ಬೆಂಗಳೂರು, ಡಿ 05: ರಾಜ್ಯದಲ್ಲಿ 15ಕ್ಷೇತ್ರದಲ್ಲಿ ಉಪಚುನಾವಣೆ ಈಗಾಗಲೇ ಆರಂಭಗೊಂಡಿದ್ದು ಬೆಳಿಗ್ಗೆ 7 ಗಂಟೆಯಿಂದಲ್ಲೇ ಮತದಾನ ಆರಂಭವಾಗಿದೆ. ಈ ಚುನಾವಣೆ ಬಿಜೆಪಿಗೆ ಬಹುಮುಖ್ಯವಾದ ಚುನಾವಣೆಯಾಗಿದ್ದು ಸರಕಾರದ ಉಳಿವಿಗೆ ಅತಿ ಮುಖ್ಯವಾಗಿದೆ. ಹಾಗೆಯೇ 13 ಅನರ್ಹ ಶಾಸಕರ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ.
17 ಅನರ್ಹ ಶಾಸಕರ ಪೈಕಿ 13 ಅನರ್ಹ ಶಾಸಕರು ಬಿಜೆಪಿಯಿಂದ ಚುನಾವಣೆ ಕಣಕ್ಕಿಳಿದಿದ್ದು ಇಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಚುನಾವಣೆ ನಡೆಯಲಿದೆ.
ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತದ ಮತದಾನಕ್ಕೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದೆ. ಈ ೧೫ ಕ್ಷೇತ್ರಗಳ ಪೈಕಿ 156 ಪುರುಷರು ಮತ್ತು 9 ಮಹಿಳೆಯರು ಸ್ಪರ್ಧಿಸಿದ್ದಾರೆ. ಚುನಾವನಾ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಲು 42,509 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮತದಾನ ನಡೆಯುವ ಕ್ಷೇತ್ರಗಳ ವ್ಯಾಪ್ತಿಯ ಶಾಲೆ-ಕಾಲೇಜು, ಸರ್ಕಾರಿ ನೌಕರರಿಗೆ ಹಾಗೂ ಖಾಸಗಿ ಕಂಪನಿಗಳಿಗೆ ಗುರುವಾರ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ.
ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರಿದ್ದು, ಚುನಾವಣಾ ಆಯೋಗದ ಗುರುತಿನ ಚೀಟಿ ಇಲ್ಲದಿದ್ದರೆ, ಪಾಸ್’ಪೋರ್ಟ್, ಚಾಲನಾ ಪರವಾನಗಿ, ಕೇಂದ್ರ ಅಥವಾ ರಾಜ್ಯ ಸರ್ಕಾರ ವಿತರಣೆ ಮಾಡಿರುವ ಗುರುತಿನ ಚೀಟಿ, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಸೇರಿದಂತೆ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ಕೊಂಡೊಯ್ದು ಮತದಾನ ಮಾಡಬಹುದಾಗಿದೆ.