Monday, January 20, 2025
ಸುದ್ದಿ

ಮೂಲ್ಕಿ: ಬದುಕಿಗೆ ಕೊಲ್ಲಿ ಇಟ್ಟ ಸೌದಿ ಉದ್ಯೋಗ- ಎಸಿ ದುರಸ್ತಿಗೆ ಹೋಗಿ ಜೈಲುಪಾಲು, ಶವವಾಗಿ ತವರಿಗೆ – Kahale News / ಕಹಳೆ ನ್ಯೂಸ್

ಉಡುಪಿ, ಡಿ 03 (KAHALE NEWS): ಸೌದಿಯಲ್ಲಿ ಸೆರೆವಾಸ ಅನುಭವಿಸುತ್ತಿರುವಾಗಲೇ ಮೃತಪಟ್ಟ ಮೂಲ್ಕಿ ಮೂಲದ ಇಂಜಿನಿಯರ್ ಜೋನ್ ಮೊಂತೇರೋ(54) ಅವರ ಪಾರ್ಥಿವ ಶರೀರ ೯ ತಿಂಗಳ ಅನಂತರ ಸ್ವದೇಶ ತಲುಪಿದೆ,ಇವರ ಸಾವಿನ ಬಗ್ಗೆ ಸಂಶಯಗಳು ವ್ಯಕ್ತವಾಗಿರುವುದರಿಂದ ಕುಟುಂಬಕ್ಕೆ ನ್ಯಾಯದ ಒದಗಿಸುವ ನಿಟ್ಟಿನಲ್ಲಿ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಈ ಬಗ್ಗೆ ಕಾನೂನು ಹೋರಾಟಕ್ಕೆ ಸಜ್ಜಾಗಿದೆ. ಜೋನ್ ಮೊಂತೇರೋ ಅವರಿಗೆ ಸೌದಿಯಲ್ಲಿ ಶಿಕ್ಷೆಯೇಕೆ? ಅವರು ಮಾಡಿದ ಅಪರಾಧವಾದರೂ ಏನು? ಎಂಬುವುದು ಯಾರಿಗೂ ತಿಳಿದಿಲ್ಲ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ಸರ್ವ ರೀತಿಯಲ್ಲೂ ಪ್ರಯತ್ನ ಮಾಡಲಾಗುವುದು ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಟಾನದ ಅಧ್ಯಕ್ಷ ಡಾ| ರವೀಂದ್ರನಾಥ್ ಶಾನುಭಾಗ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದುರಂತ ವಿಚಾರವೆಂದರೆ ಸೌದಿ ಅರೇಬಿಯಾದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಜೋನ್ ಮೊಂತೇರೊ ಅವರಿಗೆ ತಾವ್ಯಾಕೆ ಜೈಲು ಶಿಕ್ಷೆ ಅನುಭವಿಸುತ್ತಿದ್ದೇವೆ ತಾನು ಮಾಡಿದ ಅಪರಾಧವೇನು ಎಂದು ಕೊನೆಯವರೆಗೂ ಅವರಿಗಾಗಲಿ ಅವರ ಕುಟುಂಬಕ್ಕಾಗಲಿ ತಿಳಿಯಲೇ ಇಲ್ಲ ಎನ್ನುವುದು ವಿಪರ್ಯಾಸ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಾಥಮಿಕ ಶಿಕ್ಷಣವನ್ನು ಮೂಲ್ಕಿಯಲ್ಲಿ ಮುಗಿಸಿದ ಜೋನ್ ಮುಂಬಯಿ , ಅಬುಧಾಬಿ, ನವದೆಹಲಿಯಲ್ಲಿ ಏರ್ ಕಂಡೀಶನ್ ನಿರ್ವಹಣೆ, ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇದೇ ವೇಳೆ ತನ್ನ ಸಹೋದರಿಯರಿಗೆ ವಿವಾಹ ಮಾಡಿಸಿದ್ದರು. ಆ ಬಳಿಕ ಜೋನ್ ದೆಹಲಿಯಲ್ಲಿ ದುಡಿಯುತ್ತಿದ್ದಾಗ ಅಮೀನಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕರೀಷ್ಮಾ ಎಂಬ ಮಗಳು ಹಾಗೂ ನಿರ್ಮಾಣ್ ಎಂಬ ಮಗ ಇವರಿಗಿದ್ದರು.

2003ರಲ್ಲಿ ಹೆಂಡತಿ ಮಕ್ಕಳನ್ನು ದಿಲ್ಲಿಯ ಬಾಡಿಗೆ ಮನೆಯೊಂದರಲ್ಲಿಟ್ಟು ಮತ್ತೆ ಉದ್ಯೋಗ ಅರಸಿ ಸೌದಿ ಅರೇಬಿಯಾಗೆ ತೆರಳಿದ ಜೋನ್ ಅಲ್ಲೂ ತಮ್ಮ ಪ್ರಾಮಾಣಿಕತೆ ಹಾಗೂ ವೃತ್ತಿಪರತೆಯಿಂದ ಹೆಸರುಗಳಿಸಿದರು. ತಾವು ದುಡಿದ ಹಣವನ್ನು ಮನೆಗೆ ಕಳುಹಿಸುತ್ತಿದ್ದ ಅವರು ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಅದರೆ ಕೊನೆಗೊಮ್ಮೆ ಪತ್ನಿಯನ್ನು ಸಂಪರ್ಕಿಸಿದ್ದ ಜೋನ್ ಜೈಲಿನಲ್ಲಿ ಎಸಿ ದುರಸ್ತಿಗೆ ಬಂದಿದ್ದ ತನ್ನನ್ನು ಬಂಧಿಸಲಾಯಿತು.ಕಾರಣ ತಿಳಿದಿಲ್ಲ ಎಂದಿದ್ದರು. ಪ್ರತಿ ವಾರವೂ ಜೈಲಿನಿಂದ ಹೆಂಡತಿ ಮಕ್ಕಳನ್ನು ಸಂಪರ್ಕಿಸುತಿದ್ದ ಜೋನ್ ತನ್ನ ಬಗ್ಗೆ ಚಿಂತೆ ಬೇಡ, ತನ್ನ ಮೇಲಿರುವ ಆರೋಪಗಳ ಬಗ್ಗೆ ಪೊಲೀಸರಿಗೆ ಅಸ್ಪಷ್ಟತೆ ಇದೆ. ತಾನು ಆದಷ್ಟು ಶ್ರೀಘ್ರವಾಗಿ ಬಿಡುಗಡೆಯಾಗಲಿದ್ದೇನೆ ಎಂದು ಸಮಾಧಾನ ಪಡಿಸುತ್ತಿದ್ದರು.

ಕೊನೆಗೊಮ್ಮೆ ಪೊಲೀಸರು ನ್ಯಾಯಾಲಕ್ಕೆ ಹಾಜರುಪಡಿಸಿದಾಗ ನ್ಯಾಯಲಯದ ಸಿಬ್ಬಂದಿ ಅರೆಬಿಕ್ ಭಾಷೆಯ ಆರೋಪಪಟ್ಟಿ ಯಾಚಿಸಿದ. ಆದರೆ ನನಗೆ ಅರೆಬಿಕ್ ಭಾಷೆ ತಿಳಿದಿಲ್ಲ ನನ್ನ ಮೇಲಿರುವ ಅಪಾದನೆಗಳು ಏನೆಂದು ನನಗೆ ಅರ್ಥವಾಗಿಲ್ಲ. ನನ್ನ ವಿಚಾರಗಳನ್ನು ನಿವೇದಿಸಲು ಇಂಗ್ಲಿಷ್ ಭಾಷೆ ತಿಳಿದ್ ವಕೀಲರೋರ್ವರನ್ನಾದರೂ ನೀಡಿ ಎಂದು ಜೋನ್ ನ್ಯಾಯಾಲಯಕ್ಕೆ ಮಾಡಿದ ಮನವಿಗಳೆಲ್ಲ ತಿರಸ್ಕೃತರಾಗಿದ್ದವು. ಅರೆಬಿಕ್ ಭಾಷೆಯಲ್ಲಿದ್ದ ಕೆಲ ದಾಖಲೆಗಳನ್ನು ತೋರಿಸಿ ಸಹಿ ಹಾಕುವಂತೆ ತಿಳಿಸಿದಾಗ ಜೋನ್ ನಿರಾಕರಿಸಿದರು. ಅದೇ ದಿನ ಸೆಲ್ ಗೆ ಹಾಕಿ ಅಲ್ಲಿಂದ ಸಿಬ್ಬಂದಿ ೫ ವರ್ಷ ಜೈಲು ಶಿಕ್ಷೆಯಾಗಿದೆ ಎಂದು ಹೇಳಿದ್ದ. ಸಾಕಷ್ಟು ಕಠಿಣ ಪರಿಶ್ರಮದ ಬಳಿಕ ಈ ವಿಚಾರವನ್ನು ಪತ್ನಿಗೆ ತಲುಪಿಸಿದರು.

ಇತ್ತ ದಿಲ್ಲಿಯಲ್ಲಿ ಅಮೀನಾ ಹಾಗೂ ಮಕ್ಕಳಿಗೆ ಜೀವನ ಸಾಗಿಸುವುದೇ ಕಷ್ಟವಾಯಿತು. ರೆಸ್ಟೋರೆಂಟ್ ಗಳಲ್ಲಿ ಚಿಕ್ಕ ಪುಟ್ಟ ಕೆಲಸಮಾಡಿ ಜೀವನ ಸಾಗಿಸುತ್ತಿದ್ದರು. ಮುಂದಿನ ನಾಲ್ಕು ವರ್ಷಗಳ ಕಾಲ ಜೋನ್ ಜೈಲಿನಲ್ಲಿ ಕೂಲಿಮಾಡಿ ಗಳಿಸಿದ್ದನ್ನೆಲ್ಲ ಸೇರಿಸಿ ಆರು ತಿಂಗಳಿಗೊಮ್ಮೆ ಹೆಂಡತಿಗೆ ಹಣ ಕಳುಹಿಸುತಿದ್ದರು. ಅದು ಕೂಡಾ ನೇರವಾಗಿ ಹಣ ಜೈಲಿನಿಂದ ಕಳುಹಿಸುವಂತಿರಲಿಲ್ಲ. ಬದಲಾಗಿ ಅವರ ಸಂದರ್ಶನಕ್ಕೆಂದು ಜೈಲಿಗೆ ಭೇಟಿ ನೀಡುವ ಸ್ಥಳೀಯ ಖೈದಿಗಳ ಸಂಬಂಧಿಕರ ಮೂಲಕವೇ ಹಣ ಕಳುಹಿಸಬೇಕಾಗಿತ್ತು. ಅಪರೂಪಕ್ಕೊಮ್ಮೆ ಫೋನ್ ಮೂಲಕ ಕುಟುಂಬದವರನ್ನೂ ಸಂಪರ್ಕಿಸಿ ಮನೆಯವರನ್ನು ಇನ್ನೇನು ಬಿಡುಗಡೆಯಾಗಲಿದ್ದೇನೆ ಎಂದು ಸಮಾಧಾನ ಪಡಿಸುತ್ತಿದ್ದರು.

ಜೋನ್ ಅವರೊಂದಿಗೆ ಪ್ರಾರಂಭದಲ್ಲಿ ಚೆನ್ನಾಗಿಯೇ ವ್ಯವಹರಿಸುತಿದ್ದ ಜೈಲು ಸಿಬಂದ್ದಿ ಕೊನೆಗೆ ಕ್ರೂರಿಗಳಂತೆ ವರ್ತಿಸಲು ಪ್ರಾರಂಭಿಸಿದರು. ಆಗಾಗ ಕೊರಡೇಟಿನ ಶಿಕ್ಷೆ , ಏಟು, ಸಿಗತೊಡಗಿತು. ಇವುಗಳನ್ನೆಲ್ಲಾ ಸಹಿಸಲಾರದೇ ಜೋನ್ ಎಷ್ಟೋ ಸಾರಿ ಪ್ರಜ್ಞೆತಪ್ಪಿ ಬೀಳತೊಡಗಿದರು. ಏಟು, ಸೂಕ್ತ ಆಹಾರವಿಲ್ಲದೆ ಆರೋಗ್ಯ ಹಾಳಾಗತೊಡಗಿತು. ಈ ನಡುವೆ ಜೋನ್ ಕುತ್ತಿಗೆಯ ಬಲಭಾಗದಲ್ಲಿ ಬಾತು ಕಾಣಿಸಿಕೊಂಡು ಸಹಿಸಲ ಸಾಧ್ಯವಾದ ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಸೇರಿಸಿ ಎಂದೂ ಅಂಗಲಾಚಿದಾಗಲೂ ಜೈಲುಸಿಬ್ಬಂದಿಗೆ ಕರುಣೆ ತೋರಲಿಲ್ಲ. ನೋವು ನಿವಾರಕ ಮಾತ್ರೆಗಳನ್ನು ಕೊಡಿ ಎಂದು ಬೇಡಿಕೊಂಡರೂ ನೀಡುತ್ತಿರಲಿಲ್ಲ. ಕೊನೆ ಕೊನೆಗೆ ಅವರು ಫೋನ್ ಮಾಡುತ್ತಿದ್ದರೂ ಅವರ ಮಾತುಗಳು ಅರ್ಥವಾಗದ ಸ್ಥಿತಿ ತಲುಪಿತು. ಹೆಂಡತಿ ಅಮೀನಾ ಭಾರತೀಯ ರಾಯಭಾರಿ ಕಛೇರಿಯನ್ನು ಸಂಪರ್ಕಿಸಿ ಸಹಾಯಕ್ಕಾಗಿ ಅತ್ತು ಅಂಗಲಾಚುತ್ತಿದ್ದರು. ಇನ್ನೇನು ಬಿಡುಗಡೆಗೆ ೩ ತಿಂಗಳು ೨೨ ದಿನ ಬಾಕಿ ಇರುವಾಗ ಜೋನ್ ಅನಾರೋಗ್ಯ ಉಲ್ಪಣಿಸಿ ೨೦೧೯ ರ ಫೆ. ೧೯ ಇಹಲೋಕ ತ್ಯಜಿಸಿದರು. ೯ ತಿಂಗಳ ಬಳಿಕ ಮೃತದೇಹ ತವರಿಗೆ ತಲುಪಿದೆ. ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಅಂತ್ಯಕ್ರಿಯೆ ನಡೆದಿದೆ.

ಈ ಕುಟುಂಬಕ್ಕೆ ನ್ಯಾಯ ಓದಗಿಸಲು ಪ್ರತಿಷ್ಟಾನ ಬದ್ದವಾಗಿದೆ. ಸೌದಿ ಅರೇಬಿಯಾದ ರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಲು ಯೋಜಿಸಲಾಗಿದೆ ಎಂದು ಡಾ.ಶಾನುಭೋಗ್ ತಿಳಿಸಿದ್ದಾರೆ.