಹೇರಿಲ್ಲ. ಆತ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಹೀಗಾಗಿ, ತುಂಬ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದೆವು. ಪ್ರತಿ 6 ತಿಂಗಳಿಗೊಮ್ಮೆ ಆತನನ್ನು ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಆದರೀಗ ಅಂತಹ ಮಗನೇ ನಾವು ತಲೆ ಎತ್ತಿ ಬಾಳದಂತೆ ಮಾಡಿದ್ದಾನೆ. ಒಂದು ಅಮಾಯಕ ಹೆಣ್ಣಿನ ಮಾನ ಮಾತ್ರವಲ್ಲದೆ ಪ್ರಾಣವನ್ನೂ ತೆಗೆದಿದ್ದಾನೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ಹೊರಹಾಕಿದ್ದಾರೆ.
ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಮಕ್ತಾಲ್ ಮಂಡಲ್ ಎಂಬ ಊರಿನವನಾದ ಚನ್ನಕೇಶವುಲು ಕೂಡ ಹೈದರಾಬಾದ್ನ 27 ವರ್ಷದ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯಲ್ಲೊಬ್ಬ. ಆತ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ಕರೆದುಕೊಂಡು ಹೋದ ನಂತರ ಆತನ ತಂದೆ ಅವಮಾನದಿಂದ ಊರು ಬಿಟ್ಟು ಹೋಗಿದ್ದಾರೆ. ತನಗೆ ಇಂತಹ ಮಗ ಹುಟ್ಟಿದನಲ್ಲ ಎಂದು ತಾಯಿ ಕೊರಗುತ್ತಾ ಕಣ್ಣೀರು ಹಾಕುತ್ತಿದ್ದಾರೆ.