Friday, September 20, 2024
ಸುದ್ದಿ

ಅದ್ಬುತ ಕಂಠ ಸಿರಿಯ ಗಾಯಕಿ ‘ಶ್ರೀಮತಿ ಜಯಶ್ರೀ ಧರಣೇಂದ್ರ ಜೈನ್ ಹೊರನಾಡು ‘-ಕಹಳೆ ನ್ಯೂಸ್

ಮಕ್ಕಳಿಗೆ ನೀಡುವ ಒಳ್ಳೆಯ ಸಂಸ್ಕಾರ ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ ಎನ್ನುವುದಕ್ಕೆ ಜಯಶ್ರೀಯವರ ಸಂಗೀತ ಸಾಧನೆಯೇ ಸಾಕ್ಷಿ. ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲೂ ತಮ್ಮ ಗಾನ ಮಾಧುರ್ಯದಿಂದ ಚಿರಪರಿಚಿತರಾಗಿರುವ ಇವರು ಅತ್ಯಂತ ಸದ್ವಿನಿ ಮತ್ತು ಮೃದು ಸ್ವಭಾವದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಸಂಗೀತದಲ್ಲಿ ಆಸಕ್ತಿ ತೋರಿಸಿದವರನ್ನೆಲ್ಲಾ ಬೆಂಬಲಿಸಿ, ಪ್ರೋತ್ಸಾಹಿಸಿ ತಮ್ಮಿಂದಾದ ಸಹಕಾರ ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆ ತರಲು ಸ್ಫೂರ್ತಿಯಾಗಿದ್ದಾರೆ.

ಜಯಶ್ರೀಯವರ ‘ಬಾಲ್ಯ ಮತ್ತು ಕುಟುಂಬ’

ಜಾಹೀರಾತು
ಜಾಹೀರಾತು
ಜಾಹೀರಾತು

1975ನೇ ಇಸವಿಯಲ್ಲಿ ಚಿಕ್ಕನ ಕೊಡಿಗೆಯ ದಂಪತಿಗಳಾದ ದಿ| ಶಿವಯ್ಯ ಮತ್ತು ಶ್ರೀಮತಿ ದೇವಿಯಮ್ಮನ ಐದನೆಯ ಮಗಳಾಗಿ ಜನಿಸಿ ತಮ್ಮ ಸಂಗೀತ ಕಂಠ ಸಿರಿಯಿಂದ ಬಾಲ್ಯದಲ್ಲೇ ಉತ್ತಮ ಶ್ರೇಷ್ಠ ಗಾಯಕಿ ಎನಿಸಿಕೊಂಡವರು. ಇವರ ಪ್ರಾಥಮಿಕ ಶಿಕ್ಷಣ ಚಿಕ್ಕನಗೂಡಿಗೆ, ಇರ್ವತೂರು ಹೊರನಾಡಿನಲ್ಲಿ ಮುಗಿಸಿದರೆ ಕಾರ್ಕಳದ ಶ್ರಾವಿಕಾಶ್ರಮ ಮತ್ತು ನೇಮಿರಾಜ ವರ್ಣೀಜಿಯಲ್ಲಿ ಪ್ರೌಢಶಿಕ್ಷಣ ಮುಗಿಸಿದರು. ಕಳಸದಲ್ಲಿ ಕಾಲೇಜ್ ಶಿಕ್ಷಣ ಮು0ದುವರಿಸಿದ ಇವರು ಶಿಕ್ಷಣದ ಜೊತೆ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಸಂಗೀತವನ್ನು ಶುಶ್ರಾವ್ಯವಾಗಿ ಹಾಡುತ್ತಿದ್ದರು. ಶ್ರೀ ಡಿ.ಆರ್. ಧರಣೀಂದ್ರ ಜೈನ್‍ರವರನ್ನು ಬಾಳ ಸಂಗಾತಿ ಯಾಗಿ ಪಡೆದ ಮೇಲೆ ಇವರ ಪತಿಯ ಪ್ರೋತ್ಸಾಹ ಇವರ ಸಂಗೀತ ಸೇವೆಯಲ್ಲಿ ಇನ್ನು ಉನ್ನತ ಮಟ್ಟದ ಸಾಧನೆ ಮಾಡುವ0ತಾಯಿತು.ಇವರು ಧೀರಜ್ ಮತ್ತು ಧನುಷ್ ಎನ್ನುವ ಇಬ್ಬರು ಸುಸಂಸ್ಕøತ ಮಕ್ಕಳನ್ನು ಪಡೆದಿದ್ದಾರೆ. ಬಸದಿಯ ಪಂಚ ಕಲ್ಯಾಣ, ಬಾಹುಬಲಿ ಮಸ್ತಕಾಭಿಷೇಕ,ರಥೋತ್ಸವ, ಇಂಥಹ ಪುಣ್ಯ ಕಾರ್ಯಕ್ರಮಗಳಲ್ಲೂ 300 ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿ ನಿರಂತರವಾಗಿ ಹಾಡುತ್ತಾ ಕೇಳುಗರೆಲ್ಲರಿಗೂ ಭಕ್ತಿ ರಸದಲ್ಲಿ ತಮ್ಮನ್ನೇ ಮೈ ಮರೆತು ಕೇಳುವಂತೆ ಮಾಡಿದ್ದಾರೆ. ಇವರ ಸಾಧನೆಗಳೆಲ್ಲಾ ತನ್ನ ಪತಿಯೇ ಬೆನ್ನೆಲುಬು ಮತ್ತು ಪತಿಯ ಕುಟುಂಬದ ನೆರವನ್ನು ಕೂಡಾ ನೆನೆಯಲು ಮರೆಯುವುದಿಲ್ಲ.

ಜಾಹೀರಾತು

ಜಯಶ್ರೀಯವರ ‘ಸಂಗೀತ ತರಬೇತಿ ಸೇವೆ’

ಮದುವೆಯ ನಂತರ ಶಾಸ್ತ್ರಿಯ ಸಂಗೀತದ ಮುಂದಿನ ಭಾಗವನ್ನು ಅಭ್ಯಸಿಸಿದ ಇವರು ಶಾಸ್ತ್ರಿಯ ಸಂಗೀತ, ಆರಾಧನೆ, ಪಂಚಕಲ್ಯಾಣ ಮತ್ತು ಮಸ್ತಾಭಿಷೇಕ ಕಾರ್ಯಕ್ರಮಗಳಿಗೆ ಎಡೆಬಿಡದೇ ನಿರಂತರವಾಗಿ ಹಾಡಿದ್ದಾರೆ. ಇತ್ತೀಚಿಗೆ ನಡೆದ ಧರ್ಮಸ್ಥಳದ ಪಂಚ ಮಹಾ ವೈಭವದ ಸಮವಸರಣ ವೇದಿಕೆಯಲ್ಲಿ 200 ಕ್ಕೂ ಹೆಚ್ಚು ಜನರಿಂದ ಸಮೂಹ ಗಾನ ತರಬೇತಿಯ ನೇತೃತ್ವ ವಹಿಸಿರುವುದು ಇವರ ಸಂಗೀತ ಪ್ರೀತಿಗೆ ಸಾಕ್ಷಿಯಾಗಿ ನಿಲ್ಲುತ್ತದೆ.
ಅನಿತಾ ಸುರೇಂದ್ರ ಕುಮಾರ್ ರವರ ಜಿನ ಭಜನಾ ಕಾರ್ಯಕ್ರಮಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ 20ಕ್ಕೂ ಹೆಚ್ಚು ತಂಡಗಳಿಗೆ ರಾತ್ರಿ-ಹಗಲು ಭೇದ ಮಾಡದೇ ತರಬೇತಿ ನೀಡುವ ಜಾಗಕ್ಕೆ ಹೋಗಿ ಮಕ್ಕಳು, ಹಿರಿಯರಿಗೆ ಹಾಗೂ ಕಿರಿಯರಿಗೂ ಸಂಗೀತ ತರಬೇತಿ ನೀಡಿದ್ದಾರೆ. ಈ ಪ್ರೋತ್ಸಾಹ ಮತ್ತು ಸಹಕಾರಕ್ಕೆ ಭಕ್ತಿಯ ಸಂಗೀತ ಲೋಕ ಇವರಿಗೆ ಹೃದಯಪೂರ್ವಕವಾಗಿ ಅಭಿನಂದಿಸಿದೆ
.
ಜಯಶ್ರೀ ಧರಣೇಂದ್ರರವರ ಸಾಹಿತ್ಯ ಸೇವೆಯನ್ನು ಗಮನಿಸಿ ಹಲವಾರು ಸಂಘ-ಸಂಸ್ಥೆಗಳು ಇವರನ್ನು ಹುಡುಕಿಕೊಂಡು ಬಂದಿದೆ. ಭಾರತೀಯ ಜೈನ್ ಮಿಲನ್ ಸಂಸ್ಥೆಯಿಂದ ಜಿನಗಾನ ವಿಧುಷಿ, ಮೇಗುಂದಾ ಜೈನ ಬಾಂಧವರಿಂದ ಗಾನವಾಣಿ ಅಭಿನಂದನಾ ಪತ್ರ ಹೀಗೆ ಹಲವಾರು ಸಂಘ-ಸಂಸ್ಥೆಗಳಿಂದಲೂ ಅಭಿನಂದನಾ ಪುರಸ್ಕಾರ ಲಭಿಸಿದೆ. ಅವರ ಸಾಹಿತ್ಯ ಕೆಲಸಗಳನ್ನು ಅವರ ಮಾತುಗಳಲ್ಲೇ ಹೀಗೆ ಹೇಳುತ್ತಾರೆ.

“ಮೊದ ಮೊದಲೆಲ್ಲ ನಮಗೆ ಕಾರ್ಯಕ್ರಮ ನೀಡಲು ಹಿಂದೇಟು ಹಾಕುತ್ತಿದ್ದ ಸಮಯದಲ್ಲಿ ಹತ್ತು ಹಲವು ವೇದಿಕೆ ಕಲ್ಪಿಸಿಕೊಟ್ಟವರು ಕಳಸದ ಶ್ರೀ ಆರ್.ಕೆ. ಬ್ರಹ್ಮದೇವರವರು” ನಮ್ಮಲ್ಲಿ ಧೈರ್ಯ ತುಂಬಿ ಆತ್ಮಸ್ಥೈರ್ಯ ತುಂಬಿದವರು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ದಂಪತಿಗಳು ನನ್ನ ಕಲೆಯನ್ನು ಮೆಚ್ಚಿ ತಮ್ಮಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಶ್ರೀ ಮೋಹನ್ ಆಳ್ವರವರು ತಮ್ಮ ವೇದಿಕೆಯಲ್ಲಿ ಸ್ಥಳ ಕಲ್ಪಿಸಿದ್ದು, ಇವೆಲ್ಲ ನನ್ನ ಕಲಾರಂಗದ ಹೆಜ್ಜೆ ಗುರುತುಗಳು.
ಇತ್ತೀಚೆಗೆ ಅನಿತಾ ಸುರೇಂದ್ರ ಕುಮಾರ್‍ರವರ ಕಲ್ಪನೆಯ ಜಿನಭಜನಾ ಸ್ಪರ್ಧೆ ನನ್ನ ಆಸಕ್ತಿಯ ಕ್ಷೇತ್ರಕ್ಕೆ ಒಳ್ಳೆಯ ವೇದಿಕೆಯಾಯ್ತು. ಪ್ರತೀ ಬಾರಿಯೂ ಅನೇಕ ತಂಡಗಳನ್ನು ರಚಿಸಿ ಅವರಲ್ಲಿನ ಪ್ರತಿಭೆ ಆಸಕ್ತಿಗಳನ್ನು ಸ್ವಲ್ಪ ಮಟ್ಟಿಗೆ ಹೊರತರುವ ಕೆಲಸ ಆಗುತ್ತಿದೆ. ನನ್ನ ಕಡೆಯಿಂದ ತರಬೇತಿ ಪಡೆದ ತಂಡಗಳು ವೇದಿಕೆಯಲ್ಲಿ ಹಾಡುತ್ತಿದ್ದರೆ ಸಿಗುವ ಆತ್ಮ ತೃಪ್ತಿ ನಾ ಹಾಡುವಾಗ ಸಿಗಲ್ಲ. ಮೂರು ವರ್ಷದಲ್ಲಿ ಹೆಚ್ಚಿನ ಬಾರಿ ನಾನು ರಚಿಸಿದ ಸಾಹಿತ್ಯ, ಜಿನಗೀತೆಗಳಿಗೆ ಬಹುಮಾನ ದೊರೆತಿದೆ. ಐದಾರು ತಂಡಗಳು ಫೈನಲ್ ವೇದಿಕೆಗೆ ಹೋಗಿವೆ. ಎರಡು ಬಾರಿ ಪ್ರಥಮ, ಎರಡು ಬಾರಿ ದ್ವಿತೀಯ ಸ್ಥಾನ ಗಳಿಸಿದಾಗ ಹೆಮ್ಮೆಯೆನಿಸಿದೆ. ಈ ಸಾರಿ 18 ತಂಡಗಳು ನನ್ನ ತರಬೇತಿಯಲ್ಲಿ ಒಳಗೊಂಡಿದೆ.
ಹೊಸ ಹೊಸ ಪರಿಕಲ್ಪನೆಗಳನ್ನು ಮಾಡುತ್ತಾ ನಮ್ಮಲ್ಲಿ ಪ್ರೋತ್ಸಾಹ ನೀಡುವಲ್ಲಿ ಎನ್.ಆರ್. ಪುರ ಶ್ರೀಗಳು ಪ್ರಮುಖರು. ತಾವೇ ಎಲ್ಲಾ ಜವಾಬ್ದಾರಿ ತೆಗೆದುಕೊಂಡು ನಮ್ಮಿಂದ 3 ಸಿ.ಡಿ ಮಾಡಿಸಿಕೊಂಡು ಬಿಡುಗಡೆ ಮಾಡಿಸಿದರು. ವರ್ಷದಲ್ಲಿ 15 ರಿಂದ 20 ಕಾರ್ಯಕ್ರಮಗಳನ್ನು ತಮ್ಮ ಕ್ಷೇತ್ರದಲ್ಲಿ ನಮ್ಮಿಂದ ನಡೆಸುತ್ತಾರೆ. ಬೆಳಕಿನ ದಾರಿಯನ್ನು ತೋರಿಸಿದ ಮಹಾನ್ ಶಕ್ತಿ ಅವರು. ಶ್ರವಣಬೆಳಗೊಳಕ್ಕೂ ನಮ್ಮ ಪರಿಚಯ ಮಾಡಿಸಿ, ಶ್ರೀ ಗಳಿಂದ ಮೆಚ್ಚುಗೆಯಾಗುವಂತೆ ಕಾರ್ಯಕ್ರಮ ಕೊಡಿಸಿದ್ದಾರೆ. ಬೃಹತ್ ಸಿದ್ಧಚಕ್ರಾರಾಧನೆಯನ್ನು ಈ ಕ್ಷೇತ್ರದಲ್ಲಿ ನಮ್ಮ ಸಂಗೀತದಲ್ಲೇ ನಡೆಸಲು ಅವಕಾಶ ಕೊಟ್ಟಾಗ ಬಹಳ ಖುಷಿ ಆಯಿತು. ಬೆಳ್ಳೂರಿನಲ್ಲಿ ನಡೆದ ಬೃಹತ್ ಇಂದ್ರಧ್ವಜ ಆರಾಧನೆಯಲ್ಲಿ ನಮಗೂ ಅವಕಾಶ ಕೊಡಿಸಿದ್ದಾರೆ.
ಮುಂಬೈ ನಗರಿಯಲ್ಲಿ ಕರ್ನಾಟಕ ಜೈನ ಸಮುದಾಯದವರು ಬೃಹತ್ ಭಕ್ತಾಮರ ಆರಾಧನೆಯನ್ನು ನಡೆಸಿದಾಗ ನಮಗೆ ಅವಕಾಶ ಕೊಟ್ಟಿದ್ದರು. ದಕ್ಷಿಣ ಕನ್ನಡದ ಜೈನ ಸಮಾಜದವರು ನಮ್ಮನ್ನು ಬೆಳೆಸಿದವರು. ನೂರಾರು ಕಾರ್ಯಕ್ರಮಗಳು ದಕ್ಷಿಣ ಕನ್ನಡ ಭಾಗದಲ್ಲೇ ನಡೆದಿದೆ. 8-10 ದಿನಗಳ ಕಾಲ ದಿನದಲ್ಲಿ 7-8 ಗಂಟೆ ನಿರಂತವಾಗಿ ಹಾಡುವ ಶಕ್ತಿಯನ್ನು ದೇವರು ಕರುಣಿಸಿದ್ದಾನೆ. ಈ ಭಾಗದ ಜೈನ ಸಮಾಜಕ್ಕೆ ಯಾವುದೇ ಪಂಚಕಲ್ಯಾಣ ಮಸ್ತಕಾಭಿಷೇಕ, ಆರಾಧನೆ, ವಿಧಾನಗಳಿರಲಿ ಉತ್ತರದಿಂದ ಬಂದ ಸಂಗೀತದವರು ಗುರುಗಳು ಪುರೋಹಿತ ವರ್ಗದವರು ಸೇರಿ ನಡೆಸುತ್ತಿದ್ದರು. ಈಚೆಗೆ ಇವೆಲ್ಲ ಕಾರ್ಯಕ್ರಮಗಳಲ್ಲಿ ನಮಗೂ ಹಾಡಲು ಸಿಗುತ್ತಿರುವುದು ಖುಷಿಯ ಸಂಗತಿ. ಹೆಚ್ಚಿನ ಕಾರ್ಯಕ್ರಮಗಳನ್ನು ಸೇವೆಯಾಗಿಯೇ ಮಾಡುವುದು ನಮಗೆ ದೊರೆತ ಪುಣ್ಯ ಸುಯೋಗ. ನಮ್ಮನ್ನು ಟಿ.ವಿ. ಪರದೆಯಲ್ಲಿ ಬರಲು ಕಾರಣರಾದ ಮಕ್ಕಿಮನೆ ಕಲಾವೃಂದ, ಸುಧೇಶ್ ಜೈನ್ ಮಕ್ಕಿಮನೆ, ವೈಶಾಲಿ, ಜ್ವಾಲಾಮಾಲಾ ನ್ಯೂಸ್‍ರವರಿಗೆ ಮನತುಂಬಿದ ಧನ್ಯವಾದಗಳು. ಒಟ್ಟಿನಲ್ಲಿ ನಮ್ಮನ್ನು ಬೆಳೆಸಿದ ಎಲ್ಲಾ
ಸಂಗೀತ ಪ್ರಿಯರಿಗೆ ಅನಂತ ಕೃತಜ್ಞತೆಗಳು”.
ಜಯಶ್ರೀ ಧರಣೀಂದ್ರ ಸದಾ ಹಸನ್ಮುಖಿ. ಪ್ರತಿಭಾನ್ವಿತರಲ್ಲಿ ಸಣ್ಣ ಮಟ್ಟದ ಪ್ರತಿಭೆ ಕಂಡರೂ ಅದನ್ನು ಬೆಂಬಲಿಸಿ ಪ್ರೋತ್ಸಾಹಿಸಿ ಅವರ ಸಂಗೀತ ಪ್ರತಿಭೆಯನ್ನು ಗುರುತಿಸಿ ಅವರಿಗೆ ಶ್ರೇಷ್ಠ ಮಟ್ಟದ ತರಬೇತಿ ಕೊಟ್ಟು ಮಾನಸಿಕವಾಗಿಯೂ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಯಾವ ಕಾರ್ಯಕ್ರಮವಿದ್ದರೂ ಸಹ ಎಡೆಬಿಡದೆ ನಿರಂತರವಾಗಿ ತಮ್ಮನ್ನು ತಾವೇ ಮರೆತು ಹಾಡುತ್ತಾ ಪ್ರತಿಯೊಬ್ಬ ಯುವ ಸಂಗೀತಗಾರರಿಗೂ ಸ್ಪೂರ್ತಿಯಾಗಿದ್ದಾರೆ. ಪ್ರಶಸ್ತಿ ಸನ್ಮಾನ, ಬಿರುದುಗಳೆಂದರೆ ಅತ್ಯಂತ ದೂರ ಉಳಿಯುವ ಜಯಶ್ರೀಯವರ ಅದ್ಭುತ ಸಂಗೀತ ಪ್ರತಿಭೆ ಅಂತರಾಷ್ಟ್ರೀಯ ಮಟ್ಟದಲ್ಲೂ ಬೆಳಗಲಿ ಎಂದು ಹಾರೈಸುತ್ತಿದ್ದೇವೆ.